ಪ್ರತಿಭಾವಂತ ವಿದ್ಯಾರ್ಥಿ ನೆರವಿಗೆ ಸಮಾಜ ಸದಾ ಮುಂದು: ದಿನೇಶಕುಮಾರ್

KannadaprabhaNewsNetwork | Published : Jul 8, 2024 12:33 AM

ಸಾರಾಂಶ

ಸದಾ ಸುದ್ದಿ ಹಿಂದೆ ಓಡುವ ಪತ್ರಕರ್ತರು ಆರ್ಥಿಕವಾಗಿ ಸ್ಥಿತಿವಂತರಲ್ಲ. ಪತ್ರಕರ್ತರ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತೆ ಆಗಬೇಕು.

ಕನ್ನಡಪ್ರಭ ವಾರ್ತೆ ಸಾಗರ

ಇವತ್ತಿನ ಸಂದರ್ಭದಲ್ಲಿ ಶಿಕ್ಷಣಕ್ಕೆ ಹಣ ಹೊಂದಿಸುವುದು ಸವಾಲು ಎನಿಸುವುದಿಲ್ಲ. ವಿದ್ಯಾರ್ಥಿ ಪ್ರತಿಭಾವಂತನಾಗಿದ್ದರೆ ಅವನಿಗೆ ಸಮಾಜ ಹಣಕಾಸಿನ ನೆರವು ನೀಡುತ್ತದೆ ಎಂದು ಜೋಷಿ ಫೌಂಡೇಶನ್ ಸಂಸ್ಥಾಪಕ ಅಬಸೆ ದಿನೇಶಕುಮಾರ್ ಜೋಷಿ ಹೇಳಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಶಾಖೆ ಆಶ್ರಯದಲ್ಲಿ ಭಾನುವಾರ ಜೋಷಿ ಫೌಂಡೇಶನ್ ವತಿಯಿಂದ ಪತ್ರಕರ್ತರ ಮಕ್ಕಳಿಗೆ ಮತ್ತು ಪತ್ರಿಕಾ ವಿತರಕರಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮಾಡಿ ಮಾತನಾಡಿದ ಅವರು, ಆರ್ಥಿಕ ಮುಗ್ಗಟ್ಟಿನಿಂದ ಶೈಕ್ಷಣಿಕ ವ್ಯವಸ್ಥೆ ಕುಂಠಿತವಾಗಬಾರದು ಎನ್ನುವುದು ಫೌಂಡೇಶನ್ ಉದ್ದೇಶ ಎಂದರು.

ಸದಾ ಸುದ್ದಿ ಹಿಂದೆ ಓಡುವ ಪತ್ರಕರ್ತರು ಆರ್ಥಿಕವಾಗಿ ಸ್ಥಿತಿವಂತರಲ್ಲ. ಪತ್ರಕರ್ತರ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತೆ ಆಗಬೇಕು. ಈ ಹಿನ್ನೆಲೆ ಜೋಷಿ ಫೌಂಡೇಶನ್ ತನ್ನ ಅಲ್ಪ ಸಹಕಾರ ನೀಡುತ್ತಿದೆ. ಪತ್ರಕರ್ತರು ಮತ್ತು ಪತ್ರಿಕಾ ವಿತರಕರಿಗೆ ಸಹಕಾರ ನೀಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್ ಮಾತನಾಡಿ, ಪತ್ರಕರ್ತರು ಎಷ್ಟೆ ಸಂಕಷ್ಟದಲ್ಲಿದ್ದರೂ ತಮ್ಮ ಸ್ವಾಭಿಮಾನ ಬಿಟ್ಟು ಬದುಕುವುದಿಲ್ಲ. ಆರ್ಥಿಕ ಸಮಸ್ಯೆ ಇದ್ದರೂ ಇನ್ನೊಬ್ಬರ ಬಳಿ ಕೈಚಾಚುವ ಪ್ರವೃತ್ತಿ ಪತ್ರಕರ್ತರದ್ದಲ್ಲ. ಸವಾಲುಗಳ ನಡುವೆ ಬದುಕು ಕಟ್ಟಿಕೊಂಡ ಪತ್ರಕರ್ತರ ಸಂಕಷ್ಟ ಗುರುತಿಸಿ ಜೋಷಿ ಫೌಂಡೇಶನ್ ಶೈಕ್ಷಣಿಕ ಉದ್ದೇಶಕ್ಕೆ ನೋಟ್ ಪುಸ್ತಕ ವಿತರಣೆ ಮಾಡುತ್ತಿರುವುದು ಅಭಿನಂದಾರ್ಹ ಕೆಲಸ ಎಂದು ತಿಳಿಸಿದರು.

ಮ.ಸ.ನಂಜುಂಡಸ್ವಾಮಿ ಮಾತನಾಡಿ, ತಾವು ಶಿಕ್ಷಣ ಪಡೆಯುವಾಗ ಪಟ್ಟ ಕಷ್ಟವನ್ನು ಇಂದಿನ ಮಕ್ಕಳು ಪಡಬಾರದು ಎನ್ನುವ ಉದ್ದೇಶಕ್ಕೆ ದಿನೇಶ್ ಜೋಷಿಯವರು ತಾವು ಗಳಿಸಿದ್ದರಲ್ಲಿ ಒಂದು ಭಾಗವನ್ನು ಸಾಮಾಜಿಕ ಚಟುವಟಿಕೆಗಳಿಗೆ ವಿನಿಯೋಗಿಸುವ ಸಾರ್ಥಕ ಕೆಲಸ ಮಾಡುತ್ತಿದ್ದಾರೆ. ತಮ್ಮ ಕೈಯಲ್ಲಿ ಇರುವುದನ್ನು ಇನ್ನೊಬ್ಬರ ಜೊತೆ ಹಂಚಿ ತಿನ್ನುವ ಗುಣ ಹೊಂದಿರುವ ಅವರ ಕೆಲಸ ಸಾರ್ಥಕವಾದದ್ದು ಎಂದು ಹೇಳಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಮಹೇಶ್ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಎಂ.ಜಿ.ರಾಘವನ್ ವಂದಿಸಿದರು. ಲೋಕೇಶಕುಮಾರ್ ನಿರೂಪಿಸಿದರು.

Share this article