ಸಮಾಜಘಾತುಕ ಶಕ್ತಿಗಳಿಗೆ ಕಾನೂನಿನ ಭಯವಿಲ್ಲ

KannadaprabhaNewsNetwork |  
Published : Jul 04, 2024, 01:08 AM IST
3ಡಿಡಬ್ಲೂಡಿ1ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಲಾಯಿತು.  | Kannada Prabha

ಸಾರಾಂಶ

ಮಾದಕ ವಸ್ತು ಮಾರಾಟ, ಸೇವನೆ ಅಪರಾಧವಾದರೂ ಕೆಲವು ಸಮಾಜಘಾತುಕ ಶಕ್ತಿಗಳು ಇದನ್ನು ವೃತ್ತಿಯಾಗಿ ಮಾಡಿಕೊಂಡಿವೆ. ಪೊಲೀಸ್ ಹಾಗೂ ಇತರ ಶಿಕ್ಷಾ ಸಂಸ್ಥೆಗಳಿದ್ದರೂ ಅವರಿಗೆ ಭಯವಿಲ್ಲ.

ಧಾರವಾಡ:

ಸಮಾಜದ ಅಶಾಂತಿಗೆ ಕಾರಣವಾಗುವ ಮಾದಕ ವಸ್ತು, ಅಕ್ರಮ, ಅನೈತಿಕತೆ ಮನುಷ್ಯರ ಮನಸ್ಥಿತಿ ಬದಲಾಗದೇ ತಡೆಯುವುದು ಕಷ್ಟ ಸಾಧ್ಯ. ಸಮಾಜ ಸುಶಾಂತಿಯಿಂದ ಇರಲು ಸಾರ್ವಜನಿಕ ಸಹಕಾರವು ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ ಹೇಳಿದರು.

ನಗರದ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿದ ಅವರು ಮಾತನಾಡಿದರು.

ಮಾದಕ ವಸ್ತು ಮಾರಾಟ, ಸೇವನೆ ಅಪರಾಧವಾದರೂ ಕೆಲವು ಸಮಾಜಘಾತುಕ ಶಕ್ತಿಗಳು ಇದನ್ನು ವೃತ್ತಿಯಾಗಿ ಮಾಡಿಕೊಂಡಿವೆ. ಪೊಲೀಸ್ ಹಾಗೂ ಇತರ ಶಿಕ್ಷಾ ಸಂಸ್ಥೆಗಳಿದ್ದರೂ ಅವರಿಗೆ ಭಯವಿಲ್ಲ. ಕಾಯ್ದೆ, ಕಾನೂನುಗಳ ಜತೆಗೆ ಸಾರ್ವಜನಿಕರ ಸಹಕಾರವಿದ್ದರೆ ಮಾತ್ರ ಇಂತಹ ಹೀನ ಕೃತ್ಯಗಳನ್ನು ನಿಯಂತ್ರಿಸಿ, ಮಟ್ಟ ಹಾಕಲು ಸಾಧ್ಯ ಎಂದರು.

ಇತ್ತಿಚಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ, ಅಕ್ರಮ ಮಾರಾಟ ಹೆಚ್ಚಳವಾಗುತ್ತಿದೆ. ಸಾಮಾಜಿಕ ಕಟ್ಟೆಚ್ಚರ ಮುಖ್ಯವಾಗಿದೆ. ಶಾಲಾ-ಕಾಲೇಜು, ಸಂಘ-ಸಂಸ್ಥೆ ಮತ್ತು ಮಹಿಳಾ ಗುಂಪುಗಳಲ್ಲಿ ಮಹಿಳೆ ಮತ್ತು ಮಕ್ಕಳ ಮಾರಾಟದ ಬಗ್ಗೆ, ಅಕ್ರಮ ಸಾಗಾಣಿಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಎಸ್ಪಿ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಮಾದಕ ವಸ್ತು ವ್ಯಸನಿ ತನ್ನ ಮಾನ, ಪ್ರಾಣ ಮತ್ತು ಆಸ್ತಿ ಹಾನಿ ಮಾಡಿಕೊಳ್ಳುತ್ತಾನೆ. ಇದರ ಅರಿವು ಇಲ್ಲದೆ ಮಕ್ಕಳು, ಯುವಕರು ಮಾದಕ ಸೇವನೆಗೆ ಒಳಗಾಗುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು. ಸಾರ್ವಜನಿಕರು, ವಿದ್ಯಾರ್ಥಿಗಳು ಯಾವುದೇ ಅಕ್ರಮ ಚಟುವಟಿಕೆಗಳು ತಮ್ಮ ಗಮನಕ್ಕೆ ಬಂದ ತಕ್ಷಣ 112 ಸಹಾಯವಾಣಿಗೆ ಕರೆ ಮಾಡಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿ, ಮಾದಕ ವಸ್ತು ಸೇವನೆಯ ವ್ಯಸನಿಗಳನ್ನು ಅದರಿಂದ ಹೊರತರಲು ವ್ಯಸನಮುಕ್ತ ಕೇಂದ್ರ ತೆರೆಯಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನಸಿಕ ಚಿಕಿತ್ಸೆ ಹಾಗೂ ಸಮಾಲೋಚನಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಸಮೀಕ್ಷಣಾಧಿಕಾರಿ ಡಾ. ಪರಶುರಾಮ ಎಫ್.ಕೆ., ಡಾ. ಮಹೇಶ ಚಿತ್ತರಗಿ, ಡಾ. ಮಂಜುನಾಥ ಎಸ್., ಡಾ. ರವೀಂದ್ರ ಬೊವೇರ, ಡಾ. ಕೆ.ಎನ್. ತನುಜಾ, ಎಂ.ಎನ್. ಅಗಡಿ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