ದ್ರಾಕ್ಷಿ ಬೆಳೆಗಾರರಿಗೆ ಹುಳಿಯಾದ ಫೆಂಗಲ್‌!

KannadaprabhaNewsNetwork | Published : Dec 5, 2024 12:30 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರಫೆಂಗಲ್‌ ಚಂಡಮಾರುತ ತಮಿಳುನಾಡು, ಆಂಧ್ರ, ಕರ್ನಾಟಕ ಸೇರಿದಂತೆ ದ.ಭಾರತದ ಬಹುತೇಕ ರಾಜ್ಯಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಕೇವಲ ಮಳೆಯನ್ನು ಮಾತ್ರ ಅದು ತಂದಿಲ್ಲ. ಅದರೊಟ್ಟಿಗೆ ರೈತರ ಬೆಳೆಗಳ ಮೇಲೂ ಪರಿಣಾಮ ಬೀರಿದ್ದು, ರೈತರಿಗೆ ಆರ್ಥಿಕ ನಷ್ಟವನ್ನೂ ತಂದೊಡ್ಡಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರಫೆಂಗಲ್‌ ಚಂಡಮಾರುತ ತಮಿಳುನಾಡು, ಆಂಧ್ರ, ಕರ್ನಾಟಕ ಸೇರಿದಂತೆ ದ.ಭಾರತದ ಬಹುತೇಕ ರಾಜ್ಯಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಕೇವಲ ಮಳೆಯನ್ನು ಮಾತ್ರ ಅದು ತಂದಿಲ್ಲ. ಅದರೊಟ್ಟಿಗೆ ರೈತರ ಬೆಳೆಗಳ ಮೇಲೂ ಪರಿಣಾಮ ಬೀರಿದ್ದು, ರೈತರಿಗೆ ಆರ್ಥಿಕ ನಷ್ಟವನ್ನೂ ತಂದೊಡ್ಡಿದೆ.

ಅದರಂತೆ ವಿಜಯಪುರ ಜಿಲ್ಲೆ ಹಾಗೂ ಗಡಿ ಭಾಗ ಬೆಳಗಾವಿ ಜಿಲ್ಲೆಯ ಅಥಣಿ ಭಾಗದಲ್ಲಿ ಹೆಚ್ಚು ಬೆಳೆಯುವ ದ್ರಾಕ್ಷಿಯ ಮೇಲೆಯೂ ಫೆಂಗಲ್‌ ಹೆಚ್ಚು ಪರಿಣಾಮ ಬೀರಿದೆ. ಹೀಗಾಗಿ ದ್ರಾಕ್ಷಿ ಬೆಳೆಯುವ ರೈತರ ಕಣ್ಣಲ್ಲಿ ನೀರು ಬರುವ ಸ್ಥಿತಿ ನಿರ್ಮಾಣವಾಗಿದೆ. ಚಂಡಮಾರುತದ ಪರಿಣಾಮವಾಗಿ ವರ್ಷಾನುಗಟ್ಟಲೇ ಕಷ್ಟಪಟ್ಟು ಬೆಳೆಯುವ ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ. ಇದರಿಂದಾಗಿ ದ್ರಾಕ್ಷಿ ಬೆಳೆಗಾರರು ಆರ್ಥಿಕ ನಷ್ಟದ ಭೀತಿಯಲ್ಲಿದ್ದಾರೆ. ಹೀಗಾಗಿ ಫೆಂಗಲ್‌ ಚಂಡಮಾರುತದಿಂದ ಉಂಟಾಗಿರುವ ದ್ರಾಕ್ಷಿ ಹಾನಿಯನ್ನು ರಕ್ಷಣೆ ಮಾಡುವಲ್ಲಿ ರೈತರು ಈಗ ಪರದಾಟ ನಡೆಸಿದ್ದಾರೆ.

