ಹುಬ್ಬಳ್ಳಿ:
ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಪ್ರಕರಣ ತಮ್ಮ ಬುಡಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಯಾಂತರ ಮಾಡಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಹುಲ್ ಗಾಂಧಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಈ ಸೇಡು ತೀರಿಸಿಕೊಳ್ಳಲು 80 ವರ್ಷದ ಬಿ.ಎಸ್. ಯಡಿಯೂರಪ್ಪ ವಿರುದ್ಧ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಆ ಮೂಲಕ ರಾಜ್ಯಕಂಡ ಜನಪ್ರಿಯ ನಾಯಕರ ವಿರುದ್ಧ ಆರೋಪ ಹೊರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದರು.
ಗ್ಯಾರಂಟಿ ಯೋಜನೆ ಮುಂದುವರಿಸುವ ಬಗ್ಗೆ ನಡೆಯುತ್ತಿರುವ ಚರ್ಚೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ನಲ್ಲಿ ಆಂತರಿಕ ಬೇಗುದಿ ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಆ ಪಕ್ಷದ ನಾಯಕರ ಹೇಳಿಕೆಗಳೇ ಸಾಕ್ಷಿ. ಈ ಗ್ಯಾರಂಟಿಗಳು ಬಹಳಷ್ಟು ಜನರಿಗೆ ತಲುಪಿಲ್ಲ, ಚುನಾವಣೆಗಾಗಿಯೇ ಗ್ಯಾರಂಟಿಗಳನ್ನು ತಂದಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದರು.ನಟ ದರ್ಶನ ಪ್ರಕರಣ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಪ್ರಕರಣದಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೇ ಸಮಗ್ರ ತನಿಖೆ ನಡೆಸಬೇಕು. ಅಪರಾಧಿಗಳಿಗೆ ಶಿಕ್ಷೆ ಆಗಬೇಕು. ಕಾಂಗ್ರೆಸ್‌ನ ಕೆಲ ಸಚಿವರು, ಶಾಸಕರು ತನಿಖೆ ಹಾಗೂ ವಿಚಾರಣೆ ಪೂರ್ವದಲ್ಲೇ ಅವರನ್ನು ಮುಕ್ತಗೊಳಿಸಲು ಸಂಚು ರೂಪಿಸುತ್ತಿದ್ದಾರೆ. ಇದು ಸರಿಯಲ್ಲ. ಆದ್ದರಿಂದ ಪೊಲೀಸರು ಯಾವ ಒತ್ತಡಕ್ಕೂ ಮಣಿಯದೇ ಸೂಕ್ತ ತನಿಖೆ ನಡೆಸಬೇಕು ಎಂದರು.
ಎಲ್ನೀನೋ ಪರಿಣಾಮ ಭಾರತದ ಮೇಲೆ ಕಡಿಮೆ:ಎಲ್ನೀನೋ ಚಂಡ ಮಾರುತದ ಪರಿಣಾಮವಾಗಿ ಜಗತ್ತಿನ ಎಲ್ಲೆಡೆ ಬರಗಾಲ, ಅತಿವೃಷ್ಟಿ ಉಂಟಾಗಿ ಆಹಾರದ ಕೊರತೆ ಉಂಟಾಗಿದೆ. ಆದರೆ ನಮ್ಮ ದೇಶದಲ್ಲಿ ಇದರ ಪರಿಣಾಮ ಕಡಿಮೆ ಎಂದು ಜೋಶಿ ತಿಳಿಸಿದರು.
ಈ ಹಿಂದೆ ಕೊರೋನಾ, ಯುದ್ಧಗಳು, ಸದ್ಯ ಎಲ್ನೀನೋ ಪರಿಣಾಮವಾಗಿ ಜಗತ್ತಿನಲ್ಲಿ ಸಂಕಷ್ಟ ಎದುರಾಗಿದೆ. ಇದೆಲ್ಲದರ ಸಂಪೂರ್ಣ ಅಧ್ಯಯನ ಮಾಡಿ ಅಕ್ಕಿ ವಿತರಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.ಸೋಲಾರ ಇಂಧನ ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಮೊದಲು 76 ಮೆಗಾವ್ಯಾಟ್ ಉತ್ಪಾದನೆ ಆಗುತ್ತಿತ್ತು. ಈಗ 293 ಮೆಗಾ ವ್ಯಾಟ್ ಉತ್ಪಾದನೆ ಆಗುತ್ತಿದೆ. ಈ ನಿಟ್ಟಿನಲ್ಲಿ ಸೋಲಾರ ಇಂಧನ ಉತ್ಪಾದನೆಗೆ ಕೇಂದ್ರ ಸರಕಾರ ಸಬ್ಸಿಡಿ ಸೇರಿ ಬೇರೆ ಬೇರೆ ಕಾರ್ಯಕ್ಕೆ ರಿಯಾಯಿತಿ ನೀಡುತ್ತಿದೆ. ಈ ಎಲ್ಲ ಯೋಜನೆಗಳನ್ನು ಕರ್ನಾಟಕಕ್ಕೆ ಆದ್ಯತೆ ಮೇರೆಗೆ ತರಲು ಪ್ರಯತ್ನಿಸಲಾಗುವುದು. ಈ ಸಂಬಂಧ ಈಗಾಗಲೇ ರಾಜ್ಯ ಇಂಧನ ಸಚಿವರು ಕೂಡ ಸಂಪರ್ಕಿಸಿದ್ದು, ಯೋಜನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದರು.
ಖಾತೆ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿ, ಸಣ್ಣ ಖಾತೆ, ದೊಡ್ಡ ಖಾತೆ ಎಂಬುದು ಇಲ್ಲ, ಈ ಖಾತೆಯೂ ಮಹತ್ವದ್ದಾಗಿದೆ ಎಂದು ಹೇಳಿದರು.ಈ ವೇಳೆ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ ಸೇರಿದಂತೆ ಇತರರು ಇದ್ದರು.