ಹುಬ್ಬಳ್ಳಿ: ಕೈಗಾರಿಕೆ ಉತ್ಪಾದನಾ ಕ್ಷೇತ್ರದಲ್ಲಿ ಸ್ಕಿಲ್, ಸ್ಕೇಲ್ ಮತ್ತು ಸ್ಪೀಡ್ ಇಂದಿನ ತುರ್ತು ಅಗತ್ಯವಾಗಿದ್ದು, ಅದನ್ನು ಮೈಗೂಡಿಸಿಕೊಂಡಲ್ಲಿ ಭಾರತ ಸಮಗ್ರ ಅಭಿವೃದ್ಧಿಯ ಜತೆಗೆ ಮತ್ತಷ್ಟು ಆರ್ಥಿಕ ಬಲಿಷ್ಠ ರಾಷ್ಟ್ರವಾಗಲಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಇಲ್ಲಿನ ಗೋಕುಲ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ನಡೆದ ಕರ್ನಾಟಕ ಮಟೇರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ (ಕೆಎಂಟಿಆರ್‌ಸಿ)ನ ನೂತನ ಜಿ-೪, ಜಿ-೫ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ಮಟೇರಿಯಲ್ ಟೆಸ್ಟಿಂಗ್ ಆ್ಯಂಡ್ ರಿಸರ್ಚ್ ಸೆಂಟರ್ ವತಿಯಿಂದ ನೀಡಲಾಗುವ ಪ್ರಮಾಣ ಪತ್ರದ ಬಗ್ಗೆ ಮಾರ್ಕೆಟಿಂಗ್ ಮಾಡುವ ಅವಶ್ಯಕತೆ ಇದೆ. ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಿ, ಗುಣಮಟ್ಟದ ವಸ್ತುಗಳ ಉತ್ಪಾದನೆಗೆ ಕೈಜೋಡಿಸಬೇಕು ಎಂದರು.
ಕರ್ನಾಟಕ ಮಟೇರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್‌ನ ನೂತನ ಕಟ್ಟಡ ನಿರ್ಮಾಣಕ್ಕೆ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಶ್ರಮ ಅಪಾರವಾಗಿದೆ. ಕಟ್ಟಡಕ್ಕೆ ಅಗತ್ಯವಾದ ₹೪ ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ಘೋಷಣೆ ಮಾಡಿದೆ. ಆದರೆ, ಬಾಕಿ ಉಳಿದಿರುವ ₹೨ ಕೋಟಿ ಅನುದಾನವನ್ನು ಇಂದಿನ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ. ಈ ಕುರಿತು ರಾಜ್ಯ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಗಮನಕ್ಕೆ ತಂದು ಅನುದಾನ ಬಿಡುಗಡೆಗೆ ಒತ್ತಾಯಿಸಲಾಗುವುದು ಎಂದರು.