ಮಹೇಂದ್ರ ದೇವನೂರು
ದಕ್ಷಿಣಕಾಶಿ ಎಂದೇ ಪ್ರಸಿದ್ಧಿಯಾಗಿರುವ ತಿರುಮಕೂಡಲು ನರಸೀಪುರದಲ್ಲಿ ಕುಂಭಮೇಳ ಫೆ. 10 ರಿಂದ 12 ರವರೆಗೆ ನಡೆಯಲಿದೆ.
ಕಾವೇರಿ, ಕಪಿಲಾ ಮತ್ತು ಗುಪ್ತಗಾಮಿ ಸ್ಪಟಿಕ ಸರೋವರಗಳ ಸಂಗಮವಾದ ತಿರುಮಕೂಡಲು ನರಸೀಪುರದ ಗುಂಜಾ ನರಸಿಂಹಸ್ವಾಮಿ ದೇವಾಲಯ ಮತ್ತು ಅಗಸ್ತೇಶ್ವರ ದೇವಾಲಯದ ಬಳಿ ಈ ಮೇಳ ನಡೆಯಲಿದ್ದು, ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಕೈಗೊಂಡಿರುವ ಸಿದ್ಧತೆ, ಕುಂಭಮೇಳದ ಇತಿಹಾಸ, ನಡೆದುಬಂದ ಹಾದಿಯ ನೋಟ ಇಲ್ಲಿದೆ.
1. ಟಿ ನರಸೀಪುರ ಕುಂಭಮೇಳದ ಇತಿಹಾಸ
ಅನಾದಿ ಕಾಲದಿಂದಲೂ ಋಷಿಮುನಿಗಳು, ರಾಜಮಹಾರಾಜರು ಆಚರಿಸಿಕೊಂಡು ಬರುತ್ತಿದ್ದ ಕುಂಭಮೇಳ ಈಗಲೂ ಮುಂದುವರಿದಿದೆ. ಉತ್ತರದ ಪ್ರಯಾಗ್‌ರಾಜ್‌ಗೆ ಕೋಟ್ಯಂತರ ಮಂದಿ ಭೇಟಿ ನೀಡುತ್ತಾರೆ. ಈ ಮಹಾಕುಂಭ ಮೇಳವಂತೂ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಬಡವರು, ಮಧ್ಯಮ ವರ್ಗದ ಅನೇಕರಿಗೆ ಅಲ್ಲಿನ ಪುಣ್ಯಸ್ನಾನದ ಸೌಭಾಗ್ಯ ಲಭಿಸುವುದು ಕಷ್ಟ. ಎಷ್ಟೋ ಮಂದಿಗೆ ಪ್ರಯಾಗ್‌ರಾಜ್ ಭೇಟಿಯೂ ಸಾಧ್ಯವಾಗುವುದಿಲ್ಲ.
ಇದನ್ನು ತಪ್ಪಿಸಿ ಜನರು ಪುಣ್ಯಸ್ನಾನದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ದಕ್ಷಿಣ ಭಾರತದ ಏಕೈಕ ತ್ರಿವೇಣಿ ಸಂಗಮವಾದ ತಿರುಮಕೂಡಲು ನರಸೀಪುರದಲ್ಲಿ 1989 ರಿಂದ ಕುಂಭ ಮೇಳವನ್ನು ಆರಂಭಿಸಲಾಗಿದೆ. ಅಲ್ಲಿಂದ ಈವರೆಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಕುಂಭಮೇಳ ನಡೆದುಕೊಂಡು ಬರುತ್ತಿದೆ. ಕೋವಿಡ್-19 ಕಾರಣದಿಂದಾಗಿ ಮೂರು ವರ್ಷಗಳ ಹಿಂದೆ ಕುಂಭಮೇಳ ನಡೆದಿರಲಿಲ್ಲ. ಹೀಗಾಗಿ ಆರು ವರ್ಷಗಳ ನಂತರ ಈ ಬಾರಿಯ ಕುಂಭಮೇಳ ನಡೆಯುತ್ತಿದೆ.
ಕೂಡಲಸಂಗಮದಲ್ಲಿರುವ ತ್ರಿವೇಣಿ ಸಂಗಮ ಕ್ಷೇತ್ರವು ಈಗ ದಕ್ಷಿಣ ಭಾರತದಲ್ಲೇ ಜನಪ್ರಿಯತೆ ಗಳಿಸಿದೆ. ಕಾವೇರಿ, ಕಪಿಲ ಮತ್ತು ಸ್ಫಟಿಕ ಸರೋವರಗಳ ಸಂಗಮವಾದ ಇಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಕುಂಭ ಮೇಳ ನಡೆಸಿಕೊಂಡು ಬರಲಾಗುತ್ತಿದೆ. ಕೋವಿಡ್‌ಕಾರಣಕ್ಕೆ 2022ರಲ್ಲಿ ಕುಂಭ ಮೇಳ ನಡೆಯಲಿಲ್ಲ. ಉಳಿದಂತೆ 1989, 1992, 1995, 1998, 2001, 2004, 2007, 2010, 2013, 2016, 2019 ರಲ್ಲಿ ಕುಂಭಮೇಳ ನಡೆದಿದೆ. ಈ ಬಾರಿಯದು 13ನೇ ಕುಂಭಮೇಳ.
2. ಕುಂಭಮೇಳದ ಮಹತ್ವ
ಈ ಕುಂಭಮೇಳ ಹಿಂದೂಗಳಿಗೆ ಧಾರ್ಮಿಕವಾಗಿ ಅತ್ಯಂತ ಮಹತ್ವದ್ದಾಗಿದೆ. ಪ್ರತಿ ಕುಂಭಮೇಳ ಸಂದರ್ಭದಲ್ಲೂ ಲಕ್ಷಾಂತರ ಹಿಂದೂಗಳು ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಜಾತಿ, ಮತ, ಪ್ರದೇಶದ ಎಲ್ಲಾ ಲೌಕಿಕ ಅಡೆತಡೆಗಳನ್ನು ಲೆಕ್ಕಿಸದೆ ಕುಂಭಮೇಳವು ಸಾಮಾನ್ಯ ಭಾರತೀಯರ ಮನಸ್ಸು ಮತ್ತು ಕಲ್ಪನೆಯ ಮೇಲೆ ಅದ್ಭುತ ಪ್ರಭಾವ ಬೀರಿದೆ.
ಕುಂಭಮೇಳವು ವಿಶ್ವದಲ್ಲೇ ಅತಿ ಹೆಚ್ಚು ಧಾರ್ಮಿಕ ಸಭೆಗಳು ನಡೆಯುವ ಸ್ಥಳ. ಹಿಂದೂ ಪುರಾಣಗಳ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಪಾಪಗಳನ್ನು ಬಿಡಿಸಿ ಜನನ ಮತ್ತು ಪುನರ್ಜನ್ಮದ ವಿಷ ಚಕ್ರದಿಂದ ನಿರ್ವಾಣ ಸಾಧಿಸಲು ಜಗತ್ತಿನ ಏಕೈಕ ಸಮಯ ಮತ್ತು ಸ್ಥಳ ಇದು. ವ್ಯಕ್ತಿಯ ಎಲ್ಲಾ ಪಾಪಗಳನ್ನು ತೊಳೆಯುತ್ತದೆ ಎಂದು ಹೇಳಲಾಗುವ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ. ದೀಪ ಬೆಳಗಿಸಿ ಮತ್ತು ಆಸೆಯನ್ನು ಸಲ್ಲಿಸಿದರೆ ಅವು ನಿಜವಾಗುತ್ತವೆ.
