ಸಾಮಾಜಿಕ ಜವಾಬ್ದಾರಿ ಮೆರೆದ ಕಾವ್ಯ: ಸಾವಿತ್ರಿ ಮುಜುಮದಾರ

KannadaprabhaNewsNetwork |  
Published : Dec 16, 2024, 12:45 AM IST
ಪೋಟೊ15ಕೆಪಿಎಲ್3:‌ ಕೊಪ್ಪಳ ನಗರದ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಲೋಕಾರ್ಪಣೆಯಾದ ಸುರೇಶ್ ತಂಗೋಡ ಅವರ 'ಕಾಂಕ್ರೀಟ್ ಕಾಡು' ಕವನ ಸಂಕಲನ ಸಾಹಿತಿ ಸಾವಿತ್ರಿ ಮುಜುಮದಾರ ಕುರಿತು ಮಾತನಾಡಿದರು. | Kannada Prabha

ಸಾರಾಂಶ

ಮೊದಲಿನಿಂದ ಹಸ್ತಕಕ್ಕೆ ಪುಸ್ತಕವೇ ಭೂಷಣ ಎಂಬ ಮಾತಿತ್ತು. ಈಗ ಹಸ್ತಕದಲ್ಲಿ ಮೊಬೈಲ್ ಬಂದು ಓದುವ ಪರಂಪರೆ ಕಡಿಮೆಯಾಗುತ್ತಿದೆ.

ಕಾಂಕ್ರೀಟ್ ಕಾಡು ಕವನ ಸಂಕಲನ ಲೋಕಾರ್ಪಣೆಯಲ್ಲಿ ಸಾಹಿತಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಗತ್ತಿನ ಜೀವರಾಶಿಯನ್ನು ಕಾಪಾಡುತ್ತಿರುವ ಪ್ರಕೃತಿಯ ತಾಯಿ ಕರುಳುತನವನ್ನು ಕಾವ್ಯದ ಮೂಲಕ ಸಶಕ್ತವಾಗಿ ಅಭಿವ್ಯಕ್ತಿಸಿರುವುದು ಕಾಂಕ್ರೀಟ್ ಕಾಡು ಕವನ ಸಂಕಲನದ ವಿಶೇಷತೆ ಎಂದು ಸಾಹಿತಿ ಸಾವಿತ್ರಿ ಮುಜುಮದಾರ ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ಲೋಕಾರ್ಪಣೆಯಾದ ಸುರೇಶ್ ತಂಗೋಡ ಅವರ ಕಾಂಕ್ರೀಟ್ ಕಾಡು ಕವನ ಸಂಕಲನದ ಕುರಿತು ಮಾತನಾಡಿದರು. ಹೆತ್ತ ತಾಯಿಯಂತೆ ಪ್ರಕೃತಿಯನ್ನೂ ತಾಯಿ ರೂಪದಲ್ಲಿ ಕಾಣುತ್ತಾ ಕಾವ್ಯದ ಮೂಲಕ ಪ್ರಕೃತಿ ಆರಾಧಿಸಿರುವ ಕವಿ ಡಿಜಿಟಲ್ ಯುಗದಲ್ಲೂ ತಾಂಡವಾಡುತ್ತಿರುವ ಅಸ್ಪೃಶ್ಯತೆ ಸೇರಿದಂತೆ ವಿವಿಧ ಸಮಸ್ಯೆ ತಲ್ಲಣಗಳಿಗೆ ಸ್ಪಂದಿಸಿ ಕಾವ್ಯದ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ. ಗಾಂಧಿ, ಬುದ್ಧ, ಬಸವ, ಅಲ್ಲಮರ ಬದುಕಿನ ಹಿರಿಮೆ ಗರಿಮೆಗಳನ್ನು ಕಾವ್ಯದಲ್ಲಿ ಬರೆಯುವ ಮೂಲಕ ಅವರಂಥ ಬದುಕು ಎಲ್ಲರದಾಗಲಿ ಎಂಬ ಆಶಯ ಹೊಂದಿದ್ದಾರೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮಾತನಾಡಿ, ಮೊದಲಿನಿಂದ ಹಸ್ತಕಕ್ಕೆ ಪುಸ್ತಕವೇ ಭೂಷಣ ಎಂಬ ಮಾತಿತ್ತು. ಈಗ ಹಸ್ತಕದಲ್ಲಿ ಮೊಬೈಲ್ ಬಂದು ಓದುವ ಪರಂಪರೆ ಕಡಿಮೆಯಾಗುತ್ತಿದೆ. ಅದಕ್ಕೆ ಪುಸ್ತಕ ಪ್ರಾಧಿಕಾರ ಅಂಗಳದಲ್ಲಿ ಪುಸ್ತಕ ಎಂಬ ತಿಂಗಳ ಕಾರ್ಯಕ್ರಮ ಹಾಗೂ ರಾಜ್ಯದ ಒಂದು ಲಕ್ಷ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಯ ಗುರಿ ಹೊಂದಿದೆ ಎಂದರು.

ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕಾಂಕ್ರೀಟ್ ಕಾಡು ಕಾವ್ಯದಲ್ಲಿ ಪ್ರಕೃತಿ ಬಗ್ಗೆ ಗಾಢವಾದ ಪ್ರೀತಿ ಇದೆ. ಕುವೆಂಪು, ಬೇಂದ್ರೆ, ಕಾವ್ಯಾನಂದರು ಕೂಡ ಪ್ರಕೃತಿ ಉಪಾಸನೆ ಮಾಡುತ್ತಾ ಕಾವ್ಯ ರಚಿಸಿದರು. ಆದರೆ ಈಗ ನಮ್ಮ ದುರಾಸೆಯಿಂದ ಪ್ರಕೃತಿ ಹಾಳಾಗುತ್ತಿದ್ದು, ರಕ್ಷಿಸುವ ಕಾರ್ಯ ನಡೆಯಬೇಕಿದೆ ಎಂದರು.

ಪ್ರಧಾನ ಅಂಚೆ ಕಚೇರಿ ಪಾಲಕ ನಾಗರಾಜ ಬಿ., ಪರಿಸರವಾದಿ ಜಿ.ಎನ್. ಹಳ್ಳಿ , ಗದಗ ಸಾಹಿತಿ ನಾಗರಾಜ ಹುಡೇದ ಮಾತನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜಮೀರ ನಂದಾಪುರ ಅಧ್ಯಕ್ಷತೆ ವಹಿಸಿದ್ದರು.

ಮಹಮ್ಮದ ರಫಿ ಪ್ರಾರ್ಥಿಸಿದರು. ರವಿ ಕಾಂತನವರ ಸ್ವಾಗತಿಸಿದರು. ಕವಿ ಸುರೇಶ ತಂಗೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಕ್ರಪ್ಪ ಹೂಗಾರ ನಿರೂಪಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