ಗಗನಕ್ಕೇರಿದ ಹೂ, ಹಣ್ಣು ಬೆಲೆ ಗ್ರಾಹಕರಿಗೆ ಶಾಕ್

KannadaprabhaNewsNetwork | Published : Aug 15, 2024 1:57 AM

ಸಾರಾಂಶ

ಈಗಾಗಲೇ ಶ್ರಾವಣ ಮಾಸ ಆರಂಭವಾಗಿದ್ದು, ಸಾಲು ಸಾಲು ಹಬ್ಬಗಳು ಬರುತ್ತಿವೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಹೂವಿನ ಬೆಲೆ ಗಗನ ಮುಟ್ಟಿದೆ. ಹಣ್ಣುಗಳು ಹಾಗೂ ಇತರೆ ಸಾಮಗ್ರಿಗಳ ದರವೂ ತೀವ್ರ ಏರಿಕೆ ಕಂಡಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಈಗಾಗಲೇ ಶ್ರಾವಣ ಮಾಸ ಆರಂಭವಾಗಿದ್ದು, ಸಾಲು ಸಾಲು ಹಬ್ಬಗಳು ಬರುತ್ತಿವೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಹೂವಿನ ಬೆಲೆ ಗಗನ ಮುಟ್ಟಿದೆ. ಹಣ್ಣುಗಳು ಹಾಗೂ ಇತರೆ ಸಾಮಗ್ರಿಗಳ ದರವೂ ತೀವ್ರ ಏರಿಕೆ ಕಂಡಿದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ಈಗಾಗಲೇ ಖರೀದಿ ಜೋರಾಗಿದ್ದು, ನಗರದ ಎಪಿಎಂಸಿ ಮಾರುಕಟ್ಟೆ, ಟೌನ್ ಹಾಲ್ ಸರ್ಕಲ್, ಎಂಜಿ ರಸ್ತೆ, ಬಜಾರ್ ರಸ್ತೆ, ಬಿ.ಬಿ.ರಸ್ತೆ ಹಾಗೂ ಹೊರವಲಯದ ಕೆ.ವಿ.ಕ್ಯಾಂಪಸ್, ಹೂ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು. ಬುಧವಾರ ಸೇವಂತಿಗೆ ಹೂವು ಒಂದು ಕೆಜಿಗೆ 300 ರು. ರಿಂದ 400 ರು.ವರೆಗೆ ಮಾರಾಟವಾಗಿದೆ. ವರಮಹಾಲಕ್ಷ್ಮೀ ಹಬ್ಬ ಸಮೀಪಿಸುತ್ತಿದ್ದಂತೆ ಹೂವಿನ ಬೆಲೆ ಮತ್ತಷ್ಟು ಜಾಸ್ತಿಯಾಗಬಹುದು.

ವಾರದ ಹಿಂದೆ ಮಲ್ಲಿಗೆ ಮೊಗ್ಗು ಕೆಜಿಗೆ 150- 200 ರು. ಇದ್ದು, ಬುಧವಾರ ಒಂದು ಕೆ.ಜಿ. ಮಲ್ಲಿಗೆ ಹೂವು 1000 ರು. ದಾಟಿತ್ತು. 400- 500 ರು. ಇದ್ದ ಕನಕಾಂಬರ ಹೂವು 1400-2000 ರು., ಮಳ್ಳೆ ಹೂ ಕೆಜಿಗೆ 1000-1200 ರು.ಗೆ ತಲುಪಿದೆ. ಮಳೆ ಹೆಚ್ಚಾಗಿರುವುದರಿಂದ ತಾವರೆ ಹೂವಿಗೆ ಕೊರತೆಯಿಲ್ಲ. ಬೆಲೆಯೂ ಕಡಿಮೆಯಾಗಬೇಕಿತ್ತು. ಆದರೆ ಕಡಿಮೆ ಇಲ್ಲ. ಲಕ್ಷ್ಮೀ ಹಬ್ಬಕ್ಕೆ ತಾವರೆ ಹಾಗೂ ಕೇದಗೆ ಬಹುಮುಖ್ಯವಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಒಂದು ತಾವರೆ ಹೂವಿನ ಬೆಲೆ 30- 50 ರು. ಹಾಗೂ ಕೇದಿಗೆ ರು.70- 120 ಮೀರಿದೆ.

ಒಂದು ಕೆಜಿ ಗುಲಾಬಿಗೆ 180 ರಿಂದ 250 ರು., ಕಾಕಡ ಕೆಜಿಗೆ 900 ರಿಂದ 1100 ರು., ಕೇವಲ 5-10 ರು.ಗೆ ಸಿಗುತ್ತಿದ್ದ ಚೆಂಡು ಹೂವು ಈಗ ಕೆಜಿಗೆ 30- 60 ರು.ಗೆ ತಲುಪಿದೆ. ಕಮಗಗ್ಗರಿ ಸೇರಿ ಸುವಾಸನಾ ಭರಿತ ಗಿಡಗಳಿಗೆ 100-150 ರು., ಪತ್ರೆ ಕೆಜಿಗೆ 80 ರು.ಗಳಿಗೆ ಮಾರಾಟವಾದವು.