ಪವಿತ್ರ ನೀರಿನಲ್ಲಿ ಪವಿತ್ರ ಸ್ನಾನ ಮಾಡಲು ಮತ್ತು ಹಿಂದೆ ಮಾಡಿದ ಎಲ್ಲಾ ಪಾಪ ತೊಳೆಯಲು ಅವರಿಗೆ ಅವಕಾಶ ಕೊಡುತ್ತದೆ ಹಾಗೂ ತ್ರಿವೇಣಿ ಸಂಗಮದ ನೀರಿನಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
3. ಟಿ ನರಸೀಪುರದ ಐತಿಹ್ಯ
ದಕ್ಷಿಣಕಾಶಿ ಖ್ಯಾತಿಯ ಟಿ. ನರಸೀಪುರ ಮೈಸೂರು ಜಿಲ್ಲೆಯ ಒಂದು ಪಟ್ಟಣ. ಇದರ ಮೊದಲ ಹೆಸರು ತಿರುಮಕೂಡಲು ಎಂಬುದು ಇಲ್ಲಿ ಸೇರುವ ನದಿಗಳ ಸಂಗಮದ ಸ್ಥಳವನ್ನು (ಸಂಸ್ಕೃತದಲ್ಲಿ ತ್ರಿಮಕೂಟವೇಂದು ಕಾವೇರಿ, ಕಬಿನಿ ಮತ್ತು ಸ್ಪಟಿಕ ಸರೋವರದ ಸಂಗಮ) ಸ್ಪಟಿಕ ಸರೋವರದ ಒಂದು ಪೌರಾಣಿಕ ಸರೋವರ ಅಥವಾ ಚಿಲುಮೆ, ಇದು ಗುಪ್ತ ಗಾಮಿನಿಯಾಗಿದೆ ಎನ್ನುತ್ತಾರೆ. ಕಾಲಾನಂತರ ಈ ಚಿಲುಮೆ ಕಣ್ಮರೆಯಾಗಿರಬಹುದು.
ಈ ತಾಲೂಕಿನ ಕೆಲವು ಭೂಮಿಗಳಲ್ಲಿ ಉತ್ಖನನದಿಂದ ನವಶಿಲಾಯುಗದ ಪಳೆಯುಳಿಕೆಗಳು ಕಂಡುಬಂದಿವೆ. ಪುರಂದರ ದಾಸರ ಗುರುಗಳಾದ ವ್ಯಾಸತೀರ್ಥರು ಮತ್ತು ಪಿಟೀಲು ವಾದಕರಾದ ಟಿ. ಚೌಡಯ್ಯ ಅವರು ಈ ತಾಲೂಕಿನಲ್ಲಿ ಜನಿಸಿದರು. ಪಶ್ಚಿಮ ಗಂಗ ರಾಜವಂಶದ ರಾಜಧಾನಿ ತಲಕಾಡು ಈ ತಾಲೂಕಿನಲ್ಲಿದೆ.
ಸ್ಕಂದ ಪುರಾಣದಲ್ಲಿ ತ್ರಿಮಕೂಟ ಕ್ಷೇತ್ರಗಳಲ್ಲಿ (ಮೂರು ನದಿಗಳ ಸಂಗಮದಲ್ಲಿರುವ ಪವಿತ್ರ ಸ್ಥಳಗಳು) ಒಂದು ಎಂದು ಉಲ್ಲೇಖವೂ ಇದೆ. ನರಸೀಪುರ ಎಂಬ ಪದವು ಪಟ್ಟಣದ ಹೆಸರು, ಇದು ಕಬಿನಿ (ಕಪಿಲಾ) ನದಿಯ ಬಲದಂಡೆಯಲ್ಲಿರುವ ಪ್ರಸಿದ್ಧ ಗುಂಜಾ ನರಸಿಂಹಸ್ವಾಮಿ ದೇವಾಲಯದಿಂದ ಬಂದಿದೆ. ಟಿ.ನರಸೀಪುರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಪ್ರಾಗೈತಿಹಾಸಿಕ ಸ್ಥಳವಾಗಿದೆ.
