ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಕೃಷಿ ತ್ಯಾಜ್ಯಗಳ ಅನುಚಿತ ನಿರ್ವಹಣೆಯಿಂದ ಗಾಳಿ,ನೀರು ಹಾಗೂ ಮಣ್ಣಿನ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಹೇಳಿದರು.ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬ್ಯಾಡಗಿ ಕೃಷಿ ಇಲಾಖೆ ಸಹಯೋಗದಲ್ಲಿ ಬ್ಯಾಡಗಿ ತಾಲೂಕಿನ ಹಿರೇಹಳ್ಳಿ ಗ್ರಾಮದ ಪ್ರಗತಿಪರ ರೈತ ಚಂದ್ರಪ್ಪ ವಾಸನದ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಪೋಸ್ಟ್ ಕಲ್ಚರ್‌ನಿಂದ ಕೃಷಿ ತ್ಯಾಜ್ಯ ವಸ್ತುಗಳ ಕಳಿವಿಕೆಯ ತರಬೇತಿ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.
ಭಾರತದಲ್ಲಿ ಪ್ರತಿ ವರ್ಷ 350 ಮಿಲಿಯನ್ ಟನ್‌ಗಳಷ್ಟು ಕೃಷಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಸರಿಯಾದ ರೀತಿಯಲ್ಲಿ ಅದನ್ನು ನಿರ್ವಹಣೆ ಮಾಡುವುದರಿಂದ ತ್ಯಾಜ್ಯ ಪ್ರಮಾಣವನ್ನು ತಗ್ಗಿಸಬಹುದು. ಬೆಳೆಯುಳಿಕೆಗಳನ್ನು ಕ್ಷೇತ್ರದಲ್ಲಿ ಸುಡುವುದರಿಂದ ಫಲವತ್ತಾದ ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಾಣು ಜೀವಿಗಳು/ಪೋಷಕಾಂಶಗಳು ನಾಶವಾಗಿ ಬೆಳೆಗಳ ಇಳುವರಿ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ಈ ಸಂದರ್ಭದಲ್ಲಿ ಸೂಕ್ಷ್ಮಾಣು ಜೀವಿಗಳ ಮಿಶ್ರಣವಾಗಿರುವ ಕಾಂಪೋಸ್ಟ್ ಕಲ್ಚರನ್ನು ಬಳಸುವುದರಿಂದ ಕೃಷಿ ತ್ಯಾಜ್ಯ ವಸ್ತುಗಳು ತ್ವರಿತವಾಗಿ ಹಾಗೂ ಸಂಪೂರ್ಣವಾಗಿ ಕಳಿತು ಉತ್ತಮ ಗುಣಮಟ್ಟದ ಸಾವಯವ /ಕಾಂಪೋಸ್ಟ್ ಗೊಬ್ಬರ ತಯಾರಾಗುತ್ತದೆ. ಇದನ್ನು ರೈತರು ತಮ್ಮ ಹೊಲಗಳಲ್ಲಿ ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು ಎಂದರು.ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಚಂದ್ರಕಾಂತ ಕೊಟಬಾಗಿ ಮಾತನಾಡಿ, ಕೃಷಿ ತ್ಯಾಜ್ಯ ವಸ್ತು ಅವಶ್ಯಕತೆಗೆ ಅನುಗುಣವಾಗಿ ನೀರು ಬಳಸಿ ಹಸಿ ಮಾಡಬೇಕು. ಪ್ರತಿ ಟನ್ ತ್ಯಾಜ್ಯಕ್ಕೆ 1 ರಿಂದ 2 ಕೆಜಿ ಕಾಂಪೋಸ್ಟ್ ಜೀವಿಗಳ ಮಿಶ್ರಣ 10 ರಿಂದ 15 ಲೀಟರ್ ನೀರಿನಲ್ಲಿ ಬೆರೆಸಿ ಬಳಸಬೇಕು. ದನಗಳ ಸಗಣಿ ದೊರೆಯುವ ಸಂದರ್ಭದಲ್ಲಿ ಎರಡು ಕೆಜಿ ಸಗಣಿ ಗಂಜಲವನ್ನು ನೀರಿನೊಂದಿಗೆ ಬೆರೆಸಿ ಉಪಯೋಗಿಸುವುದರಿಂದ ಸೂಕ್ಷ್ಮಾಣು ಜೀವಿಗಳು ಬೇಗನೆ ವೃದ್ಧಿಯಾಗಿ ಕಳೆಯುವುದಕ್ಕೆ ಸಹಾಯವಾಗುತ್ತದೆ. ಕಾಂಪೋಸ್ಟ್ ತಯಾರಿಸುವ ಗುಂಡಿ ತುಂಬುವಾಗ ಅಥವಾ ಗುಡ್ಡೆ ಹಾಕುವಾಗ ಪ್ರತಿ ಎಂಟರಿಂದ ಹತ್ತು ಇಂಚು ತ್ಯಾಜ್ಯ ಪದರಿಗೆ ಕಾಂಪೋಸ್ಟ್ ಜೀವಿಗಳ ಮಿಶ್ರಣ ತಯಾರಿಸಿ ಸಿಂಪಡಿಸಬೇಕು. ಕೊಟ್ಟಿಗೆ ಗೊಬ್ಬರದೊಂದಿಗೆ ಪ್ರತಿ ಎಕರೆಗೆ 1 ಕಿ ಗ್ರಾಂನಂತೆ ಕಾಂಪೋಸ್ಟ್ ಕಲ್ಚರ್‌ನ್ನು ಮಿಶ್ರಣ ಮಾಡಿ ಕ್ಷೇತ್ರದಲ್ಲಿನ ತ್ಯಾಜ್ಯಗಳ ಮೇಲೆ ಎರಚಬಹುದು ಎಂದರು.
