ಮಕ್ಕಳ ರಕ್ಷಣೆಯಲ್ಲಿ ಸಮಾಜದ ಪಾತ್ರ ಮಹತ್ವದ್ದು: ನ್ಯಾ. ಶಾಂತವೀರ ಶಿವಪ್ಪ

KannadaprabhaNewsNetwork |  
Published : Feb 18, 2024, 01:31 AM IST
ಮಕ್ಕಳು17 | Kannada Prabha

ಸಾರಾಂಶ

ಬನ್ನಂಜೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ವಸತಿ ನಿಲಯದ ಮೇಲ್ವಿಚಾರಕರು ಮತ್ತು ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರಿಗೆ ಬಾಲನ್ಯಾಯ ಕಾಯ್ದೆ 2015 ತಿದ್ದುಪಡಿ 2021, ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆ 2012, ಬಾಲ್ಯ ವಿವಾಹ ಕಾಯ್ದೆ ಹಾಗೂ ಬಾಲ ಕಾರ್ಮಿಕತೆ ಹಾಗೂ ಭಿಕ್ಷಾಟನೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿಮಕ್ಕಳ ರಕ್ಷಣೆಯಲ್ಲಿ ಸಮಾಜದ ಪಾತ್ರ ಮಹತ್ವವಾದುದು. ಮಕ್ಕಳನ್ನು ಅಪರಾಧ ಚಟುವಟಿಕೆಗಳಿಂದ ದೂರವಿಟ್ಟು ಸುಸ್ಥಿರ ಸಮಾಜವನ್ನು ನಿರ್ಮಾಣಗೊಳಿಸಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.

ಅವರು ಶನಿವಾರ ನಗರದ ಬನ್ನಂಜೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ವಸತಿ ನಿಲಯದ ಮೇಲ್ವಿಚಾರಕರು ಮತ್ತು ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರಿಗೆ ಬಾಲನ್ಯಾಯ ಕಾಯ್ದೆ 2015 ತಿದ್ದುಪಡಿ 2021, ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆ 2012, ಬಾಲ್ಯ ವಿವಾಹ ಕಾಯ್ದೆ ಹಾಗೂ ಬಾಲ ಕಾರ್ಮಿಕತೆ ಹಾಗೂ ಭಿಕ್ಷಾಟನೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಅಪರಾಧವನ್ನು ಮಾಡುವ ಉದ್ದೇಶವನ್ನು ಅರ್ಥ ಮಾಡಿಕೊಂಡು, ಅಂತಹ ಮಕ್ಕಳೊಂದಿಗೆ ಯಾವ ರೀತಿಯಲ್ಲಿ ವರ್ತಿಸಬೇಕು ಎಂಬುದರ ಅರಿವು ಪೊಲೀಸರಿಗಿರಬೇಕು. ಪೊಲೀಸರು ಮಕ್ಕಳ ಕುರಿತಾದ ಕಾನೂನುಗಳ ಬಗ್ಗೆ ಪೂರ್ಣ ತಿಳುವಳಿಕೆಯನ್ನು ಹೊಂದಿರಬೇಕು ಎಂದವರು ಸಲಹೆ ಮಾಡಿದರು. ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ, ಸೂಕ್ಷ್ಮ ಮನೋಭಾವದ ಮಕ್ಕಳಿಗೆ ಅಪಾಯಗಳ ಅರಿವು ಇರುವುದಿಲ್ಲ. ಹಾಗಾಗಿ ಶೀಘ್ರವಾಗಿ ಅನೇಕ ಸಮಸ್ಯೆಗಳಿಗೆ ಒಳಗಾಗುತ್ತಾರೆ, ಮಕ್ಕಳಿಗೆ ಸಂಬಂಧಪಟ್ಟ ಇಲಾಖೆಗಳು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ., ಕರಾವಳಿ ಜಿಲ್ಲೆಗಳಲ್ಲಿ ಮಕ್ಕಳ ರಕ್ಷಣೆ ಕಾಯ್ದೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರುವುದು ಸಂತಸದ ವಿಚಾರವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಡುಪಿ ಜಿಲ್ಲೆಯು ಮಾದರಿಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ಹೆಚ್ಚುವರಿ ಅಧೀಕ್ಷಕ ಸಿದ್ಧಲಿಂಗಪ್ಪ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿಘ್ನೇಶ್ ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಉಪಸ್ಥಿತರಿದ್ದರು.

ಬೆಂಗಳೂರು ಪೊಲೀಸ್ ಮಹಾನಿರ್ದೇಶಕ ತರಬೇತಿ ಕಚೇರಿಯ ತರಬೇತುದಾರ ರೋಹಿತ್ ಮತ್ತು ಮೈಸೂರು ಪೊಲೀಸ್ ಆಯುಕ್ತರ ಕಚೇರಿಯ ತರಬೇತುದಾರ ಪ್ರಸನ್ನ ಕುಮಾರ್ ಜಿ.ಎಸ್. ಮಕ್ಕಳ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ಎಮ್. ಸ್ವಾಗತಿಸಿ, ಪ್ರಕಾಶ್ ಹಾವಂಜೆ ನಿರೂಪಿಸಿ, ಕಪಿಲಾ ವಂದಿಸಿದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