ದ್ರಾಕ್ಷಿ ಮೇಲೆ ಫೆಂಗಲ್ ಪರಿಣಾಮ:

ರಾಜ್ಯದಲ್ಲಿ ಅದರಲ್ಲೂ ದ್ರಾಕ್ಷಿ ಹೆಚ್ಚಾಗಿ ಬೆಳೆಯುವ ಉತ್ತರ ಕರ್ನಾಟಕ ಭಾಗದಲ್ಲಿ ಫೆಂಗಲ್ ಚಂಡಮಾರುತ ಆಕ್ರಮಿಸಿರುವುದರಿಂದ ಬಿಸಿಲು ಮಾಯವಾಗಿದೆ. ರಾತ್ರಿಯಿಡಿ ಮಂಜು ಕವಿದ ವಾತಾವರಣ, ಆಗಾಗ ತುಂತುರು ಮಳೆ ಸುರಿಯುತ್ತಿರುವುದರಿಂದ ದ್ರಾಕ್ಷಿ ಬೆಳೆಗೆ ಅಡಚಣೆ ಉಂಟಾಗಿದೆ. ಹೀಗಾಗಿ ಇನ್ನೇನು ಕೈಗೆ ಬರಲಿರುವ ದ್ರಾಕ್ಷಿ ಬೆಳೆ ಹಾಳಾಗುವ ಸಾಧ್ಯತೆ ಇದೆ. ಇದರಿಂದ ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಎದೆಯಲ್ಲಿ ಢವಢವ ಶುರುವಾಗಿದೆ.

ಸದ್ಯ ದ್ರಾಕ್ಷಿ ಬೆಳೆಗೆ ಬಿಸಿಲು ಬೇಕಿರುವ ಸಮಯದಲ್ಲಿ ಮಂಜಿನ ಪರಿಣಾಮದಿಂದ ವಾತಾವರಣದಲ್ಲಿ ಭಾರೀ ಬದಲಾವಣೆಯಾಗಿದೆ. ಫೆಂಗಲ್ ಚಂಡಮಾರುತದಿಂದಾಗಿ ಜಿಲ್ಲೆಯಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ದ್ರಾಕ್ಷಿ ಬೆಳೆಗೆ ಭಯಾನಕ ರೋಗ ಹರಡುವ ಭೀತಿ ಎದುರಾಗಿದೆ.

ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ ಎಷ್ಟು..?:

ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಅದರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ರೈತರು ದ್ರಾಕ್ಷಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೆರ್‌ನಲ್ಲಿ ಬೆಳೆಯಲಾಗಿರುವ ದ್ರಾಕ್ಷಿ ಬೆಳೆಗೆ ದವಣೆ ರೋಗದ ಕಾಟ ಶುರುವಾಗಿದೆ. ಈಗಾಗಲೇ ಕೆಲ ರೈತರ ಜಮೀನುಗಳಲ್ಲಿ ದವಣೆ ರೋಗ ವಕ್ಕರಿಸಿದೆ. ಇದರ ಜೊತೆಗೆ ಬೂದು ರೋಗ, ಡೌನಿಮಿಲ್ಡಿವ್, ಹಣ್ಣು ಕೊಳೆ ರೋಗ ಹರಡುವ ಸಾಧ್ಯತೆಯೂ ಇದೆ. ರೋಗದ ಪರಿಣಾಮ ಹಾಗೂ ವಾತಾವರಣದ ಪರಿಣಾಮವಾಗಿ ದ್ರಾಕ್ಷಿ ಹೂಗಳು ಕೊಳೆಯುತ್ತಿದ್ದು, ಕಾಳುಗಳು ಉದುರುತ್ತಿವೆ.

