ಶರಣರಿಂದ ಸಮಾಜ ಸುಧಾರಣೆಗೆ ಆದ್ಯತೆ

KannadaprabhaNewsNetwork | Published : Jul 10, 2024 12:33 AM

ಸಾರಾಂಶ

society improvement by Sharanas

-ಅಥಣಿ ಮುರುಘೇಂದ್ರ ಶ್ರೀ ಜಯಂತಿಯಲ್ಲಿ ಬಸವಕುಮಾರ ಸ್ವಾಮೀಜಿ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ವಿಭಿನ್ನ ಆಲೋಚನೆಗಳನ್ನು ಹೊಂದಿ ಸಾಮಾನ್ಯ ಮನುಷ್ಯರ ಜೀವನ ಕ್ರಮಕ್ಕಿಂತ ಬೇರೆಯದೆ ಆದ ಸಮಾಜ ಸುಧಾರಣೆಗೆ ಆದ್ಯತೆ ನೀಡುವಂತಹವರು ಶರಣರು, ಮಹಾಂತರು, ಶಿವಯೋಗಿ ಎನಿಸಿ ಕೊಳ್ಳತ್ತಾರೆ. ಅಂಥವರ ಸಾಲಿಗೆ ಅಥಣಿ ಮುರುಘೇಂದ್ರ ಶಿವಯೋಗಿಗಳು ಸೇರುತ್ತಾರೆ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶ್ರೀಮಠದ ರಾಜಾಂಗಣದಲ್ಲಿ ಏರ್ಪಡಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಶಿವಯೋಗಿಗಳ ಬದುಕು ಬಸವಮಯ ಆಗಿತ್ತು. ಅವರ ಜೀವನ ಗಮನಿಸಿದವರಿಗೆ ಬಸವ ತತ್ವದ ಅನುಷ್ಠಾನವೇ ಗೋಚರಿಸುತ್ತಿತ್ತು. ಅಷ್ಟರಮಟ್ಟಿಗೆ ಬಸವಣ್ಣನವರ ವಿಚಾರಧಾರೆಗಳನ್ನು ಅಪ್ಪಿಕೊಂಡಿದ್ದರು ಎಂದರು.

ಸಮತಾವಾದ ಮತ್ತು ಜಾತ್ಯಾತೀತ ನಿಲುವಿನ ವಿಚಾರವಾದಿಯಾಗಿದ್ದ ಶ್ರೀಗಳು ಹರ್ಡೇಕರ್ ಮಂಜಪ್ಪನಂಥವರನ್ನು ಸಾಮೀಪ್ಯಕ್ಕೆ ಕರೆದುಕೊಂಡು ಬಸವತತ್ವ ಪರಿಪಾಲನೆಗೆ ಪ್ರೇರಣೆಯಾದರು. ದೂರದೃಷ್ಟಿ, ಚಿಕಿತ್ಸಕತನ ಶಿವಯೋಗಿಗಳಲ್ಲಿತ್ತು. ಭೌತಿಕ ವಿಚಾರಗಳತ್ತ ಗಮನಹರಿಸದೆ ಬೌದ್ಧಿಕ ವಿಚಾರಕ್ಕೆ ಮಹತ್ವ ಕೊಟ್ಟರು. ದಯೆ, ಮಾನವೀಯತೆ ಅವರ ಮೇರುಗುಣಗಳಾಗಿದ್ದವೆಂದು ಬಹುಮುಖ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ವಿವರಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಲಾಳನಹಳ್ಳಿಯ ಶರಣೆ ಜಯದೇವಿ ತಾಯಿ ಮಾತನಾಡಿ, ಬಸವಾದಿ ಶಿವಶರಣರ ಜೀವನ ಮೌಲ್ಯವನ್ನು ಅರ್ಥ ಮಾಡಿಕೊಂಡಿದ್ದ ಶಿವಯೋಗಿಗಳು ಅದರಂತೆ ನಡೆದು ಮಾದರಿ ಜೀವನವನ್ನು ನಡೆಸಿದರು. ಅವರ ಬದುಕು ತೆರೆದ ಪುಸ್ತಕದಂತೆ ಇತ್ತು ಎಂದರು. ಶ್ರೀ ಮುರುಘೇಶ ಸ್ವಾಮಿಗಳು, ಶರಣೆ ಚಿನ್ಮಯಿತಾಯಿ, ಮಾತೆ ಅನ್ನಪೂರ್ಣೇಶ್ವರಿ ತಾಯಿ, ಗುರುಕುಲದ ಸಾಧಕರು, ವಿದ್ಯಾರ್ಥಿಗಳು, ಭಕ್ತಾದಿಗಳು ಭಾಗವಹಿಸಿದ್ದರು. ಆರಂಭಕ್ಕೆ ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನಗೀತೆಗಳ ಹಾಡಿದರು. ಚಿನ್ಮಯಿ ದೇವರು ಸ್ವಾಗತಿಸಿದರು. ವಿದ್ಯಾರ್ಥಿ ಸುದೀಪ್ ಕಾರ್ಯಕ್ರಮ ನಿರೂಪಿಸಿದರು. ವರುಣ್ ಸಂದೇಶ್ ಶರಣುಸಮರ್ಪಣೆ ಮಾಡಿದರು.

--------

ಪೋಟೋ: 9 ಸಿಟಿಡಿ 2

ಚಿತ್ರದುರ್ಗ ಮುರುಘಾಮಠದಲ್ಲಿ ಹಮ್ಮಿಕೊಂಡಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ ಜಯಂತಿ ಕಾರ್ಯಕ್ರಮದಲ್ಲಿ ಬಸವಕುಮಾರ ಸ್ವಾಮೀಜಿಗಳು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

Share this article