ಐವತ್ತರ ದಶಕದ ಉತ್ತರಾರ್ಧದಲ್ಲಿ ಮತ್ತು ಅರವತ್ತರ ದಶಕದ ಮಧ್ಯಭಾಗದವರೆಗೆ (1959 ಮತ್ತು 1965 ರ ನಡುವೆ) ಉತ್ಖನನ ಮಾಡಿದಾಗ ಕಾವೇರಿಯ ಎಡದಂಡೆಯ ಭಿಕ್ಷೇಶ್ವರ ದೇವಸ್ಥಾನದ ಬಳಿ, ನರಸೀಪುರ ಪಟ್ಟಣದ ಎದುರು, ಕಾವೇರಿ ಜಲಾನಯನ ಪ್ರದೇಶದ ಭಾಗದಲ್ಲಿ ನವಶಿಲಾಯುಗವು ಇಲ್ಲಿ ನೆಲಸಿತ್ತು ಎನ್ನುವುದಕ್ಕೆ ದಾಖಲೆಗಳು ಸಿಕ್ಕಿವೆ. ಈ ಪ್ರದೇಶದಲ್ಲಿ ಹಂತ ಹಂತವಾಗಿ ಕೃಷಿ ವಿಕಸಿತಗೊಂಡು ಆಹಾರ ಉತ್ಪಾದನೆ ಮತ್ತು ನಾಗರಿಕತೆ ಬೆಳವಣಿಗೆಗೆ ಕಾರಣವಾಗಿ ಸಮುದಾಯಗಳು ಇಲ್ಲಿ ನೆಲಸಿರುವುದನ್ನು ಕಾಣಬಹುದು. ಸಮಾಧಿ ಭೂಮಿಯ ಅವಶೇಷಗಳು, ಕುಂಬಾರಿಕೆಗಳು, ಗೀಚುಬರಹಗಳು, ಕಲ್ಲಿನ ಉಪಕರಣಗಳು, ಲೋಹದ ವಸ್ತುಗಳು, ಮಣಿಗಳು ಮತ್ತು ಬಳೆಗಳು, ಪ್ರಾಣಿಗಳ ಅವಶೇಷಗಳು, ಮಾನವ ಅವಶೇಷಗಳು, ಮರದ ಅವಶೇಷಗಳು ಇತ್ಯಾದಿಗಳನ್ನು ಒಳಗೊಂಡಿರುವ ವಸ್ತುಗಳು ಉತ್ಖನದ ಕಾಲದಲ್ಲಿ ದೊರೆತಿವೆ.
ಗಂಗರ ರಾಜಧಾನಿಯಾಗಿದ್ದ ತಲಕಾಡು ಅನೇಕ ಪುರಾಣ ಕತೆ ಮತ್ತು ಐತಿಹಾಸಕ ಸ್ಥಳವಾದರೆ, ಸೋಮನಾಥಪುರದಲ್ಲಿ ಹೊಯ್ಸಳರು ಪ್ರಖ್ಯಾತ ಸೋಮನಾಥ ದೇವಾಲಯವನ್ನು ನಿರ್ಮಿಸಿದ್ದು, ಈ ದೇವಾಲಯವು ಈಗ ಯುನೆಸ್ಕೋ ಮಾನ್ಯತೆ ಹೊಂದಿದೆ.
4. ಟಿ ನರಸೀಪುರಕ್ಕೆ ಬರುವುದು ಹೇಗೆ ರೈಲು ಬಸ್ಸು ಕಾರಿನಲ್ಲಿ ದಾರಿ ಹೇಗೆ?
ಬಸ್ಸಲ್ಲಿ ಪ್ರಯಾಣದರ ಅಂದಾಜು ಎಷ್ಟು?
ಟಿ. ನರಸೀಪುರವು ಮೈಸೂರು ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದು, ಮೈಸೂರಿನಿಂದ 32 ಕಿ.ಮೀ. ದೂರದಲ್ಲಿದೆ. ದಕ್ಷಿಣಕ್ಕೆ ಚಾಮರಾಜನಗರ ಜಿಲ್ಲೆ ಮತ್ತು ಉತ್ತರಕ್ಕೆ ಮಂಡ್ಯ ಜಿಲ್ಲೆ ಇದೆ. ಅಂದರೆ ಮೈಸೂರು ಮಾತ್ರವಲ್ಲದೆ ಮಂಡ್ಯ, ಚಾಮರಾಜನಗರ, ಕೊಳ್ಳೇಗಾಲದ ಮೂಲಕವೂ ಟಿ. ನರಸೀಪುರ ತಲುಪಬಹುದು.
ರಸ್ತೆ ಸಾರಿಗೆಯ ಮೂಲಕ ಮಾತ್ರವೇ ಟಿ. ನರಸೀಪುರ ತಲುಪಲು ಸಾಧ್ಯವಿದೆ. ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವವರು ಮೈಸೂರಿಗೆ ರಸ್ತೆ, ರೈಲು ಅಥವಾ ವಿಮಾನದ ಮೂಲಕವೂ ತಲುಪಿ, ಮೈಸೂರಿನಿಂದ ನರಸೀಪುರಕ್ಕೆ ಸಾರ್ವಜನಿಕ ಸಾರಿಗೆ ಅಥವಾ ಸ್ವಂತ ವಾಹನದಲ್ಲಿ ಕೊಳ್ಳೆಗಾಲ ಮಾರ್ಗದಲ್ಲಿ ಬಂದರೆ ನರಸೀಪುರ ತಲುಪಬಹುದು.
5. ಕುಂಭ ಮೇಳಕ್ಕೆ ಸಿದ್ಧತೆ ಹೇಗಿದೆ? ಪುಣ್ಯ ಸ್ನಾನ ಮಾಡುವ ಸಂಗಮದ ಸ್ಥಳಕ್ಕೆ
ಹೋಗುವುದು ಹೇಗೆ? ಅಲ್ಲಿ ಸುರಕ್ಷತೆ ಹೇಗಿದೆ?
ಸೋಮವಾರದಿಂದ ನಡೆಯುವ ಧಾರ್ಮಿಕ ಉತ್ಸವಕ್ಕೆ ಸಿದ್ಧತಾ ಕಾರ್ಯ ಮುಕ್ತಾಯವಾಗಿದೆ. ರಾತ್ರಿಯಿಡಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯ ಸೌಂದರ್ಯದಿಂದಾಗಿ ಆಕರ್ಷಣೀಯವಾಗಿ ಕಾಣುತ್ತಿದೆ. ಕುಂಭಮೇಳಕ್ಕೆ ರಸ್ತೆ ದುರಸ್ತಿ ಕಾರ್ಯ ನಡೆದಿದೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಕುಂಭಮೇಳ ಸಾಂಗವಾಗಿ ನಡೆಯತ್ತಿದ್ದು, ಧಾರ್ಮಿಕ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.
ನದಿ ಒಳಗೆ ಬೊಂಬುಗಳಿಂದ ತಡೆ ಬೇಲಿ ನಿರ್ಮಿಸಲಾಗಿದೆ. ನದಿ ಪಾತ್ರದ ಹಲವೆಡೆ ಮುಳುಗು ತಜ್ಞರನ್ನು ನಿಯೋಜಿಸಲಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ನೂರಾರು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಫೆ.12 ರಂದು ಸಾವಿರಾರು ಜನರು ಕುಂಭಸ್ನಾನ ಮಾಡಲಿದ್ದು, ಅಂದು ಬೆಳಗ್ಗೆ 9 ರಿಂದ 9.30 ರೊಳಗಿನ ಶುಭ ಮೀನಲಗ್ನ ಮತ್ತು ಮಧ್ಯಾಹ್ನ 12 ರಿಂದ 1 ಗಂಟೆಯೊಳಗಿನ ಶುಭ ವೃಷಭ ಲಗ್ನದಲ್ಲಿ ಕುಂಭಮೇಳದ ಪುಣ್ಯಸ್ನಾನ ಮಾಡಲು ಮುಹೂರ್ತ ನಿಗದಿಪಡಿಸಲಾಗಿದೆ.