ದ್ರಾಕ್ಷಿಗೆ ಬಾಧಿತವಾಗಿರುವ ರೋಗಗಳನ್ನು ಕಂಟ್ರೋಲ್ ಮಾಡಲು ರೈತರು ಪರದಾಡುತ್ತಿದ್ದಾರೆ. ಯಾಕೆಂದರೆ ರೋಗ ಉಲ್ಬಣಿಸುವ ಕಾರಣ ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧಿ ಸಿಂಪಡಿಸಬೇಕಿದೆ. ನಿತ್ಯ ಪ್ರತಿ ಎಕರೆಗೆ 5 ರಿಂದ 6 ಸಾವಿರ ವೆಚ್ಚದ ಔಷಧಿ ಸಿಂಪಡಿಸುವ ಅನಿವಾರ್ಯತೆ ಎದುರಾಗಿದೆ. ಇಂತಹ ಸಮಯದಲ್ಲಿ ಸರ್ಕಾರ ರೈತರ ನೆರವಿಗೆ ಬಂದು ರಿಯಾಯಿತಿ ದರದಲ್ಲಿ ಔಷಧಿ ಕೊಡುವುದು, ಬೆಳೆ ವಿಮೆಯ ಹಣ ಹೆಚ್ಚಿಸುವುದು, ಪರಿಹಾರ ಕೊಡುವ ಕೆಲಸ ಮಾಡಬೇಕಿದೆ ಎಂಬುದು ಬೆಳೆ ಹಾನಿಗೊಳಗಾಗಿರುವ ರೈತರ ಮನವಿ.

-------ಕೋಟ್.....

ಪ್ರತಿ ಎಕರೆಗೆ ₹ 2 ಲಕ್ಷ ಖರ್ಚುಮಾಡಿ ಬೆಳೆಯುವ ದ್ರಾಕ್ಷಿ ಹವಾಮಾನ ವೈಪರೀತ್ಯಕ್ಕೆ ಸಿಲುಕಿದರೆ ಸಂಕಷ್ಟವಾಗಲಿದೆ. ನಾವು ಎಂಟು ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದು, ಈಗಿನ ವಾತಾವರಣದಿಂದ ನಿತ್ಯ ಎಕರೆಗೆ ₹ 4 ರಿಂದ 5 ಸಾವಿರ ಔಷಧಿ ಸಿಂಪಡಿಸುತ್ತಿದ್ದೇವೆ. ರೈತರಿಗೆ ಆಗಿರುವ ಹಾನಿಯನ್ನು ಕೊಡಲು ತಕ್ಷಣ ಸರ್ಕಾರ ಮುಂದಾಗಬೇಕು.

ಚಂದ್ರಶೇಖರ ಪೂಜಾರಿ, ಉಪ್ಪಲದಿನ್ನಿ ದ್ರಾಕ್ಷಿ ಬೆಳೆಗಾರರೈತರು ದ್ರಾಕ್ಷಿ ಸಸಿಗಳನ್ನು ಹಚ್ಚಲು ಎಕರೆಗೆ ₹ 4 ಲಕ್ಷ ಖರ್ಚು ಮಾಡಿರುತ್ತಾರೆ. ಅದನ್ನು ತೆಗೆಯಬೇಕಾದರೆ ಈಗ ಮತ್ತೆ ₹ 50 ಸಾವಿರ ಖರ್ಚಾಗಲಿದೆ. ಅಲ್ಲದೆ ಒಂದು ಬೆಳೆಯಿಂದ ಮತ್ತೊಂದು ಬೆಳೆಗೆ ಹೋದರು ರೈತರಿಗೆ ಹಾನಿ ತಪ್ಪಿದ್ದಲ್ಲ. ಎಕರೆಗೆ 4 ಟನ್ ಒಣದ್ರಾಕ್ಷಿ ಇಳುವರಿ ಬಂದು ಅದು ಪ್ರತಿ ಕೆಜಿಗೆ ₹ 150 ರೂಪಾಯಿ ಮೇಲೆ ಮಾರಾಟವಾಗಬೇಕು. ಅಂದಾಗ ಮಾತ್ರ ಎಕರೆಗೆ ₹3 ಲಕ್ಷ ಲಾಭ ಸಿಗಲು ಸಾಧ್ಯ. ಈಗ ವಾತಾವರಣದಲ್ಲಿ ಏರುಪೇರಾಗಿದ್ದರಿಂದ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು.

- ಗುರುಲಿಂಗಪ್ಪ ಅಂಗಡಿ, ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ

Share this article