ಶಾಸಕ ಆನಂದ್ ಗೆ ಮನವಿ ಸಲ್ಲಿಸಿದ ರೈತರು: ಪರಿಹಾರ ನೀಡುವಂತೆ ಒತ್ತಾಯ
ಕನ್ನಡಪ್ರಭ ವಾರ್ತೆ,ಬೀರೂರು:ಎರಡು ತಿಂಗಳ ಹಿಂದಷ್ಟೆ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಖರೀದಿಸಿ, ತಮ್ಮ ಜಮೀನುಗಳಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದ ರೈತರು, ಎಲ್ಲಾ ಪೋಷಕಾಂಶ ನೀಡಿದ್ದರೂ ಗಿಡ ಕಾಳುಕಟ್ಟಿಲ್ಲ. ಬಾರದ ಬೆಳೆಗೆ ಕೃಷಿ ಇಲಾಖೆಯೇ ಕಾರಣ ಎಂದು ಆರೋಪಿಸಿರುವ ಜೋಡಿತಿಮ್ಮಾಪುರ, ದೋಗೆಹಳ್ಳಿ ,ಹುಲ್ಲೇಹಳ್ಳಿ ರೈತರು ಶಾಸಕ ಆನಂದ್‌ಗೆ ಪರಿಹಾರ ನೀಡುವಂತೆ ಮಂಗಳವಾರ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರೈತ ಯರೇಹಳ್ಳಿ ಮಂಜುನಾಥ್, ಎರಡು ತಿಂ ಗಳ ಹಿಂದಷ್ಟೆ ಉತ್ತಮ ಮಳೆ ಯಾಗಿದ್ದರಿಂದ ಕೃಷಿ ಇಲಾಖೆಯಿಂದ ವಿಜ್ಞಾನಿಗಳು ನೀಡಿರುವ ಉತ್ತಮ ಗುಣಮಟ್ಟದ ಸೂರ್ಯಕಾಂತಿ –ಕೆ.ಬಿ.ಎಸ್.ಎಚ್ -78 ತಳಿ ಬೀಜಗಳನ್ನು ಖರೀದಿ ಮಾಡುವಂತೆ ಅಧಿಕಾರಿಗಳು ಸೂಚಿಸಿ, ಉತ್ತಮ ಇಳುವರಿ ಬರುತ್ತದೆ ಎಂದು ಹೇಳಿ ಈ ಬೀಜ ನೀಡಿದ್ದಾರೆ. ಆದರೆ ಬಿತ್ತನೆ ಮಾಡಿ ಫಸಲು ಬರುವ ವೇಳೆ ನೋಡಿದಾಗ ತೆನೆಯಲ್ಲಿ ಕಾಳುಗಟ್ಟಿಲ್ಲ ಎಂದು ಹೇಳಿದ್ದಾರೆ.ಅಧಿಕಾರಿಗಳನ್ನು ಕೇಳಿದರೆ ವೈರಸ್ ರೋಗ ಅನ್ನುತ್ತಾರೆ. ಆದರೆ ಪಕ್ಕದ ಜಮೀನುಗಳಲ್ಲಿ ಬೇರೆ ತಳಿ ಸೂರ್ಯಕಾಂತಿ ಬೀಜ ಬಿತ್ತಿದ್ದಾರೆ. ಬೆಳೆ ಉತ್ತಮವಾಗಿ ಬಂದಿದೆ. ನಮ್ಮ ಬೆಳೆಗೆ ಬಂದ ರೋಗ ಅವರಿಗೇಕೆ ತಗುಲಿಲ್ಲ. ನಾವು ಪ್ರತಿ ಎಕರೆಗೆ 25ಸಾವಿರ ಖರ್ಚು ಮಾಡಿ ಬೆಳೆ ಹಾಕಿದ್ದೇವೆ, ಸುಮಾರು 12ಜನ ರೈತರು ಸುಮಾರು 30 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದೇವೆ.
