ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿಅಚ್ಚರಿ ಎಂದರೆ ಕೋವಿಡ್ ಬಳಿಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಸರ್ಕಾರದಿಂದ ಅನುದಾನವೇ ಬಿಡುಗಡೆಯಾಗಿಲ್ಲ. ಹೀಗಾಗಿ ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯದ ಬಹುತೇಕ ಸ್ಲಂಗಳು ಮೂಲಭೂತ ಸೌಕರ್ಯಗಳಿಲ್ಲದೇ ನಲುಗುತ್ತಿವೆ.
ಕೊಳಗೇರಿ ಅಭಿವೃದ್ಧಿ, ಕೊಳಚೆ ಮುಕ್ತ ನಗರ ನಿರ್ಮಾಣಕ್ಕಾಗಿ ಸ್ಥಾಪನೆಯಾದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಗುರಿ, ಉದ್ದೇಶಗಳನ್ನು ಸಂಪೂರ್ಣವಾಗಿ ಮರೆತಂತೆ ಕಾಣುತ್ತಿದೆ ಎಂದು ಸ್ಲಂ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.ಬಹಳ ಜನ ಸ್ಲಂ ನಿವಾಸಿಗಳಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಇದೆಯೇ ಎಂಬುದು ತಿಳಿದಿಲ್ಲ. ಇದು ಅಚ್ಚರಿಯಾದರೂ ಸತ್ಯ. ಏಕೆಂದರೆ ಈ ಪ್ರದೇಶದ ನಿವಾಸಿಗಳು ಬಹುತೇಕ ಕಾರ್ಮಿಕರು. ಇವರಿಗೆ ದುಡಿಯುವುದು, ತಿನ್ನುವುದು ಹೊರತುಪಡಿಸಿ ಹೊರ ಜಗತ್ತಿನ ಹೆಚ್ಚಿನ ಜ್ಞಾನವೂ ಇಲ್ಲವಾಗಿರುತ್ತದೆ. ಬಹುತೇಕ ಸ್ಲಂಗಳ ಜನರ ಜೀವನ ಮಟ್ಟ ಸುಧಾರಣೆ ಆಗುತ್ತಿಲ್ಲ. ಹೀಗಾಗಿ ಹೊರ ಜಗತ್ತು ಆ ಪ್ರದೇಶ, ಅಲ್ಲಿನ ಜನರನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 136 ಘೋಷಿತ ಸ್ಲಂಗಳಿವೆ. 15 ಅಘೋಷಿತ ಪಟ್ಟಿಯಲ್ಲಿವೆ. ಜಿಲ್ಲೆಯಲ್ಲಿ 2018ರಿಂದ ವಸತಿ ಯೋಜನೆಯಡಿ ಒಟ್ಟು 7600 ಮನೆ ನಿರ್ಮಾಣ ಕೈಗೊಳ್ಳಲಾಗಿದೆ. ಅದರಲ್ಲಿ 2800 ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಕೊಳಗೇರಿ ಅಭಿವೃದ್ಧಿ ಮಾಡುವುದು ಮಂಡಳಿಯಿಂದ ಮಾತ್ರ ಆಗಲ್ಲ. ಇದಕ್ಕೆ ಸ್ಥಳೀಯ ಆಡಳಿತಗಳು ಕೈಜೋಡಿಸಬೇಕು ಎನ್ನುತ್ತಾರೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಧಾರವಾಡದ ಎಇ ಪ್ರವೀಣಕುಮಾರ ಎಚ್.ಬೆಂಗಳೂರು, ಮುಂಬೈ ಹಾಗೂ ಚೆನ್ನೈನಲ್ಲಿ ಕೊಳಗೇರಿ ಪ್ರದೇಶಗಳು ಅಭಿವೃದ್ಧಿಯಾಗುತ್ತಿವೆ. ಅದೇ ರೀತಿಯಲ್ಲಿ ಧಾರವಾಡ ಜಿಲ್ಲೆಯಲ್ಲಿರುವ ಸ್ಲಂಗಳನ್ನು ಸರ್ಕಾರ ಅಭಿವೃದ್ಧಿಪಡಿಸಬೇಕು. ಹೊಸ ಪರಿಕಲ್ಪನೆಯ ಜೊತೆಗೆ ಕೊಳಗೇರಿಗಳ ಜನರ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಗುರುನಾಥ ಉಳ್ಳಿಕಾಶಿ.
ಇದೇ ಭಾಗದ ಶಾಸಕ ಪ್ರಸಾದ ಅಬ್ಬಯ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದು, ಹುಬ್ಬಳ್ಳಿ-ಧಾರವಾಡದ ಸ್ಲಂಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ ಕೊಳಚೆ ಮುಕ್ತ ನಗರ ನಿರ್ಮಾಣಕ್ಕೆ ಮುಂದಾಗಲಿ ಎನ್ನುವುದು ಕೊಳಗೇರಿ ನಿವಾಸಿಗಳ ಒತ್ತಾಯವಾಗಿದೆ."ಸರ್ವರಿಗೂ ಸೂರು ", "ಕೊಳಚೆ ಮುಕ್ತ " ಎಂಬುದು ಕೇವಲ ಸರ್ಕಾರದ ಘೋಷಣೆಯಾಗಿಯೇ ಉಳಿದಿದೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಸೂಕ್ತ ನಿಲುವು, ಕ್ರಮಕೈಗೊಳ್ಳಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.ಹಳೆಯ ಸ್ಲಂಗಳಿಗೆ ಮೂಲಭೂತ ಸೌಕರ್ಯದ ಅಗತ್ಯವಿದೆ. ಸರ್ಕಾರದಿಂದ ಅನುದಾನ ಸಿಕ್ಕ ಕೂಡಲೇ ಆ ನಿಟ್ಟಿನಲ್ಲಿ ಗಮನಹರಿಸಲಾಗುವುದು. ಜನರ ಜೀವನ ಮಟ್ಟ ಸುಧಾರಣೆಗೆ ಕೌಶಲ್ಯ ಅಭಿವೃದ್ಧಿಯಂತಹ ತರಬೇತಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಧಾರವಾಡ ಎಇ ಪ್ರವೀಣಕುಮಾರ ಎಚ್. ಹೇಳಿದರು.
ಧಾರವಾಡ ಜಿಲ್ಲೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಲಂಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಯುಜಿಡಿ, ಕುಡಿಯುವ ನೀರು, ಶೌಚಾಲಯದ ಸಮಸ್ಯೆ ಇದೆ. ಹಾಗಾಗಿ ಬಹುಮಹಡಿ ಕಟ್ಟಡದಲ್ಲಿ ನಿವೇಶನ ನೀಡುವ ಮೂಲಕ ಸ್ಮಾರ್ಟ್‌ಸಿಟಿ ಮಾದರಿಯಲ್ಲಿ ಸರ್ಕಾರ ಕೊಳಗೇರಿಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ಉಳ್ಳಿಕಾಶಿ ಒತ್ತಾಯಿಸಿದ್ದಾರೆ.