ಸೋಲಾರ್‌ ಕಂಪನಿ ಭರವಸೆ: ರೈತರ ಧರಣಿ ಹಿಂದಕ್ಕೆ

KannadaprabhaNewsNetwork |  
Published : Oct 12, 2023, 12:00 AM IST
ಕೊಟ್ಟೂರು ತಾಲೂಕು ರಾಂಪುರ ಹೊರ ವಲಯದಲ್ಲಿನ ಸಿಇಪಿಪಿಎಲ್‌ ಕಂಪನಿ ಮುಂದವರಣದಲ್ಲಿ ರೈತರು ನಡೆಸುತ್ತಿದ್ದ ಧರಣಿ ಯಲ್ಲಿ ಕಂಪನಿಯವರು ಪಾಲ್ಗೋಂಡು ಮಾತುಕತೆ ನಡೆಸಿದರು | Kannada Prabha

ಸಾರಾಂಶ

ಕಂಪನಿಯ ಉಪವ್ಯವಸ್ಥಾಪಕ ಮತ್ತು ಅಗ್ರಿಗೇಡರ್‌ ನೀಡಿದ ಭರವಸೆಗೆ ಒಪ್ಪಿಗೆ ನೀಡಿ ಧರಣಿ ಸತ್ಯಾಗ್ರಹವನ್ನು ಹಿಂಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಕೊಟ್ಟೂರು ಸೈಕ್ಲಿಕ್‌ ಎನರ್ಜಿ ಪವರ್ ಲಿಮಿಟೆಡ್‌ ಕಂಪನಿ ತಾಲೂಕಿನ ರಾಂಪುರ ಹೊರವಲಯದಲ್ಲಿ ಸ್ಥಾಪಿಸಿರುವ ಸೋಲಾರ್‌ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ನೀಡಿರುವ ಜಮೀನುಗಳಿಗೆ ಎಲ್ಲ ಬಗೆಯ ಸುರಕ್ಷತೆ ಮತ್ತು ಭದ್ರತೆ ನೀಡಬೇಕು. ಜತೆಗೆ ಜಮೀನುಗಳನ್ನು ಖರೀದಿ ಬದಲು ಲೀಸ್‌ ಆಧಾರದ ಮೇಲೆ ರಿಜಿಸ್ಟ್ರೇಷನ್‌ ಕೆಲವೇ ದಿನಗಳಲ್ಲಿ ಮಾಡಿಕೊಡುವ ಭರವಸೆಯನ್ನು ಕಂಪನಿಯ ಸಹಾಯಕ ವ್ಯವಸ್ಥಾಪಕ ನೀಡಿದ ಹಿನ್ನೆಲೆ ಮಂಗಳವಾರದಿಂದ ರೈತರು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವನ್ನು ಬುಧವಾರ ಹಿಂಪಡೆದರು. ತಾಲೂಕಿನ ರಾಂಪುರ ಬಳಿಯಲ್ಲಿ ಸಿಇಪಿಪಿಎಲ್‌ ಹೆಸರಿನ ಪ್ರೈವೇಟ್ ಕಂಪನಿಯೊಂದು ಘಟಕ ಸ್ಥಾಪಿಸುವ ಉದ್ದೇಶದಿಂದ ಸೌರ ವಿದ್ಯುತ್‌ ಉತ್ಪಾದನೆ ಮಾಡಲು ಬೇಕಿರುವ ಜಮೀನುಗಳನ್ನು ರೈತರಿಂದ 160 ಎಕರೆ ಜಮೀನನ್ನು 29 ವರ್ಷ 11 ತಿಂಗಳ ಗುತ್ತಿಗೆ ಆಧಾರದ ಮೇಲೆ ಪಡೆದಿದ್ದರು. ಕಂಪನಿಯ ನಿಯಮಗಳಂತೆ ಒಂದು ಎಕರೆ ಜಮೀನಿಗೆ ಪ್ರತಿವರ್ಷದಂತೆ ₹30,000 ಕೊಡುವ ಒಪ್ಪಂದ ಮಾಡಕೊಂಡಿತ್ತು. ಜತೆಗೆ ಪ್ರತಿ 3 ವರ್ಷಕ್ಕೊಮ್ಮೆ ಶೇ. 6ರಂತೆ ಹಣವನ್ನು ಹೆಚ್ಚಿಗೆ ಕೊಡುವ ಒಪ್ಪಂದವನ್ನು ಕಂಪನಿ ರೈತರೊಂದಿಗೆ ಮಾಡಿಕೊಂಡಿತ್ತು. ಹೀಗಿದ್ದರೂ ರೈತರು ಮಂಗಳವಾರ ಒಮ್ಮಲೆ ತಮ್ಮ ಜಮೀನುಗಳನ್ನು ಕಂಪನಿಗೆ ಸಂಪೂರ್ಣ ಸ್ವಾಧೀನ ಪಡಿಸಿಕೊಂಡ ಬಗ್ಗೆ ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಸಿಕೊಂಡು ಕಂಪನಿ ಮೋಸ ಮಾಡಲು ಮುಂದಾಗಿದೆ ಎಂದು ಆರೋಪಿಸಿ ಧರಣಿ ನಡೆಸಿದರು. ಬುಧವಾರ ಸ್ಥಳಕ್ಕೆ ಆಗಮಿಸಿದ ಕಂಪನಿಯ ಉಪವ್ಯವಸ್ಥಾಪಕ ರಂಗಸ್ವಾಮಿ ಅಗ್ರಿಗೇಡರ್‌ ಹೇಮಣ್ಣ ಅವರು, ರೈತರೊಂದಿಗೆ ಸಂವಾದ ನಡೆಸಿದರು. ರೈತರ ಇಸಿ ದಾಖಲಾತಿಯಲ್ಲಿ ಕಂಪನಿಯ ಹೆಸರು ಬರುವುದನ್ನು ರದ್ದುಗೊಳಿಸಿ ಮೂಲ ರೈತರ ಜಮೀನಿನ ಮಾಲೀಕರ ಹೆಸರು ಬರುವಂತೆ ಕೆಲವೇ ದಿನಗಳಲ್ಲಿ ಮಾಡಿಕೊಡುತ್ತೇವೆ ಎಂದು ಸ್ಪಷ್ಟ ಭರವಸೆ ನೀಡಿದರಲ್ಲದೆ ಇತರ ಎಲ್ಲ ಸಣ್ಣಪುಟ್ಟ ರೈತರ ಸಮಸ್ಯೆಗಳನ್ನು ಕಂಪನಿ ವತಿಯಿಂದ ಬಗೆಹರಿಸಿಕೊಡುತ್ತೇವೆ ಎಂದು ವಾಗ್ದಾನ ನೀಡಿದರು. ಕಂಪನಿಯ ಉಪವ್ಯವಸ್ಥಾಪಕ ಮತ್ತು ಅಗ್ರಿಗೇಡರ್‌ ನೀಡಿದ ಭರವಸೆಗೆ ಒಪ್ಪಿಗೆ ನೀಡಿ ಧರಣಿ ಸತ್ಯಾಗ್ರಹವನ್ನು ಹಿಂಪಡೆದುಕೊಂಡರು. ರೈತರೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಅವರ ಜಮೀನುಗಳನ್ನು ಲೀಸ್‌ ಆಧಾರದ ಮೇಲೆ ರಿಜಿಸ್ಟ್ರೇಷನ್‌ ಮಾಡಿಸಿಕೊಂಡಿದ್ದು, ಕೆಲ ತಂತ್ರಾಂಶದ ಅಡಚಣೆಯಿಂದ ಸಮಸ್ಯೆಯಾಗಿದೆ. ಇದರಿಂದ ರೈತರು ತಪ್ಪು ತಿಳಿದು ಪ್ರತಿಭಟನೆಗೆ ಇಳಿದಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅವರ ಹೆಸರಿನಲ್ಲಿ ಜಮೀನುಗಳ ರಿಜಿಸ್ಟ್ರೇಷನ್‌ ಸ್ವಂತ ಖರ್ಚಿನಿಂದ ಮಾಡಿಕೊಡುತ್ತೇವೆ. ಇದರಲ್ಲಿ ಹಿಂದೆ ಸರಿಯುವ ಮಾತೆ ಇಲ್ಲ ಎಂದು ಸಿಇಪಿಪಿಎಲ್‌ ಕಂಪನಿಯ ಉಪವ್ಯವಸ್ಥಾಪಕ ರಂಗಸ್ವಾಮಿ ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