ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ । ಮಣ್ಣಿನ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯಕನ್ನಡಪ್ರಭ ವಾರ್ತೆ ಕೊಪ್ಪಳ
ಕೃಷಿಯ ಮೂಲವಾದ ಮಣ್ಣು ಅತ್ಯಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದ್ದು, ಮಣ್ಣಿನ ಸಂರಕ್ಷಣೆ ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಹೇಳಿದರು.ಗುರುವಾರ ನಗರದ ಜಿಪಂಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಪಂ, ಕೃಷಿ ಇಲಾಖೆ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವನ ಆಹಾರದ ಮೂಲವಾಗಿರುವ ಮಣ್ಣಿನ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ನಮ್ಮ ದೇಹವನ್ನು ಹೇಗೆ ನೋಡಿಕೊಳ್ಳುತ್ತೇವೆ. ಅದೇ ರೀತಿ ನಾವು ಮಣ್ಣಿನ ಪರಿಸ್ಥಿತಿಗಳ ಬಗ್ಗೆಯೂ ಗಮನ ಹರಿಸಬೇಕು. ಮಣ್ಣಿನಲ್ಲಿ ಯಾವ ಕೊರತೆಯಿದೆ, ಮಣ್ಣಿಗೆ ಏನು ಬೇಕು, ಯಾವ ರೀತಿ ಮಣ್ಣಿನ ಗುಣಮಟ್ಟವನ್ನು ಸುಧಾರಿಸಬಹುದು ಎಂಬುದನ್ನು ಎಲ್ಲರಲ್ಲಿಯೂ ಮಾಹಿತಿ ಇರಬೇಕು. ಮಣ್ಣಿನ ಫಲವತ್ತತೆ ಕಾಪಾಡಲು ಸರ್ಕಾರದ ಕಾರ್ಯಕ್ರಮಗಳು ಚಾಲ್ತಿಯಲ್ಲಿದ್ದು, ಅವುಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲು ಕೃಷಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.ಮಣ್ಣಿನ ಸಂರಕ್ಷಣೆಗಾಗಿ ನರೇಗಾ ಯೋಜನೆಯಡಿ ಬದು ನಿರ್ಮಾಣದಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಚೆಕ್‌ಡ್ಯಾಂ, ಕೃಷಿ ಹೊಂಡಗಳ ನಿರ್ಮಾಣ, ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಾವಯವ ಪದ್ಧತಿಯನ್ನು ಅಳವಡಿಕೆ ಮಾಡಲಾಗುತ್ತಿದೆ. ಇದಲ್ಲದೇ ಮಣ್ಣಿನ ಫಲವತ್ತತೆಗಾಗಿ ಕೃಷಿ, ತೋಟಗಾರಿ ಹಾಗೂ ವಿವಿಧ ಇಲಾಖೆಗಳ ಮೂಲಕ ಬೇರೆ-ಬೇರೆ ಯೋಜನೆಗಳಿದ್ದು, ಇಂತಹ ಕಾರ್ಯಕ್ರಮಗಳು ರೈತರಿಗೆ ಹಾಗೂ ಜನರಿಗೆ ಸರಿಯಾಗಿ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಕೃಷಿ ಸಖಿಯರ ಮೂಲಕವೂ ಸಹ ರೈತರಿಗೆ ಮಾಹಿತಿ ನೀಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮಾತನಾಡಿ, ಮಾನವನಿಂದ ಮಣ್ಣಿನ ಆರೋಗ್ಯ ಹದೆಗೆಡುತ್ತಿದೆ. ನಾವೆಲ್ಲರೂ ಮಣ್ಣಿನ ಆರೋಗ್ಯ ಹಾಳಾಗುವುದಕ್ಕೆ ಕಾರಣರಾಗದೇ ಮಣ್ಣಿನ ಆರೋಗ್ಯವನ್ನು ಕಾಪಾಡಬೇಕು. ಮಣ್ಣಿನ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿ ದಿನ ಪ್ರತಿಯೊಬ್ಬರೂ ಮಣ್ಣನ್ನು ಸಂರಕ್ಷಿಸಬೇಕು ಎಂದು ಹೇಳಿದರು.ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಈ ವರ್ಷ ಜಿಲ್ಲೆಯಲ್ಲಿ 23,175 ಮಣ್ಣು ಮಾದರಿಗಳನ್ನು ತೆಗೆಯಲು ಗುರಿ ನಿಗದಿಪಡಿಸಲಾಗದ್ದು, ಮಣ್ಣು ಮಾದರಿ ಸಂಗ್ರಹಿಸಲಾಗಿದೆ ಹಾಗೂ ವಿಶ್ಲೇಷಣೆ ಪ್ರಗತಿಯಲ್ಲಿದೆ. ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಮಹತ್ವದ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಲು ಪ್ರಾಯೋಗಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲನೇ ಹಂತದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರಿನ ಜವಾಹರ ನವೋದಯ ವಿದ್ಯಾಲಯವನ್ನು ಆಯ್ಕೆಮಾಡಿ ಪ್ರತಿ ಬ್ಯಾಚ್‌ನಲ್ಲಿ 25 ವಿದ್ಯಾರ್ಥಿಗಳು ಒಳಗೊಂಡ 5 ಬ್ಯಾಚ್‌ಗಳನ್ನು ಮಾಡಲಾಗಿದೆ. ಈ ವಿದ್ಯಾರ್ಥಿಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಹಾಯದಿಂದ ಮಣ್ಣು ಮಾದರಿಯ ಸಂಗ್ರಹಣೆ ಮಾಡುವ ವಿಧಾನ, ಸಂಗ್ರಹಣೆ ಮಾಡಿದ ಮಾದರಿಗಳ ವಿಶ್ಲೇಷಣೆ, ಮಣ್ಣು ಮಾದರಿ ಚೀಟಿ ತಯಾರಿಕೆ ಹಾಗೂ ಮಣ್ಣು ಮಾದರಿ ಚೀಟಿಗೆ ಅನುಗುಣವಾಗಿ ಮಣ್ಣಿಗೆ ನೀಡಬೇಕಾದ ಪೋಷಕಾಂಶಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಮಣ್ಣು ಆರೋಗ್ಯ ಕಾರ್ಡ್ ವಿತರಣೆ:ಮಣ್ಣಿನ ಗುಣಧರ್ಮ, ಫಲವತ್ತತೆ ಹಾಗೂ ಪೋಷಕಾಂಶಗಳ ವಿವರವುಳ್ಳ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ಹಿಡುವಳಿದಾರ ರೈತರಿಗೆ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ವಿಶ್ವ ಮಣ್ಣು ದಿನಾಚರಣೆ ನಿಮಿತ್ತ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಎಂ.ವಿ. ರವಿ ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಬೆಂಗಳೂರು ಐಎಟಿ ಸಂಸ್ಥೆಯ ಕಾರ್ಯದರ್ಶಿ ವೀರಣ್ಣ ಎಸ್. ಕಾಂತರ, ಉಪ ಕೃಷಿ ನಿರ್ದೇಶಕ ಎಲ್. ಸಿದ್ದೇಶ ಸೇರಿದಂತೆ ಜಿಲ್ಲೆಯ ರೈತರು, ಕೃಷಿ ಸಖಿಯರು ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.