ಸಾಫ್ಟ್‌ವೇರ್ ಪಾರ್ಕ್, ಬೇರೆಡೆ ಹೊಸ ಕಾರ್ಖಾನೆ ಪ್ರಸ್ತಾವ ಸರ್ಕಾರದ ಮುಂದಿಲ್ಲ: ಸಿಆರ್‌ಎಸ್

KannadaprabhaNewsNetwork | Published : Mar 8, 2024 1:46 AM

ಸಾರಾಂಶ

ಹೊಸ ಕಾರ್ಖಾನೆ ಬಗ್ಗೆ ಶಾಸಕರು ಉತ್ಸಾಹದಿಂದ ಮಾತನಾಡಿದ್ದಾರೆ. ಅಭಿವೃದ್ಧಿಯಲ್ಲಿ ಹೊಸ ಬದಲಾವಣೆ ತರುವ ಆಸಕ್ತಿಯಿಂದ ಈ ಮಾತುಗಳನ್ನಾಡಿದ್ದಾರೆ. ಒಮ್ಮೆ ಹೊಸ ಕಾರ್ಖಾನೆಯನ್ನೇ ಮಾಡಬೇಕೆಂದಾದರೆ ಅದಕ್ಕೆ ಎಷ್ಟು ಹಣ ಬೇಕಾಗಬಹುದು. ಸರ್ಕಾರವೇ ಹಣವನ್ನು ಭರಿಸಲು ಸಾಧ್ಯವೇ ಅಥವಾ ಕಾರ್ಖಾನೆ ಆಸ್ತಿಯನ್ನು ಅಡಮಾನವಿಟ್ಟು ಹಣ ಪಡೆಯಬೇಕಾಗಬಹುದೇ ಎಂಬ ಬಗ್ಗೆಯೂ ಆಲೋಚನೆ ಮಾಡಿ ತೀರ್ಮಾನ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಹೊಸ ಸಕ್ಕರೆ ಕಾರ್ಖಾನೆಯನ್ನು ಬೇರೆ ಜಾಗದಲ್ಲಿ ನಿರ್ಮಾಣ ಮಾಡುವ ಬಗ್ಗೆಯಾಗಲೀ, ಹಾಲಿ ಮೈಷುಗರ್ ಜಾಗದಲ್ಲಿ ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ಬುಧವಾರ ನಗರದ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ಟ್ರಯಲ್ ಬ್ಲಾಸ್ಟ್ ಮತ್ತು ಮೈಷುಗರ್ ಕಾರ್ಖಾನೆ ಕುರಿತು ಆಯೋಜಿಸಿದ್ದ ರೈತಮುಖಂಡರ ಸಭೆಯಲ್ಲಿ ಮಾತನಾಡಿ, ಹೊಸ ಕಾರ್ಖಾನೆ ಬಗ್ಗೆ ಶಾಸಕರು ಉತ್ಸಾಹದಿಂದ ಮಾತನಾಡಿದ್ದಾರೆ. ಅಭಿವೃದ್ಧಿಯಲ್ಲಿ ಹೊಸ ಬದಲಾವಣೆ ತರುವ ಆಸಕ್ತಿಯಿಂದ ಈ ಮಾತುಗಳನ್ನಾಡಿದ್ದಾರೆ ಎಂದು ಸಚಿವರು ಸಮಜಾಯಿಷಿ ನೀಡಿದರು.

ಈಗಿರುವ ಜಾಗದಲ್ಲೇ ಮೈಷುಗರ್ ಕಾರ್ಖಾನೆ ಅಭಿವೃದ್ಧಿಪಡಿಸಬೇಕಿದೆ. ಬೇರೆ ಕಡೆ ಹೊಸ ಕಾರ್ಖಾನೆ ನಿರ್ಮಿಸುವ ಅವಶ್ಯಕತೆ ಇಲ್ಲ. ಪ್ರಸ್ತುತ ಮೈಷುಗರ್ ಕಾರ್ಖಾನೆ ಕಾರ್ಯಾಚರಣೆಯ ಸ್ಥಿತಿ-ಗತಿಗಳ ಕುರಿತು ತಾಂತ್ರಿಕ ವರದಿಯೊಂದನ್ನು ಪಡೆಯುತ್ತೇವೆ. ಸುಗಮವಾಗಿ ಕಾರ್ಯಾಚರಣೆ ನಡೆಸಲು ಏನೇನು ಅವಶ್ಯಕತೆ ಇದೆ. ಎಷ್ಟು ಹಣ ಖರ್ಚಾಗಲಿದೆ ಎಂಬೆಲ್ಲಾ ಮಾಹಿತಿ ಪಡೆಯುತ್ತೇವೆ. ಒಮ್ಮೆ ಹೊಸ ಕಾರ್ಖಾನೆಯನ್ನೇ ಮಾಡಬೇಕೆಂದಾದರೆ ಅದಕ್ಕೆ ಎಷ್ಟು ಹಣ ಬೇಕಾಗಬಹುದು. ಸರ್ಕಾರವೇ ಹಣವನ್ನು ಭರಿಸಲು ಸಾಧ್ಯವೇ ಅಥವಾ ಕಾರ್ಖಾನೆ ಆಸ್ತಿಯನ್ನು ಅಡಮಾನವಿಟ್ಟು ಹಣ ಪಡೆಯಬೇಕಾಗಬಹುದೇ ಎಂಬ ಬಗ್ಗೆಯೂ ಆಲೋಚನೆ ಮಾಡಿ ತೀರ್ಮಾನ ಮಾಡಲಾಗುವುದು ಎಂದರು.

ನೀರು ಹರಿಸುವ ಬಗ್ಗೆ ಚರ್ಚಿಸಿ ತೀರ್ಮಾನ:

ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸುವುದಕ್ಕೆ ನೀರಿನ ಕೊರತೆ ಇದೆ. ಈಗಾಗಲೇ ಬೇಸಿಗೆಯಲ್ಲಿ ಒಂದು ಕಟ್ಟು ನೀರು ಹರಿಸಿ ಸಾಧ್ಯವಾದಷ್ಟು ಬೆಳೆಗಳನ್ನು ರಕ್ಷಣೆ ಮಾಡಿದ್ದೇವೆ. ಎರಡನೇ ಕಟ್ಟು ನೀರು ಕೊಡುವುದಕ್ಕೆ ಕಷ್ಟವಾಗಬಹುದು ಈ ವಿಷಯವಾಗಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.

ಕಳೆದ ವರ್ಷ ನಿರೀಕ್ಷೆಯಂತೆ ಮಳೆ ಬಾರದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯ ಭರ್ತಿಯಾಗಲಿಲ್ಲ. ನೀರಿಗೆ ಸಾಕಷ್ಟು ಸಮಸ್ಯೆ ಇದ್ದರೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ. ಬೇಸಿಗೆಯಲ್ಲಿ ವಿದ್ಯುತ್ ಅಭಾವವೂ ಇದೆ. ವಿದ್ಯುತ್ ಸಮಸ್ಯೆಯಿಂದಲೂ ಬೆಳೆಗಳು ಒಣಗುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಸಮಸ್ಯೆ ಪರಿಹರಿಸಲು ಕ್ರಮ ವಹಿಸುವುದಾಗಿ ಹೇಳಿದರು.

Share this article