ಶೇ. ೧೦೦ ಆಟಿಕೆ ವಸ್ತುಗಳನ್ನು (ಟಾಯ್ಸ್) ಮತ್ತು ಮೊಬೈಲ್‌ನ ಬಿಡಿಭಾಗ ಸೇರಿದಂತೆ ಅನೇಕ ವಸ್ತುಗಳನ್ನು ಭಾರತದಿಂದ ವಿವಿಧ ದೇಶಕ್ಕೆ ರಪ್ತು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಮುಂಬರುವ ದಿನಗಳಲ್ಲಿ ಭಾರತ ಮ್ಯಾನಿಫ್ಯಾಕ್ಚರಿಂಗ್ ಹಬ್ ಆಗಿ ಬೆಳೆಯಲಿದೆ. ಮುಂಬರುವ ದಿನಗಳಲ್ಲಿ ಭಾರತ ಮೂರನೇ ಆರ್ಥಿಕ ಬಲಿಷ್ಠ ರಾಷ್ಟ್ರವಾಗಲಿದೆ ಎಂದು ಪ್ರಧಾನಿ ಮೋದಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಉತ್ತರ ಕರ್ನಾಟಕದ ಕೈಗಾರಿಕಾಭಿವೃದ್ಧಿಯಲ್ಲಿ ಹು-ಧಾ ಕೈಗಾರಿಕೋದ್ಯಮಿಗಳ ಪಾತ್ರ ಅಧಿಕವಿದೆ. ಹುಬ್ಬಳ್ಳಿಯಲ್ಲಿ ಮಟೀರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ ಸ್ಥಾಪನೆಯಾಗಿರುವುದು ಹೆಮ್ಮೆ. ಸತತ ಪ್ರಯತ್ನದ ಫಲವಾಗಿ ಇಂತಹ ಸಂಸ್ಥೆ ಕಟ್ಟಲು ಸಾಧ್ಯವಾಗಿದೆ. ಚೀನಾದಲ್ಲಿ ಟೆಸ್ಟಿಂಗ್ ಲ್ಯಾಬ್ ಹೆಚ್ಚಿವೆ. ಲ್ಯಾಬ್‌ಗಳು ಉದ್ಯಮ ಸ್ಥಾಪನೆಗೆ ಸಹಕಾರಿ. ಸಣ್ಣ ಸೌಲಭ್ಯದಲ್ಲಿ ನಮ್ಮ ಕೈಗಾರಿಕೋದ್ಯಮಿಗಳು ಬಹಳ ಅದ್ಭುತ ಸಾಧನೆ ಮಾಡಿದ್ದು, ವಿಶ್ವಮಟ್ಟದ ಉತ್ಪನ್ನಗಳನ್ನು ನೀಡಿದ್ದಾರೆ ಎಂದರು.ಹು-ಧಾ ಅವಳಿ ನಗರದ ಕೈಗಾರಿಕೋದ್ಯಮಕ್ಕೆ ಭವಿಷ್ಯದಲ್ಲಿ ಬಹಳ ದೊಡ್ಡ ಅವಕಾಶಗಳಿವೆ. ಅವಳಿ ನಗರದ ಸಿಸಿ ರಸ್ತೆಯ ನಿರ್ಮಾಣಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸಿಎಸ್‌ಆರ್ ಫಂಡ್‌ನಿಂದ ಸುಮಾರು ₹೭೦೦ ಕೋಟಿ ಅನುದಾನ ಒದಗಿಸಿದ್ದಾರೆ. ವಿಮಾನ ನಿಲ್ದಾಣ, ಐಐಟಿ, ಐಐಐಟಿ, ರೈಲ್ವೇ ನಿಲ್ದಾಣ ಅಭಿವೃದ್ಧಿಯಲ್ಲಿ ಜೋಶಿ, ಶೆಟ್ಟರ್ ಪಾತ್ರ ಹಿರಿದಾಗಿದೆ ಎಂದರು.
ಇದೇ ವೇಳೆ ಸಂಸ್ಥೆಯಿಂದ ಎನ್‌ಎಬಿಎಲ್ ಪ್ರಮಾಣ ಪತ್ರವನ್ನು ಗಣ್ಯರು ಬಿಡುಗಡೆ ಮಾಡಿದರು. ನಂತರ ಸಂಸ್ಥೆಯ ಮಾಜಿ ಹಾಗೂ ಹಾಲಿ ಅಧ್ಯಕ್ಷ ಮತ್ತು ಪದಾಕಾರಿಗಳನ್ನು ಸನ್ಮಾನಿಸಲಾಯಿತು. ಕರ್ನಾಟಕ ಮಟೇರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್‌ನ ಅಧ್ಯಕ್ಷ ಎಂ.ಕೆ. ಪಾಟೀಲ್, ಕೇಂದ್ರ ಸರ್ಕಾರದಿಂದ ₹೨೦ ಕೋಟಿ ಅನುದಾನ ಕೊಡಿಸುವಂತೆ ಕೇಂದ್ರ ಸಚಿವ ಜೋಶಿಯವರಿಗೆ ಮನವಿ ಸಲ್ಲಿಸಿದರು.ಎಸ್.ಪಿ. ಸಂಶಿಮಠ, ಗಿರೀಶ ನಲವಡಿ, ನಾಗರಾಜ ಆರ್. ದಿವಟೆ, ನಿಂಗಣ್ಣ ಬಿರಾದಾರ, ಜಯಪ್ರಕಾಶ ಟೆಂಗಿನಕಾಯಿ, ಮಲ್ಲೇಶ್ ಜಾಡರ, ಶಿವರಾಮ ಹೆಗಡೆ, ನರೇಂದ್ರ ಕುಲಕರ್ಣಿ ಇದ್ದರು.