ಶಿವಾನಂದ ಗೊಂಬಿ
ಹುಬ್ಬಳ್ಳಿ: ಮೂಲ ಸೌಲಭ್ಯ ಕಲ್ಪಿಸುವ ಜತೆ ಜತೆಗೆ ನಗರದ ಸೌಂದರ್ಯಿಕರಣಕ್ಕೆ ಒತ್ತು ನೀಡಲೆಂದು ಪ್ರಾರಂಭಿಸಲಾದ "ಸ್ಮಾರ್ಟ್‌ಸಿಟಿ ಯೋಜನೆ "ಗೆ ಹುಬ್ಬಳ್ಳಿ- ಧಾರವಾಡದಲ್ಲಿ ಶೀಘ್ರದಲ್ಲೇ ಅಂತಿಮ ಮೊಳೆ ಬಡಿಯುವ ಸಾಧ್ಯತೆ ಇದೆ.ಇನ್ನೊಂದು ವಾರದಲ್ಲೇ ಮುಕ್ತಾಯವಾಗುವ ಲಕ್ಷಣ ದಟ್ಟವಾಗಿವೆ. ಏ.7ರಂದು ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಅಲ್ಲಿ ಅಂತಿಮ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.
2015ರಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿದ ಸ್ಮಾರ್ಟ್‌ಸಿಟಿ ಹುಬ್ಬಳ್ಳಿ-ಧಾರವಾಡದಲ್ಲಿ 2018ರಲ್ಲಿ ಪ್ರಾರಂಭವಾಗಿತ್ತು. ಹಾಗೆ ನೋಡಿದರೆ 2025ರ ಮಾರ್ಚ್ 31ಕ್ಕೆ ಯೋಜನೆಯ ಅವಧಿಯೂ ಮುಕ್ತಾಯವಾಗಿದೆ. ಈ ಸಂಬಂಧ ರಾಜ್ಯಮಟ್ಟದ ಹೈಪವರ್ ಕಮಿಟಿ ಮಾ. 27ಕ್ಕೆ ಸಭೆ ನಡೆಸಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನೆಲ್ಲ ಪಾಲಿಕೆ ಸೇರಿದಂತೆ ಯಾವ್ಯಾವ ಇಲಾಖೆಗೊಳಪಡುತ್ತದೆಯೋ ಅವುಗಳಿಗೆ ಹಸ್ತಾಂತರಿಸುವಂತೆ ಸೂಚನೆ ನೀಡಿದೆ.ಏ. 7ಕ್ಕೆ ಸಭೆ
ಇದು ರಾಜ್ಯ ಮಟ್ಟದಲ್ಲಿನ ಕಮಿಟಿ ನಿರ್ಧಾರವಾದರೆ, ಕೇಂದ್ರದ ನಗರಾಭಿವೃದ್ಧಿ ಮಂತ್ರಾಲಯವೂ ಸ್ಮಾರ್ಟ್‌ಸಿಟಿ ಯೋಜನೆಗೆ ಸಂಬಂಧಪಟ್ಟಂತೆ ಏ. 7ರಂದು ದೆಹಲಿಯಲ್ಲಿ ಸಭೆ ನಡೆಸಲಿದೆ. ಅಲ್ಲಿ ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್‌ಸಿಟಿ ಯೋಜನೆಯ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ. ಈಗಿನ ಸ್ಥಿತಿ ನೋಡಿದರೆ ಬಹುತೇಕ ಮುಕ್ತಾಯಗೊಳಿಸಲು ಕೇಂದ್ರ ಆದೇಶ ಹೊರಡಿಸುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.ಕಾಮಗಾರಿ ಏನು- ಕಥೆ ಏನು?