ಹೀಗಾಗಿ ಪುಣ್ಯ ಸ್ನಾನ ವಾಡಲು ಅಗಸ್ತ್ಯೇಶ್ವರ, ಗುಂಜಾ ನರಸಿಂಹಸ್ವಾಮಿ ಮತ್ತು ಭಿಕ್ಷೇಶ್ವರ ಸ್ವಾಮಿ ದೇವಾಲಯದ ಬಳಿ ಮೂರು ಕಡೆ ಸ್ನಾನ ಘಟ್ಟದ ವ್ಯವಸ್ಥೆ ವಾಡಲಾಗಿದೆ. ಸದ್ಯಕ್ಕೆ ನದಿಯಲ್ಲಿ 6 ಅಡಿಗಿಂತ ಹೆಚ್ಚು ನೀರು ಇರುವುದರಿಂದ ವಯಸ್ಸಾದವರು ಮತ್ತು ಮಕ್ಕಳು ಮುಳುಗದಂತೆ ಕ್ರಮ ವಹಿಸಲಾಗಿದೆ. 3 ಅಡಿ ಆಳದವರೆಗೆ ಹೋಗಿ ಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. 3 ಅಡಿ ಆಳದ ನಂತರ ಬ್ಯಾರಿಕೇಡ್ ನಿರ್ಮಿಸಲಾಗಿದೆ.
ನೀರು ಹೆಚ್ಚಿರುವುದರಿಂದ ತೇಲುವ ಸೇತುವೆ ನಿರ್ಮಿಸಿಲ್ಲ. ಸುರಕ್ಷತೆಗಾಗಿ 15ಕ್ಕೂ ಹೆಚ್ಚು ಬೋಟ್ ಬಳಕೆ ಮಾಡಲಾಗುತ್ತಿದೆ.
6. ಕುಂಭಮೇಳದಲ್ಲಿ ಈ ಬಾರಿ ಸ್ನಾನ ಮಾಡಲಿರುವ ಗಣ್ಯರು ಯಾರು ಯಾರು?
ಈ ಬಾರಿಯ ಕುಂಭ ಮೇಳದಲ್ಲಿ ಅನೇಕ ರಾಜಕೀಯ ನಾಯಕರ ಜತೆಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಅನೇಕರು ಕುಂಭ ಸ್ನಾನ ಮಾಡುವ ಸಾಧ್ಯತೆ ಇದೆ.
7. ಕುಂಭಮೇಳಕ್ಕೆ ಬಂದಾಗ ನೋಡಬಹುದಾದ ನರಸೀಪುರ ಸುತ್ತಲಿನ ಪ್ರವಾಸಿ ಸ್ಥಳಗಳು ಯಾವುವು?
ನರಸೀಪುರದ ಸುತ್ತ ಮೈಸೂರಿನ ಪ್ರಮುಖ ಪ್ರವಾಸಿ ತಾಣದ ಜತೆಗೆ ಸೋಮನಾಥಪುರ, ಮುಡುಕುತೊರೆ, ತಲಕಾಡು, ನಂಜನಗೂಡು, ಬಿಳಿಗಿರಿರಂಗನ ಬೆಟ್ಟ, ಮಲೈ ಮಹದೇಶ್ವರಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮುಂತಾದ ಪ್ರವಾಸಿ ತಾಣಗಳನ್ನು ಒಂದೆರಡು ಗಂಟೆಯ ಪ್ರಯಾಣದಲ್ಲಿ ಮುಟ್ಟಬಹುದು.
8. ಟಿ ನರಸೀಪುರದಲ್ಲಿ ಊಟ ವಸತಿ ವ್ಯವಸ್ಥೆ ಹೇಗಿದೆ?
ನರಸೀಪುರದಲ್ಲಿ ಕುಂಭಮೇಳದ ಅಂಗವಾಗಿ ದಾಸೋಹದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮತ್ತು ಕುಂಭಮೇಳ ಆಚರಣ ಸಮಿತಿಯಿಂದ ಮಾಡಲಾಗಿದೆ. ಅಲ್ಲದೆ ಅನೇಕ ಹೋಟೆಲ್‌ಗಳು ಕೂಡ ಇವೆ.ಕೋಟ್:
ಕುಂಭಮೇಳದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರ ₹6 ಕೋಟಿ ಬಿಡುಗಡೆಗೊಳಿಸಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕುಂಭಮೇಳದಲ್ಲಿ ಪಾಲ್ಗೊಳ್ಳಬೇಕು. ಮುಂಜಾಗ್ರತಾ ಕ್ರಮ ಹಾಗೂ ಮೂಲಸೌಲಭ್ಯ ಕಲ್ಪಿಸಲಾಗಿದೆ.
- ಡಾ। ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ.