ಕನ್ನಡಪ್ರಭ ವಾರ್ತೆ ಹಾಸನಸಾಹಿತ್ಯ ಅಧ್ಯಯನ, ಅಧ್ಯಾಪನಗಳಿಂದ ಮಕ್ಕಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಜಾಗೃತಿ ಮೂಡುತ್ತದೆ. ನಾಡು-ನುಡಿಯ ಬಗ್ಗೆ ಗೌರವ, ಅಭಿಮಾನ ಮೂಡುತ್ತದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಲೂರು ತಾಲೂಕು ಘಟಕದ ವತಿಯಿಂದ ಕದಾಳು ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಾಹಿತ್ಯ ವೇದಿಕೆಯು ಈಗಾಗಲೇ ರಾಜ್ಯ ಹಾಗೂ ಹೊರ ರಾಜ್ಯಗಳನ್ನು ನೂರಾರು ಘಟಕಗಳನ್ನು ಹೊಂದಿದ್ದು ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಲೆಮರೆ ಕಾಯಿಯಂತಹ ಸಾಧಕರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ವೇದಿಕೆಗಳನ್ನು ಕಲ್ಪಿಸುವುದು, ಉತ್ತೇಜನ ನೀಡುವುದು ನಮ್ಮ ವೇದಿಕೆಯ ಪ್ರಮುಖ ಉದ್ದೇಶವಾಗಿದೆ. ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗಿರದೇ ಸಹಪಠ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ತಾಲೂಕು ಗೌರವಾಧ್ಯಕ್ಷ ಫಾ.ಹೈ.ಗುಲಾಂ ಸತ್ತಾರ್ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗನಿಗೂ ನನ್ನ ರಾಜ್ಯ, ನನ್ನ ಭಾಷೆ ಎನ್ನುವ ಅಭಿಮಾನವಿರಬೇಕು. ಮಕ್ಕಳು ಮಾತೃಭೂಮಿಯ ಬಗ್ಗೆ ಗೌರವ ಭಾವನೆ ಬೆಳೆಸಿಕೊಳ್ಳಬೇಕು. ಕ್ರೀಡೆ ಹಾಗೂ ಪ್ರತಿಭಾನ್ವಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹುಟ್ಟಿದ ಹಳ್ಳಿ, ತಾಲೂಕು, ಜಿಲ್ಲೆ, ರಾಜ್ಯ, ದೇಶಕ್ಕೆ ಕೀರ್ತಿ ತರಬೇಕು ಎಂದರು. ಮುಖ್ಯ ಶಿಕ್ಷಕಿ ಡಿ.ಎಂ. ಕಲ್ಪನಾ ಮಾತನಾಡಿ, ಸಾಹಿತ್ಯ ವೇದಿಕೆಯವರು ನಮ್ಮ ಶಾಲೆಗೆ ಬಂದು ನಮ್ಮ ಶಾಲೆಯ ಮೂವರು ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿರುವುದು ತುಂಬಾ ಸಂತಸವಾಗಿದೆ. ಇಂದಿನ ಕಾರ್ಯಕ್ರಮ ಇತರೆ ಮಕ್ಕಳಿಗೂ ಸ್ಫೂರ್ತಿ ನೀಡುತ್ತದೆ ಎಂದರು. ಪ್ರತಿಭಾ ಪುರಸ್ಕಾರ:
ಕಾರ್ಯಕ್ರಮದಲ್ಲಿ ಗುಂಡು ಎಸೆತ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಗುಜರಾತಿನ ಅಹಮದಬಾದಿನಲ್ಲಿ ನಡೆದ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ರಾಜ್ಯ, ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದ 8ನೇ ತರಗತಿಯ ಸಂತೋಷ, ಆಂಗ್ಲ ಭಾಷೆಯ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಹಾಸನ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ, ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಸ್ಫರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ೧೦ನೇ ತರಗತಿ ವಿದ್ಯಾರ್ಥಿನಿ ರಕ್ಷಾ, ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ 9ನೇ ತರಗತಿ ವಿದ್ಯಾರ್ಥಿನಿ ಪೂಜಾರನ್ನು ಸಾಹಿತ್ಯ ವೇದಿಕೆಯಿಂದ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ತಾಲೂಕು ಕಾರ್ಯದರ್ಶಿ ಧರ್ಮ ಕೆರಲೂರು, ತಾಲೂಕು ಸಂಘಟನಾ ಕಾರ್ಯದರ್ಶಿ ಡಿ.ಸಿ.ಬಸವರಾಜ್, ಹಿರಿಯ ಶಿಕ್ಷಕ ರವಿಕಿರಣ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ನೂತನ್ ಶೆಟ್ಟಿ, ತೇಜಸ್ವಿ, ವಾಸಂತಿ, ಕುಸುಮ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.