ಬಾಹ್ಯಕಾಶ ತಂತ್ರಜ್ಞಾನದಿಂದ ಜನಸಾಮಾನ್ಯರಿಗೂ ಅನುಕೂಲ

KannadaprabhaNewsNetwork | Updated : Feb 23 2024, 01:46 AM IST

ಸಾರಾಂಶ

ದೇಶದಲ್ಲಿ ಅಭಿವೃದ್ಧಿಯಾಗುತ್ತಿರುವ ಬಾಹ್ಯಕಾಶ ತಂತ್ರಜ್ಞಾನದಿಂದ ಜನಸಾಮಾನ್ಯರೂ ಸೇರಿದಂತೆ ಹಲವು ವರ್ಗಗಳಿಗೆ ಅನುಕೂಲ ಆಗಿದೆ

ಸಿರಿಗೆರೆ: ದೇಶದಲ್ಲಿ ಅಭಿವೃದ್ಧಿಯಾಗುತ್ತಿರುವ ಬಾಹ್ಯಕಾಶ ತಂತ್ರಜ್ಞಾನದಿಂದ ಜನಸಾಮಾನ್ಯರೂ ಸೇರಿದಂತೆ ಹಲವು ವರ್ಗಗಳಿಗೆ ಅನುಕೂಲ ಆಗಿದೆ ಎಂದು ಬೆಂಗಳೂರಿನ ಇಸ್ರೋ, ಯುಆರ್‌ ರಾವ್‌ ಉಪಗ್ರಹ ಕೇಂದ್ರದ ವಿಭಾಗದ ಮುಖ್ಯಸ್ಥ ಪಿ.ಜಯಸಿಂಹ ಹೇಳಿದರು.

ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಪ್ರಯುಕ್ತ ಏರ್ಪಸಿರುವ ವಿಜ್ಞಾನ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಬಾಹ್ಯಕಾಶ ತಂತ್ರಜ್ಞಾನದಲ್ಲಿ ದೇಶವು ಅಪೂರ್ವವಾದ ಸಾಧನೆ ಮಾಡಿದೆ. ಆ ಸಾಧನೆಯಿಂದ ದೇಶದ ಎಲ್ಲಾ ಜನರಿಗೂ ಅನುಕೂಲವಾಗಿದೆ ಎಂದರು.

ಭಾರತ ಬಾಹ್ಯಾಕಾಶ ಸಂಶೋಧನೆಯಲ್ಲಿ ಜಗತ್ತಿನಲ್ಲಿಯೇ ಮುಂದುವರಿದ ರಾಷ್ಟ್ರವಾಗಿದೆ. ದೇಶದ ಸಂಶೋಧನೆಯತ್ತ ಅಭಿವೃದ್ಧಿಶೀಲ ರಾಷ್ಟ್ರಗಳು ಕಣ್ಣಿಟ್ಟು ನೋಡುವಂತಾಗಿದೆ. ಈ ಸಾಧನೆ ಪರರ ಆಳ್ವಿಕೆಯಿಂದ ಬಿಡಿಸಿಕೊಂಡು ದೇಶವು ಸ್ವಾತಂತ್ರ್ಯ ಪಡೆದ ಕೇವಲ 75 ವರ್ಷಗಳಲ್ಲಿ ಆಗಿದೆ. ಇದು ಭಾರತೀಯರೆಲ್ಲರೂ ಹೆಮ್ಮೆ ಪಡುವ ವಿಚಾರ ಎಂದರು.

ವಿಕ್ರಂ ಸಾರಾಬಾಯಿ ದೇಶದ ಬಾಹ್ಯಕಾಶ ತಂತ್ರಜ್ಞಾನಕ್ಕೆ ಅಡಿಪಾಯ ಒದಗಿಸಿದವರು. ಅಲ್ಲಿಂದ ಮುಂದೆ ಹಲವು ವಿಕ್ರಮಗಳು ದೇಶದಲ್ಲಿ ದಾಖಲಾಗಿವೆ. ಕೇವಲ 350 ಕೆಜಿ ತೂಕದ ಆರ್ಯಭಟವನ್ನು 1975ರಲ್ಲಿ ಉಡಾವಣೆ ಮಾಡಿದ್ದರೆ ನಂತರ 5600 ಕೆಜಿ ತೂಕದ ಉಪಗ್ರಹವನ್ನು ಉಡಾವಣೆ ಮಾಡಿದ ಕೀರ್ತಿ ಇಸ್ರೋ ವಿಜ್ಞಾನಿಗಳದು ಎಂದರು.

ಸಂವಹನ ಉಪಗ್ರಹಗಳು ಜನಸಾಮಾನ್ಯರಿಗೆ ಅಗತ್ಯವಾದ ಕೊಡುಗೆಗಳನ್ನು ನೀಡುತ್ತಿವೆ. ಅಂತೆಯೇ ದೂರಸಂವೇದಿ ಉಪಗ್ರಹಗಳು ಭೂಮಿಯ ಸುತ್ತ ಸುತ್ತುತ್ತ ಮಾಹಿತಿಯನ್ನು ಸಂಗ್ರಹಿಸುತ್ತವೆ. ವಿಜ್ಞಾನದ ಬೆಳವಣಿಗೆಗೆ ಕಾರಣವಾದ ಉಪಗ್ರಹಗಳು ದೇಶಕ್ಕೆ ಕೊಡುಗೆ ಆಗುತ್ತವೆ ಎಂದರು.