2018ರಿಂದ ಪ್ರಾರಂಭವಾದ ಸ್ಮಾರ್ಟ್‌ಸಿಟಿ ಯೋಜನೆಯಡಿ ಈ ವರೆಗೆ ₹930 ಕೋಟಿಗೂ ಅಧಿಕ ಖರ್ಚು ಮಾಡಿ 63 ಕಾಮಗಾರಿ ಕೈಗೆತ್ತಿಕೊಂಡಿತ್ತು. ಅದರಲ್ಲಿ 61 ಪೂರ್ಣವಾಗಿದ್ದು, ಇನ್ನು 2 ಕಾಮಗಾರಿ ಬಾಕಿಯುಳಿದಿವೆ. ಆದರೆ ಪೂರ್ಣವಾಗಿವೆ ಎನ್ನಲಾದ ಕಾಮಗಾರಿಗಳ ಬಗ್ಗೆಯೂ ಜನರಿಗೆ ಮಾತ್ರ ತೃಪ್ತಿದಾಯಕವೆನಿಸಿಲ್ಲ. ಸಾಕಷ್ಟು ಲೋಪದೋಷಗಳೇ ಆಗಿವೆ ಎಂಬುದು ಮಾತ್ರ ಸ್ಪಷ್ಟ.48 ಕಿಮೀ ರಸ್ತೆ, ಚಿಟಗುಪ್ಪಿ ಆಸ್ಪತ್ರೆ, ಸ್ಮಾರ್ಟ್‌ಸ್ಕೂಲ್, ಜನತಾ ಬಜಾರ್, ಬೆಂಗೇರಿ ಮಾರುಕಟ್ಟೆ, ಇಂದಿರಾಗ್ಲಾಸ್ ಹೌಸ್, ಉಣಕಲ್ ಕೆರೆ ಅಭಿವೃದ್ಧಿ, ತೋಳನಕೇರಿ ಅಭಿವೃದ್ಧಿ, ಗ್ರೀನ್ ಕಾರಿಡಾರ್, ಹಳೇ ಬಸ್ ನಿಲ್ದಾಣ ಸೇರಿದಂತೆ ಬರೋಬ್ಬರಿ 63 ಯೋಜನೆ ಕೈಗೆತ್ತಿಕೊಂಡಿತ್ತು. ಅದರಲ್ಲಿ 61 ಪೂರ್ಣಗೊಳಿಸಲಾಗಿದೆ.
ಲೋಹಿಯಾ ನಗರದಲ್ಲಿನ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಹಾಗೂ ಸಾಯಿಮಂದಿರದ ಬಳಿ ನಿರ್ಮಿಸುತ್ತಿರುವ ಮಲ್ಟಿ ಲೇವಲ್ ಕಾರ್ ಪಾರ್ಕಿಂಗ್ ಈ 2 ಕಾಮಗಾರಿ ಮಾತ್ರ ಬಾಕಿಯುಳಿದಿವೆ. 2019ರಲ್ಲಿ ಪ್ರಾರಂಭವಾದ ಕಾರ್ ಪಾರ್ಕಿಂಗ್ ಯೋಜನೆ 2022ರಲ್ಲೇ ಪೂರ್ಣಗೊಳ್ಳಬೇಕಿತ್ತು. ₹ 40 ಕೋಟಿಯ ಯೋಜನೆ. ಅದರಲ್ಲಿ ₹10 ಕೋಟಿ ಸ್ಮಾರ್ಟ್‌ಸಿಟಿ ಯೋಜನೆಯ ದುಡ್ಡಾಗಿದ್ದರೆ, ಇನ್ನುಳಿದ ₹30 ಕೋಟಿ ಖಾಸಗಿ ಏಜೆನ್ಸಿಯೇ ಭರಿಸಬೇಕು. ಸ್ಮಾರ್ಟ್‌ಸಿಟಿ ಯೋಜನೆಯಿಂದ ಈ ವರೆಗೆ ಬರೀ ₹ 1.80 ಕೋಟಿ ನೀಡಲಾಗಿದೆ. ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲವಾದ್ದರಿಂದ ಉಳಿದ ಹಣ ಬಿಡುಗಡೆಗೊಳಿಸಿಲ್ಲ. ಜತೆಗೆ ನಿಗದಿತ ಅವಧಿಯಲ್ಲಿ ಪೂರ್ಣವಾಗದ ಹಿನ್ನೆಲೆಯಲ್ಲಿ ₹2 ಕೋಟಿ ದಂಡ ಸಹ ಹಾಕಲಾಗಿದೆ.ಮುಂದೇನು?
