ಮನೆಗಳ ಕಾಮಗಾರಿ ಕಳಪೆ ಆರೋಪ

KannadaprabhaNewsNetwork |  
Published : Feb 20, 2024, 01:52 AM IST
7 | Kannada Prabha

ಸಾರಾಂಶ

ಹೊಸ ಮನೆಗಳನ್ನು ಕಟ್ಟಿಕೊಡುವುದಾಗಿ ಹೇಳಿ ನಮ್ಮ ಹಳೆಯ ಮನೆಗಳನ್ನು ಕೆಡೆವಿ ಒಂದೂವರೆ ವರ್ಷವಾಗಿದೆ. ಇಲ್ಲಿಯ ತನಕವೂ ಕಾಮಗಾರಿ ಮುಗಿಸಿಲ್ಲ. ಅಲ್ಲದೆ, ಕಾಮಗಾರಿ ತೀರ ಕಳಪೆಯಾಗಿದೆ. ಗುಣಮಟ್ಟದ ಸಿಮೆಂಟ್ ಬಳಸುತ್ತಿಲ್ಲ. ನಾವೆಲ್ಲ ಈ ಮನೆಗಳನ್ನು ನಂಬಿಕೊಂಡು ಬೀದಿ ಪಾಲಾಗಿದ್ದೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.4 ರಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ನಡೆಯುತ್ತಿರುವ 60 ಮನೆಗಳ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೂಡಲೇ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಬುದ್ಧ ಭೀಮ ಬ್ರಿಗೇಡ್ ಸಂಘದವರು ನಗರದ ಹೈವೇ ವೃತ್ತದ ಬಳಿಯ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಹೊಸ ಮನೆಗಳನ್ನು ಕಟ್ಟಿಕೊಡುವುದಾಗಿ ಹೇಳಿ ನಮ್ಮ ಹಳೆಯ ಮನೆಗಳನ್ನು ಕೆಡೆವಿ ಒಂದೂವರೆ ವರ್ಷವಾಗಿದೆ. ಇಲ್ಲಿಯ ತನಕವೂ ಕಾಮಗಾರಿ ಮುಗಿಸಿಲ್ಲ. ಅಲ್ಲದೆ, ಕಾಮಗಾರಿ ತೀರ ಕಳಪೆಯಾಗಿದೆ. ಗುಣಮಟ್ಟದ ಸಿಮೆಂಟ್ ಬಳಸುತ್ತಿಲ್ಲ. ನಾವೆಲ್ಲ ಈ ಮನೆಗಳನ್ನು ನಂಬಿಕೊಂಡು ಬೀದಿ ಪಾಲಾಗಿದ್ದೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರಾಜ್ಯ ಆದಿ ದ್ರಾವಿಡ ಪೌರಕಾರ್ಮಿಕ ಯುವಕರ ಅಭಿವೃದ್ಧಿ ಮಹಾಸಂಘದ ಗೌರವ ಕಾರ್ಯದರ್ಶಿ ಕೆ. ನಂಜಪ್ಪ ಬಸವನಗುಡಿ ಮಾತನಾಡಿ, ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಒಂದು ವರ್ಷದ ಹಿಂದೆ ಹೆಬ್ಬಾಳ್ ಕಾಲೋನಿ ಸೇರಿದಂತೆ ವಿವಿಧ ಕಡೆಗಳಲ್ಲಿ 500 ಹೆಚ್ಚು ಮನೆಗಳನ್ನು ಕಟ್ಟಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಹೆಬ್ಬಾಳ್ ಕಾಲೋನಿಯಲ್ಲಿ ಕಟ್ಟುತ್ತಿರುವ 60 ಮನೆಗಳ ಕಾಮಗಾರಿ ತೀರ ಕಳಪೆಯಾಗಿದೆ ಎಂದರು.

ಅಧಿಕಾರಿಗಳು ಯಾವುದೇ ಗುಣಮಟ್ಟವನ್ನು ಪರಿಶೀಲಿಸದೆ ಕಾಮಗಾರಿ ನಡೆಸುತ್ತಿದ್ದಾರೆ. ಅಧಿಕಾರಿಗಳು ಗುತ್ತಿಗೆದಾರರ ಜತೆ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡಿದೆ. ಬಿಹಾರ ಮೂಲಕ ದಿನಗೂಲಿ ನೌಕರರಿಗೂ ಗುತ್ತಿಗೆದಾರ ಕೂಲಿ ನೀಡದೆ ವಂಚಿಸಿದ್ದಾರೆ. ದಿನಗೂಲಿ ನೌಕರರು ಊಟವಿಲ್ಲದೆ ಪರದಾಡುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಗುತ್ತಿಗೆದಾರರಾದರನ್ನು ಸ್ಥಳಕ್ಕೆ ಕರೆಸಿ ದಿನಗೂಲಿ ನೌಕರರ ವೇತನ ಚುಕ್ತಾ ಮಾಡಬೇಕು. ಗುಣಮಟ್ಟದ ಕಾಮಗಾರಿ ನಡೆಸಬೇಕು. ಇಲ್ಲದಿದ್ದಲ್ಲಿ ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಮತ್ತು ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಎದುರು ನಿರಂತರ ಪ್ರತಿಭಟಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಬಳಿಕ ಪ್ರತಿಭಟನಾಕಾರರು ಕೊಳೆಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎನ್. ರಾಮಚಂದ್ರ ಅವರಿಗೆ ಮನವಿ ಸಲ್ಲಿಸಿದರು.

ನಗರ ಪಾಲಿಕೆ ಮಾಜಿ ಸದಸ್ಯ ರಾಮು, ಪೌರಕಾರ್ಮಿಕರ ಸಂಘದ ಉನ್ನತ ಸಮಿತಿ ಕಾರ್ಯದರ್ಶಿ ಟಿ. ಶ್ರೀನಿವಾಸ್, ಆರ್. ಮಾರ, ಪಿ. ರವಿ, ಸುರೇಶ್, ಮಂಗಳಮ್ಮ, ಲಲಿತಾ, ಎಂ.ಬಿ. ವೆಂಕಟೇಶ್ ಮೊದಲಾದವರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