ಕೆಲವೆಡೆ ಮಳೆ ಹೆಚ್ಚಾದ್ದರಿಂದ, ಇನ್ನು ಕೆಲವೆಡೆ ಮಳೆಯೇ ಇಲ್ಲದಿರುವುದರಿಂದ ಹೂವಿನ ಫಸಲು ಕಡಿಮೆಯಾಗಿದೆ. ತಮಿಳುನಾಡಿನಿಂದ ಮಲ್ಲಿಗೆ, ಮಳ್ಳೆ ಮತ್ತಿತರ ಹೂವುಗಳು ಬರುತ್ತವೆ. ರೋಸ್ ಮತ್ತಿತರ ಹೂವುಗಳು ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಭಾಗಗಳಿಂದ ಬರುತ್ತವೆ. ಹಬ್ಬದ ಹಿನ್ನೆಲೆಯಲ್ಲಿ ಪಕ್ಕದ ಆಂಧ್ರ ಪ್ರದೇಶ, ತೆಲಾಂಗಾಣ, ತಮಿಳುನಾಡು ಕಡೆಗಳಿಂದ ಮಾರಾಟಗಾರರು ಹೂಗಳನ್ನು ಖರೀದಿಸಲು ಬರುತ್ತಿರುವುದರಿಂದ ಮೂರು- ನಾಲ್ಕು ದಿನದಿಂದೀಚೆಗೆ ಬೆಲೆಗಳು ಹೆಚ್ಚಾಗಿವೆ. ಹಬ್ಬಕ್ಕೆ ಇನ್ನಷ್ಟು ಏರಿಕೆಯಾಗಲಿವೆ ಎಂದು ಮಾರಾಟಗಾರ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಹಣ್ಣುಗಳ ಬೆಲೆಯೂ ಭಾರೀ ಏರಿಕೆ: ಸೇಬು ಕೆಜಿಗೆ 200 ರಿಂದ 250 ರು., ಮರಸೇಬು ಕೆಜಿಗೆ 100- 150 ರು., ಸಪೋಟ ಕೆಜಿಗೆ 160 ರು., ಪೈನಾಪಲ್ ಕೆಜಿಗೆ 20 ರಿಂದ 70 ರು., ಸೀಬೆ ಕೆಜಿಗೆ 60-80ರು., ಮೂಸಂಬಿ ಕೆಜಿಗೆ 70- 90 ರು. ದಾಟಿದೆ. ಏಲಕ್ಕಿ ಬಾಳೆ ಕೆಜಿಗೆ 100- 150 ರು., ಪಚ್ಚಬಾಳೆ 40- 60 ರು.ಗೆ ಏರಿದೆ. ದಾಳಿಂಬೆ 100- 150 ರು., ಕಪ್ಪು ದ್ರಾಕ್ಷಿ ಕೆಜಿಗೆ 150 ರು.ಗೆ ಹೆಚ್ಚಾಗಿದೆ. ತೆಂಗಿನ ಕಾಯಿ ಒಂದಕ್ಕೆ 15- 30 ರು. ಗಡಿ ದಾಟಿದೆ.

ಹಬ್ಬಕ್ಕೆ ಮುಂಚಿತವಾಗಿಯೇ ನಗರದಲ್ಲಿ ಪೈನಾಪಲ್, ಸಪೋಟ ಹಣ್ಣುಗಳ ಸಂಗ್ರಹ ಜೋರಾಗಿತ್ತು. ಸಾರ್ವಜನಿಕರು ಎಪಿಎಂಸಿ ಮಾರುಕಟ್ಟೆ, ಟೌನ್ ಹಾಲ್ ಸರ್ಕಲ್, ಎಂಜಿ ರಸ್ತೆ, ಬಜಾರ್ ರಸ್ತೆ, ಬಿ.ಬಿ.ರಸ್ತೆ ಹಾಗೂ ಹೊರವಲಯದ ಕೆ.ವಿ.ಕ್ಯಾಂಪಸ್ ಹೂ ಮಾರುಕಟ್ಟೆಗಳಲ್ಲಿ ಸೇರಿದಂತೆ ವಿವಿಧೆಡೆ ಹಣ್ಣು, ಹೂವು ಖರೀದಿಯಲ್ಲಿ ತೊಡಗಿಸಿಕೊಂಡಿರುವ ದೃಶ್ಯಗಳು ಕಂಡು ಬಂದವು. ಹಬ್ಬ ಸಮೀಪಿಸುತ್ತಿದ್ದಂತೆ ಬೆಲೆ ಏರಿಕೆಯಾಗಬಹುದು ಎಂಬ ಆತಂಕದಿಂದ ಮುಂಚಿತವಾಗಿ ಅಗತ್ಯ ಸಾಮಗ್ರಿ ಖರೀದಿಗೆ ಜನರು ಮುಂದಾಗಿದ್ದಾರೆ.

ಹಬ್ಬದ ಹಿಂದಿನ ದಿನ ಬೆಲೆಗಳು ಜಾಸ್ತಿಯಾಗುತ್ತಿರುವುದು ಮಾಮೂಲು. ಮಾರುಕಟ್ಟೆಯಲ್ಲಿ ಅಂದು ವಿಪರೀತ ಜನಜಂಗುಳಿಯಿರುತ್ತದೆ ಎಂದು ಮುಂಚಿತವಾಗಿಯೇ ಖರೀದಿಗೆ ಬಂದೆವು. ಆದರೆ, ಬೆಲೆಗಳು ಕಡಿಮೆಯೇನಿಲ್ಲ. ತುಂಬಾ ದುಬಾರಿ. ಕನಕಾಂಬರ 100 ಗ್ರಾಂ ಹೂವಿಗೆ 200 ರು. ಕೊಟ್ಟೆವು. ತಾವರೆ ಹೂವು ಸಣ್ಣ ಮೊಗ್ಗಿಗೂ 50 ರು. ಕೇಳುತ್ತಿದ್ದಾರೆ. ಈ ದುಬಾರಿ ಬೆಲೆಗಳಲ್ಲಿ ಹಬ್ಬಗಳು ಯಾಕಾದರೂ ಬರುತ್ತವೆಯೋ ಅನಿಸುತ್ತದೆ.

ಸುಷ್ಮಾ, ಮಂಜುಳ, ನಿರ್ಮಲ, ಗ್ರಾಹಕರು

Share this article