61 ಕಾಮಗಾರಿಗಳನ್ನು ಪಾಲಿಕೆ ಸೇರಿದಂತೆ ಯಾವ್ಯಾವ ಇಲಾಖೆಗೆ ಸೇರಿದೆಯೋ ಅವುಗಳಿಗೆ ಹಸ್ತಾಂತರಿಸಲಾಗುತ್ತಿದೆ. ಆದರೆ, ಬಾಕಿಯುಳಿದಿರುವ ಯೋಜನೆಗಳು ಹಸ್ತಾಂತರವಾಗಲ್ಲ. ಹೀಗಾಗಿ ಮುಂದೆ ಏನು ಮಾಡಬೇಕು ಎಂಬುದನ್ನು ಹೈಪವರ್ ಕಮಿಟಿಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸುತ್ತಾರೆ.ನೌಕರರಿಗೆ ಸಂಕಷ್ಟ
ಸ್ಮಾರ್ಟ್‌ಸಿಟಿ ಯೋಜನೆಯಡಿ 5- 6 ಜನರನ್ನು ಸರ್ಕಾರ ಬೇರೆ ಬೇರೆ ಇಲಾಖೆಗಳ ಅಧಿಕಾರಿ ವರ್ಗವನ್ನು ಎರುವಲಾಗಿ ಇಲ್ಲಿಗೆ ನಿಯೋಜಿಸಿದ್ದರೆ, ಇನ್ನುಳಿದ 20ಕ್ಕೂ ಅಧಿಕ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡಿತ್ತು. ಇದೀಗ ಅವರೆಲ್ಲರೂ ಮತ್ತೆ ನಿರುದ್ಯೋಗಿಗಳಾಗಲಿದ್ದಾರೆ. ಮುಂದೆ ಏನು ಮಾಡಬೇಕು ಎಂಬ ಯೋಚನೆ ನೌಕರದ್ದು.ಸುಂದರವಾಗಲಿಲ್ಲ ನಗರ
ಈ ನಡುವೆ 8 ವರ್ಷಗಳಿಗೂ ಅಧಿಕ ಕಾಲ ನಡೆದ ಯೋಜನೆಯಡಿ ಕೈಗೊಂಡ ಕಾಮಗಾರಿಗಳಲ್ಲಿ ಬೆರಳೆಣಿಕೆಯ ಕೆಲಸ ಮಾತ್ರ ತೃಪ್ತಿಯನ್ನುಂಟು ಮಾಡಿದರೆ, ಬಹುತೇಕ ಉಳಿದೆಲ್ಲ ಕಾಮಗಾರಿಗಳು ಕಳಪೆ ಮಟ್ಟದ್ದಾಗಿ ಉದ್ಘಾಟನೆಗೂ ಮುನ್ನವೇ ಹಳ್ಳ ಹಿಡಿದಿವೆ. ಸ್ಮಾರ್ಟ್‌ಸಿಟಿ ಯೋಜನೆಯಿಂದ ನಗರ ಸ್ಮಾರ್ಟ್ ಆಗಲೇ ಇಲ್ಲ ಎಂಬುದು ಸಾರ್ವಜನಿಕರ ಆರೋಪ.ಧಾರವಾಡದಲ್ಲಿ ನಡೆಯಲೇ ಇಲ್ಲಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ಸಿಟಿ ಎಂದು ಹೆಸರಿದ್ದರೂ 63 ಕಾಮಗಾರಿಗಳೆಲ್ಲ ನಡೆದಿದ್ದು ಹುಬ್ಬಳ್ಳಿಯಲ್ಲೇ. ಧಾರವಾಡದಲ್ಲಿ ಒಂದೇ ಒಂದು ಕಾಮಗಾರಿಯೇ ನಡೆಯಲಿಲ್ಲ ಎಂಬುದು ಧಾರವಾಡಿಗರ ಆಕ್ರೋಶ.7ರ ನಂತರ ಅಂತಿಮ ನಿರ್ಧಾರ
ಸ್ಮಾರ್ಟ್‌ಸಿಟಿ ಯೋಜನೆಯ ಅವಧಿ ಮಾ. 31ಕ್ಕೆ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ ನಡೆದ ಹೈಪವರ್ ಕಮಿಟಿಯ ಸಭೆಯೂ ಕಾಮಗಾರಿಗಳನ್ನು ಹಸ್ತಾಂತರಿಸುವಂತೆ ಸೂಚಿಸಿದೆ. ಆದರೆ ಆದೇಶ ಹೊರಡಿಸಿಲ್ಲ. ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯದಲ್ಲಿ ಏ.7ಕ್ಕೆ ಸಭೆ ನಡೆಯಲಿದೆ. ಅದಾದ ಬಳಿಕ ಅಂತಿಮ ನಿರ್ಧಾರ ಗೊತ್ತಾಗಲಿದೆ.- ರುದ್ರೇಶ ಘಾಳಿ, ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್‌ಸಿಟಿ