ಕೇಂದ್ರದ ನಿಕ್ರಾ ಯೋಜನೆಯ ಹಿರಿಯ ಸಂಶೋಧಕಿ ಡಾ. ಲಕ್ಷ್ಮೀ ಪಾಟೀಲ ಮಾತನಾಡಿ, ಕಾಂಪೋಸ್ಟ್ ಕಲ್ಚರ್ ಕೃಷಿ ವಿಶ್ವವಿದ್ಯಾಲಯ, ಧಾರವಾಡದಿಂದ ಸಿದ್ಧಪಡಿಸುತ್ತಿದೆ. ಇದರಿಂದ ಸಾವಯವ ಪದಾರ್ಥಗಳು ಅಥವಾ ತ್ಯಾಜ್ಯ ವಸ್ತುಗಳು ನಾಲ್ಕು ಶಿಲೀಂದ್ರಗಳ (ಪ್ಲೊರೋಟಸ್, ಟ್ರೈಕೋಡರ್ಮಾ, ಫೆನಿರೊಕೀಟ್, ಅಸರಿಜಿಲಸ್) ಕ್ರಿಯೆಯಿಂದ ಸಮನಾಗಿ ಮತ್ತು ಶೀಘ್ರವಾಗಿ ವಿಘಟನೆಯಾಗಿ ದುರ್ವಾಸನೆ ರಹಿತ ಉತ್ತಮ ಸಾವಯವ ಗೊಬ್ಬರವಾಗಿ ಪರಿವರ್ತನೆ ಹೊಂದುವುದು. ಸಾಮಾನ್ಯವಾಗಿ ಕೊಟ್ಟಿಗೆ ಗೊಬ್ಬರವು ಕಳಿಯುವುದಕ್ಕೆ ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಈ ಉಪಚಾರದಿಂದ 3 ರಿಂದ 4 ತಿಂಗಳಲ್ಲಿ ಉತ್ತಮ ಕಾಂಪೋಸ್ಟ್ ಗೊಬ್ಬರ ತಯಾರಾಗುವುದು. ಕಾಂಪೋಸ್ಟಿನ ಗುಣಮಟ್ಟ ಸುಧಾರಿಸಿ ಅದರಲ್ಲಿನ ಪೋಷಕಾಂಶಗಳ ಪ್ರಮಾಣ ಹೆಚ್ಚುವುದು. ರೋಗಾಣುಗಳ ಸಂಖ್ಯೆಯನ್ನು ನಿಯಂತ್ರಿಸಿ, ಉಪಯುಕ್ತ ಜೀವಾಣುಗಳ ಸಂಖ್ಯೆ ವೃದ್ಧಿಸಿ, ಮಣ್ಣಿನ ಆರೋಗ್ಯ, ನೀರಿನ ಸಂಗ್ರಹಣೆ ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸಿ ಬೆಳೆಗಳ ಇಳುವರಿ ಹೆಚ್ಚಿಸುತ್ತದೆ ಎಂದರು.ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ವಿವರಿಸಿದರು.
ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ, ಕಾಗಿನೆಲೆ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಪವಿತ್ರಾ ಹಲಗೇರಿ ಹಾಗೂ ಸುಮಾರು 25ಕ್ಕೂ ಹೆಚ್ಚು ಗ್ರಾಮದ ರೈತರು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು.