ಕನ್ನಡಪ್ರಭ ವಾರ್ತೆ ಹಲಗೂರು
ಬೇಸಿಗೆ ಬಿಸಿಲಿನ ತಾಪ ತಾಳಲಾರದೇ ಹಾವುಗಳು ತಣ್ಣನೆ ಜಾಗ ಹುಡುಕಿಕೊಂಡು ಹೊರಗೆ ಪ್ರತ್ಯಕ್ಷಗೊಂಡು ಸಂಚಾರ ಮಾಡುತ್ತವೆ. ಅವುಗಳು ಕಂಡ ತಕ್ಷಣ ಸಾಯಿಸದೇ ನಮ್ಮನ್ನು ಸಂಪರ್ಕಿಸಿ. ಹಾವನ್ನು ಹಿಡಿದು ಕಾಡಿಗೆ ಬಿಡುವ ವ್ಯವಸ್ಥೆ ಮಾಡುವುದಾಗಿ ಉರಗ ತಜ್ಞ ಜಗದೀಶ್ ಮನವಿ ಮಾಡಿದರು.ಹಲಗೂರು ಸಮೀಪದ ಕರಲಕಟ್ಟೆ ಗ್ರಾಮದ ಬಳಿಯ ಗೀತಾ ಲೋಕೇಶ್ ಎಂಬುವರ ಎಸ್ಟೇಟ್ ನಲ್ಲಿ ಬುಧವಾರ ಬೆಳಿಗ್ಗೆ ಹೆಬ್ಬಾವು ಕಾಣಿಸಿಕೊಂಡ ತಕ್ಷಣ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜು ಅರಣ್ಯ ಇಲಾಖೆ ಹಾಗೂ ಉರಗ ತಜ್ಞ ಜಗದೀಶ್‌ಗೆ ವಿಷಯ ತಿಳಿಸಿದಾಗ ಜಗದೀಶ್ ಹೆಬ್ಬಾವನ್ನು ರಕ್ಷಿಸಿದ ವೇಳೆ ಮಾತನಾಡಿದರು.
ಬಿಸಿಲು ಜಾಸ್ತಿ ಇರುವುದರಿಂದ ಹಾವುಗಳು ನೀರು ಹರಿಯುವ ಜಾಗದಲ್ಲಿ ಹಾಗೂ ತಣ್ಣನೆ ಜಾಗವನ್ನು ಹುಡುಕಿಕೊಂಡು ಬರುತ್ತವೆ. ಅವುಗಳನ್ನು ಕಂಡ ತಕ್ಷಣ ನೀವು ಹೊಡೆಯಬೇಡಿ. ಅವುಗಳು ತಮ್ಮ ರಕ್ಷಣೆಗಾಗಿ ನೀವು ಕೆಣಕಿದರೆ ಮಾತ್ರ ನಿಮ್ಮನ್ನು ಕಚ್ಚಲು ಬರುತ್ತವೆ. ಇಲ್ಲದಿದ್ದರೆ ಅವು ಸುಮ್ಮನೆ ಹರಿದು ಹೋಗುತ್ತವೆ ಎಂದರು.ಸುಮಾರು 10 ವರ್ಷದಿಂದ ಸಾವಿರಾರು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದೇನೆ. ನಾನು ಹಾವು ಹಿಡಿಯಲು ಹೋದಾಗ ಅವರಿಂದ ಯಾವುದೇ ಸಂಭಾವನೆ ಪಡೆಯುವುದಿಲ್ಲ. ಹಾವು ಕಂಡ ತಕ್ಷಣ ಮೊ-8431500189 ಸಂಪರ್ಕಿಸುವಂತೆ ಮನವಿ ಮಾಡಿದರು.
ಕರಲಕಟ್ಟೆ ಗ್ರಾಮದ ನಿವಾಸಿ ತಿಮ್ಮೇಗೌಡ ಮಾತನಾಡಿ, ಕಾಡಂಚಿನಲ್ಲಿ ಹಾವುಗಳಿರುವುದು ಸಾಮಾನ್ಯ. ಕಳೆದ ಮೂರು ತಿಂಗಳ ಹಿಂದೆ ಇದೇ ರೀತಿ ಒಂದು ಹೆಬ್ಬಾವು ಬಂದು ಬಾತುಕೋಳಿಯನ್ನು ಹಿಡಿದು ನುಂಗಿತ್ತು, ಅರಣ್ಯ ಇಲಾಖೆ ಮುಖಾಂತರ ಅದನ್ನು ಹಿಡಿದು ಕಾಡಿಗೆ ಬಿಟ್ಟಿದ್ದೆವು ಎಂದರು.ಜಮೀನಿನಲ್ಲಿ ಮೀನು ಸಾಕಾಣಿಕೆ ಮಾಡುವುದಕ್ಕಾಗಿ ಒಂದು ಕೊಳವನ್ನು ನಿರ್ಮಿಸಿಕೊಂಡು ಅದರಲ್ಲಿ ನೀರನ್ನು ಶೇಖರಿಸಿ ಮೀನುಗಳನ್ನು ಬಿಟ್ಟಿದ್ದೆವು. ಹೆಬ್ಬಾವು ಹೋಗಿ ಮೀನುಗಳನ್ನು ತಿಂದು ಮತ್ತು ಬಾತುಕೋಳಿಯನ್ನು ಹಿಡಿದು ಸಾಯಿಸಿತ್ತು ಎಂದು ಹೇಳಿದರು.
ಹಾವನ್ನು ನೋಡಿ ಇಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜು ಅವರಿಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿ ಸಿದ್ದರಾಮ ಪೂಜಾರಿ, ಶ್ರೇಯಾಂಷ್, ಶಿವಣ್ಣ, ಉರಗ ತಜ್ಞ ಜಗದೀಶ ಅವರು, ಸುಮಾರು 8 ಅಡಿ ಉದ್ದದ ಹಾಗೂ 10 ಕೆಜಿ ತೂಕ ಇರುವ ಹೆಬ್ಬಾವನ್ನು ಅರಣ್ಯ ಇಲಾಖೆಯವರ ಸಮ್ಮುಖದಲ್ಲಿ ಮುತ್ತತ್ತಿ ಅರಣ್ಯ ಪ್ರದೇಶದ ಕಾವೇರಿ ನದಿಯ ದಡದಲ್ಲಿ ಹೆಬ್ಬಾವನ್ನು ಬಿಡಲಾಯಿತು ಎಂದು ತಿಳಿಸಿದರು.