ಸ್ವಾತಂತ್ರ್ಯನಂತರದ ಹಳ್ಳಿಗಳ ಪೋಸ್ಟ್‌ ಆಫಿಸುಗಳಲ್ಲಿ ಮಾತ್ರವೇ ಪೋನ್‌ ಸಂಪರ್ಕ ಇರುತ್ತಿತ್ತು. ಬೇರೆ ಊರಿನ ಬಂಧುಗಳಿಗೆ ಕರೆಮಾಡಬೇಕೆಂದರೆ ಟ್ರಂಕ್‌ ಕಾಲ್‌ ಮೂಲಕ ದಿನವೆಲ್ಲಾ ಕಾಯಬೇಕಿತ್ತು. ಈಗ ದೇಶದ ಎಲ್ಲಾ ಜನರ ಕೈಯಲ್ಲಿ ಪೋನ್‌ ಇದೆ, ಮನೆಮಂದಿಯೆಲ್ಲಾ ಫೋನ್‌ ಹೊಂದಿದ್ದಾರೆ. ಇದು ಬಾಹ್ಯಕಾಶ ತಂತ್ರಜ್ಞಾನದಲ್ಲಿ ಭಾರತ ಸಾಧಿಸಿದ ಸಾಧನೆ ಎಂದರು.

ಉಪನ್ಯಾಸ ನೀಡಿದ ದಾವಣಗೆರೆ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಅಸೋಸಿಯೇಟ್‌ ಪ್ರೊಫೆಸರ್‌ ಸೀಮಾ ಜೆ ಪಟೇಲ್‌ ಅವರು, 1958 ರಲ್ಲಿ ವಿಶ್ವದಲ್ಲಿ ಮೊಟ್ಟಮೊದಲ ಬಾರಿಗೆ ಪೊಲಿಯೋ ಲಸಿಕೆಯನ್ನು ಸಂಶೋಧಿಸಲಾಯಿತು. ಈ ಲಸಿಕೆಯನ್ನು 10 ವರ್ಷಗಳ ನಂತರ 1968 ರಲ್ಲಿ ಭಾರತದಲ್ಲಿ ಸಂಶೋಧಿಸಲಾಯಿತು. ಕೊರೋನ ಸಂದರ್ಭದಲ್ಲಿ ಅಗತ್ಯವಾಗಿದ್ದ ಲಸಿಕೆಯನ್ನು ಕೆಲವೇ ದಿನಗಳಲ್ಲಿ ಭಾರತವು ಕಂಡುಹಿಡಿಯಿತು. ಈ ಸಾಧನೆಯ ಹಿಂದೆ ಜೈವಿಕ ತಂತ್ರಜ್ಞಾನದ ಕೊಡುಗೆ ಇದೆ ಎಂದರು.

ಜೈವಿಕ ತಂತ್ರಜ್ಞಾನ ಅಭಿವೃದ್ಧಿಯಿಂದ ಇಂದು ಗರ್ಭಕೋಶದ ಮತ್ತು ಸ್ತನ ಕ್ಯಾನ್ಸರ್‌ ರೋಗಕ್ಕೆ ಅಗತ್ಯವಾದ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಆಶೀರ್ವಚನ ನೀಡಿದ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ವಿಜ್ಞಾನ ಮೇಳದ ಆಯೋಜನೆಯಿಂದ ಮನಸ್ಸಿಗೆ ತುಂಬಾ ಸಂತೋಷವಾಗಿದೆ. ನಮ್ಮ ಸಂಸ್ಥೆಯ ಮಕ್ಕಳು ಇಷ್ಟೊಂದು ಪ್ರತಿಭಾಶಾಲಿಯಾಗಿರುವುದು ನಮ್ಮ ಸಂತೋಷಕ್ಕೆ ಕಾರಣ. ಚಂದ್ರಯಾನ ಉಡಾವಣೆಯ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ತಂಡದಲ್ಲಿ ಕೆಲಸ ನಿರ್ವಹಿಸಿದ್ದರು. ಮುಂದಿನ ದಿನಗಳಲ್ಲಿ ಆ ಸಂಖ್ಯೆ ಇನ್ನೂ ಹೆಚ್ಚಲಿ ಎಂದರು.

ದೇಶದಲ್ಲಿ ಭ್ರಷ್ಟಾಚಾರ, ಅಸಮಾನತೆ ಮಿತಿಮೀರಿ ಬೆಳೆಯುತ್ತಿದೆ. ಯುವಕರಾದ ವಿದ್ಯಾರ್ಥಿಗಳು ಅವುಗಳನ್ನು ಮೆಟ್ಟಿನಿಲ್ಲುವಂತಹ ಕೆಲಸಕ್ಕೆ ಮುಂದಾಗಬೇಕು ಎಂದರು.

ಖಗೋಳ ತಜ್ಞ ಎಚ್.‌ಎಸ್.‌ಟಿ.ಸ್ವಾಮಿ, ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.‌ಆರ್.‌ಬಸವರಾಜಪ್ಪ, ಉಪಾಧ್ಯಕ್ಷ ಶಿವಳ್ಳಿ, ತರಳಬಾಳು ಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಜತ್ತಿ ಭಾಗವಹಿಸಿದರು. ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆಯ ಮಕ್ಕಳು ವಚನ ಗೀತೆ ಹಾಡಿದರು. ಎಂ. ರಂಗಣ್ಣ ಕಾರ್ಯಕ್ರಮ ನಿರೂಪಿಸಿದರು. ವಸಂತ ಬಡಿಗೇರ್‌ ಸ್ವಾಗತಿಸಿದರು. ಪ್ರಕಾಶ್‌ ಚಿಕ್ಕಮಠ ವಂದಿಸಿದರು.

Share this article