ಹೀಗಾದರೆ ನಮ್ಮ ಪಾಡೇನು?. ಒಂದೆಡೆ ಅತಿವೃಷ್ಠಿಯಾದರೆ, ಇನ್ನೊಂದೆಡೆ ಅಧಿಕಾರಿಗಳ ತಪ್ಪಿನಿಂದ ಈ ವರ್ಷದ ಬೆಳೆ ಕೈಸೇರದಿದ್ದರೆ ನಮ್ಮ ಪಾಡೇನು ಎಂದು ಶಾಸಕ ಕೆ.ಎಸ್.ಆನಂದ್ ಮುಂದೆ ಅಳಲು ತೊಡಿಕೊಂಡು ಸಂಬಂದಪಟ್ಟ ಅಧಿಕಾರಿಗಳನ್ನು ಕರೆಸಿ ನಮಗೆ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಇದನ್ನು ಮನಗಂಡ ಶಾಸಕ ಆನಂದ್, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಅಶೋಕ್ ರನ್ನು ಸ್ಥಳಕ್ಕೆ ಕರೆಸಿ, ಇವರ ಸಮಸ್ಯೆಗೆ ಉತ್ತರಿಸಲು ಕೇಳಿದಾಗ ಕೃಷಿ ಅಧಿಕಾರಿ ಅಶೋಕ್ ಮಾತಾಡಿ, ಇದು ಸರ್ಕಾರದಿಂದ ಬಂದ ಬಿತ್ತನೆ ಬೀಜ . ಇವರ ಸಮಸ್ಯೆ ನಮ್ಮ ಗಮನಕ್ಕೂ ಬಂದಿದ್ದು, ಜಮೀನುಗಳಿಗೆ ಜಂಟಿ ಕೃಷಿ ನಿರ್ದೇಶಕಿ ಸುಜಾತಾ, ಮೂಡಿಗೆರೆ ಕೃಷಿ ವಿಜ್ಞಾನಿ ಸುಚಿತ್ರಾ ಸಹ ಭೇಟಿ ನೀಡಿದ್ದು, ಮಳೆ ಹೆಚ್ಚಾಗಿ ಸೂರ್ಯಕಾಂತಿ ಬೆಳೆಗೆ ನಂಜಾಣು ವೈರಸ್ ತಗುಲಿದ್ದು, ಕಾಳು ಕಟ್ಟುವ ಸಮಯದಲ್ಲಿ ರಸಹೀರುವ ಕೀಟಗಳಿಂದದೀ ಬೆಳೆಗೆ ಬಾಧಿಸಿದೆ. ರೋಗ ಬಂದಾಗ ಗಿಡ ಕಿತ್ತು ಸುಟ್ಟುಹಾಕುವಂತೆ ತಿಳಿಸಿ ತೆರಳಿದ್ದರು. ಆದರೆ ಸರ್ಕಾರ ವಿಜ್ಞಾನಿಗಳಿಂದ ಪರೀಕ್ಷೆ ಮಾಡಿ ಬಿಡುಗಡೆ ಮಾಡಿರುವ ಈ ತಳಿ ಸಖರಾಯಪಟ್ಟಣ ಮತ್ತಿತರ ಹೋಬಳಿಗಳಲ್ಲಿ ಉತ್ತಮ ಫಸಲು ಬಂದಿದೆ. ಮೇಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಶಾಸಕರಿಗೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಶಾಸಕ ಕೆ.ಎಸ್.ಆನಂದ್, ರೈತರು ಸಾಲ-ಸೋಲ ಮಾಡಿ ಬೆಳೆದು ಬದುಕುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ದುಡಿದು ತಿನ್ನುವ ರೈತರಿಗೆ ಮೋಸ ಮಾಡಬೇಡಿ. ಅವರು ಬಿತ್ತನೆಗೆ ಖರ್ಚು ಮಾಡಿದ ಹಣ ವನ್ನಾದರೂ ಬೇರಾವುದಾದರೂ ಯೋಜನೆಯಲ್ಲಿ ಅವರಿಗೆ ಮರುಪಾವತಿಸಿ, ನಾನು ರೈತನ ಮಗನೆ ನಿಮ್ಮ ಕಷ್ಟ ಅರ್ಥ ವಾಗುತ್ತದೆ. ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಪರಿಹಾರ ನೀಡಲಾಗುವುದೆಂದು ರೈತರಿಗೆ ಭರವಸೆ ನೀಡಿದರು. 13 ಬೀರೂರು 2ಬೀರೂರು ಸಮೀಪದ ಯರೇಹಳ್ಳಿ, ಹುಲ್ಲೇಹಳ್ಳಿ, ಜೋಡಿತಿಮ್ಮಾಪುರ ಗ್ರಾಮಗಳ ರೈತರು ಮುಂಗಾರಿನಲ್ಲಿ ಬಿತ್ತಿದ್ದ ಸೂರ್ಯಕಾಂತಿ ಬೀಜ ಕಳಪೆಯಾಗಿದ್ದು ಪರಿಹಾರ ನೀಡುವಂತೆ ಶಾಸಕ ಕೆ.ಎಸ್.ಆನಂದ್ ನ್ನು ಒತ್ತಾಯಿಸಿದರು.