ಸೋಮವಾರಪೇಟೆ ಪ.ಪಂ. ಸಿಬ್ಬಂದಿ ಭ್ರಷ್ಟಾಚಾರ : ಸದಸ್ಯರಿಂದ ಗಂಭೀರ ಆರೋಪ

KannadaprabhaNewsNetwork | Published : Feb 21, 2024 2:01 AM

ಸಾರಾಂಶ

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪಂಚಾಯಿತಿ ಸಿಬ್ಬಂದಿ ಪಂಚಾಯಿತಿ ವ್ಯಾಪ್ತಿಯ ಆಸ್ತಿಯ ಖಾತೆ ವರ್ಗಾವಣೆಗೆ ಸಂಬಂಧಿಸಿದಂತೆ ಭಾರಿ ಲಂಚ ನಡೆಯುತ್ತಿದ್ದು, ಅಕ್ರಮ ದಾಖಲಾತಿ ತಿದ್ದುಪಡಿ ಮಾಡಿ ಜನರಿಂದ ರು. 1.50 ಲಕ್ಷದ ವರೆಗೆ ಲಂಚ ಪಡೆಯುತ್ತಿದ್ದು, ಅಧಿಕಾರಿಗಳ ಗಮನಕ್ಕೆ ತಂದರೂ ನಿಯಂತ್ರಣ ಮಾಡುತ್ತಿಲ್ಲ ಎಂದು ಸದಸ್ಯೆ ಶೀಲಾ ಡಿಸೋಜ, ಜೀವನ್ ಸೇರಿದಂತೆ ಹಲವರು ದೂರಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭ್ರಷ್ಟಾಚಾರದ ಕೂಗು ಪ್ರತಿಧ್ವನಿಸಿದೆ. ಸಾಮಾನ್ಯ ಸಭೆ, ಆಡಳಿತಾಧಿಕಾರಿ ತಹಸೀಲ್ದಾರ್ ವಿ.ಎಸ್. ನವೀನ್ ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಪಂಚಾಯಿತಿ ಸಿಬ್ಬಂದಿ ಪಂಚಾಯಿತಿ ವ್ಯಾಪ್ತಿಯ ಆಸ್ತಿಯ ಖಾತೆ ವರ್ಗಾವಣೆಗೆ ಸಂಬಂಧಿಸಿದಂತೆ ಭಾರಿ ಲಂಚ ನಡೆಯುತ್ತಿದ್ದು, ಅಕ್ರಮ ದಾಖಲಾತಿ ತಿದ್ದುಪಡಿ ಮಾಡಿ ಜನರಿಂದ ರು. 1.50 ಲಕ್ಷದ ವರೆಗೆ ಲಂಚ ಪಡೆಯುತ್ತಿದ್ದು, ಅಧಿಕಾರಿಗಳ ಗಮನಕ್ಕೆ ತಂದರೂ ನಿಯಂತ್ರಣ ಮಾಡುತ್ತಿಲ್ಲ ಎಂದು ಸದಸ್ಯೆ ಶೀಲಾ ಡಿಸೋಜ, ಜೀವನ್ ಸೇರಿದಂತೆ ಹಲವರು ದೂರಿದರು.

ಸಂಬಂಧಿಸಿದ ಪ್ರಕರಣಗಳಿಗೆ ದಾಖಲೆ ನೀಡಲು ನಾವು ಸಿದ್ಧರಿದ್ದು, ಅಧಿಕಾರಿಗಳು ಕ್ರಮ ತೆಗೆದುಕೊಂಡು ಸಿಬ್ಬಂದಿಯನ್ನು ವಜಾಗೊಳಿಸಬೇಕು ಹಾಗೂ ಖಾತೆ ವರ್ಗಾವಣೆಯನ್ನು ಸಾಮಾನ್ಯ ಸಭೆಯಲ್ಲಿಟ್ಟು ನಿರ್ಣಯಿಸಿ ಮಾಡುವಂತೆ ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಮಾತನಾಡಿ, ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಿದರೆ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.ಕಾಮಗಾರಿ ವಿಳಂಬ: ನಗರೋತ್ಥಾನ ಯೋಜನೆಯಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ರು. 5 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಅವಧಿ ಮುಗಿದರೂ, ಯಾವುದೇ ಕಾಮಗಾರಿಗಳು ಮುಗಿಯದ ಬಗ್ಗೆ ಸದಸ್ಯರಾದ ಜೀವನ್, ಮೋಹಿನಿ ಆರೋಪಿಸಿದರು. ಯಾವುದೇ ಕಾಮಗಾರಿಯಾದರೂ, ಸಂಬಂಧಿಸಿದ ಎಂಜಿನಿಯರ್ ಸ್ಥಳಕ್ಕೆ ಬಂದು ಕಾಮಗಾರಿ ವೀಕ್ಷಣೆ ಮಾಡದಿಲ್ಲದಿರುವುದರಿಂದ ಕಾಟಾಚಾರದ ಕೆಲಸವಾಗುತ್ತಿದೆ ಎಂದು ಸದಸ್ಯ ಚಂದ್ರು ಹೇಳಿದರು. ನಿಲ್ಲಿಸಿರುವ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.ಈಗಾಗಲೇ ನಗರೋಥ್ಥಾನ ಯೋಜನೆಯಲ್ಲಿ ಕೆಲಸ ನಡೆಯುತ್ತಿರುವ ಸ್ಥಳಕ್ಕೆ ಎಂಜಿನಿಯರ್‌ಗಳು ಆಗಮಿಸಿ ವೀಕ್ಷಣೆ ಮಾಡಿದ್ದಾರೆ. ಉಳಿದಿರುವ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸುವಂತೆ ಗುತ್ತಿಗೆದಾರನಿಗೆ ಸೂಚಿಸಿದ್ದು, ಕಾಮಗಾರಿ ಪ್ರಾರಂಭಿಸುವುದಾಗಿ ಗುತ್ತಿಗೆದಾರರು ತಿಳಿಸಿರುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.

ಕೆಲವು ಕಾರ್ಯಕ್ರಮಗಳು ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಸಲಾಗುತ್ತಿದೆ. ಇದರಿಂದ ಖಾಸಗಿ ಬಸ್‍ಗಳ ಸಂಚಾರಕ್ಕೆ, ಅಂಗಡಿ ಮುಂಗಟ್ಟುಗಳ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ. ಇಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು. ಶಾಲಾ ಮೈದಾನದಲ್ಲಿ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಸದಸ್ಯ ಮೃತ್ಯುಂಜಯ ಹೇಳಿದರು.

ಪಟ್ಟಣದಲ್ಲಿ ಸರಿಯಾದ ವೇದಿಕೆ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಬೇಡ. ಶಾಲಾ ಮೈದಾನದಲ್ಲಿ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.

ಪಟ್ಟಣದಲ್ಲಿಕಾರ್ಯಕ್ರಮಗಳನ್ನು ನಡೆಸುವಾಗ ಪಟ್ಟಣದೆಲ್ಲೆಡೆ ಫ್ಲೆಕ್ಸ್‌ಗಳನ್ನು ಹಾಕಿ ಹಾಗೆಯೇ ಬಿಡುತ್ತಿರುವುದರಿಂದ ಪಟ್ಟಣದ ಅಂದ ಹಾಳಾಗುತ್ತಿದೆ. ಕಾರ್ಯಕ್ರಮ ಮುಗಿದ ಮೂರು ದಿನಗಳ ಒಳಗೆ ಪ್ಲೆಕ್ಸ್ ತೆಗೆಯಲು ಅನುಮತಿ ನೀಡುವಾಗಲೇ ಆಯೋಜಕರಿಗೆ ತಿಳಿಸಬೇಕು ಮತ್ತು ಅವರಿಂದ ಹೆಚ್ಚಿನ ಠೇವಣಿ ಪಡೆದುಕೊಳ್ಳಬೇಕೆಂದು ಶೀಲಾ ಡಿಸೋಜಾ, ಶುಭಾಕರ ತಿಳಿಸಿದರು. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

Share this article