ಶೀಘ್ರವೇ ಬಾಹ್ಯಾಕಾಶ ಪ್ರವಾಸೋದ್ಯಮವೂ ಆರಂಭ!

KannadaprabhaNewsNetwork |  
Published : Dec 17, 2023, 01:45 AM IST
16ಕೆಡಿವಿಜಿ5-ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪಿಯು ಕಾಲೇಜಿನಲ್ಲಿ ಶನಿವಾರ ದಿವಂಗತ ಪಾರ್ವತಮ್ಮ ಶಾಮನೂರು ಸ್ಮರಣಾರ್ಥ 15ನೇ ವಿಜ್ಞಾನ ವಿಚಾರ ಸಂಕಿರಣಉದ್ಘಾಟಿಸಿದ ಇಸ್ರೋ ವಿಜ್ಞಾನಿ ಶಿವಕುಮಾರ ಪಾಟೀಲ್, ಡಾ.ಎಂ.ಜಿ.ಈಶ್ವರಪ್ಪ. | Kannada Prabha

ಸಾರಾಂಶ

ದಿವಂಗತ ಪಾರ್ವತಮ್ಮ ಶಾಮನೂರು ಸ್ಮರಣಾರ್ಥ 15ನೇ ವಿಜ್ಞಾನ ವಿಚಾರ ಸಂಕಿರಣದಲ್ಲಿ ಇಸ್ರೋ ವಿಜ್ಞಾನಿ ಶಿವಕುಮಾರ ಪಾಟೀಲ್ ಹೇಳಿಕೆ

* ಜಗತ್ತಿನ ಹಲವು ರಾಷ್ಟ್ರಗಳಿಂದ ಪೈಪೋಟಿ । 15ನೇ ವಿಜ್ಞಾನ ವಿಚಾರ ಸಂಕಿರಣದಲ್ಲಿ ಇಸ್ರೋ ವಿಜ್ಞಾನಿ ಶಿವಕುಮಾರ ಪಾಟೀಲ್ ಹೇಳಿಕೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಾಹ್ಯಾಕಾಶ ಪ್ರವಾಸೋದ್ಯಮಕ್ಕಾಗಿ ವಿಶ್ವದ ಅನೇಕ ರಾಷ್ಟ್ರಗಳು ಈಗ ಪೈಪೋಟಿಯಲ್ಲಿ ತೊಡಗಿದ್ದು, ಆದಷ್ಟು ಬೇಗ ಬಾಹ್ಯಾಕಾಶ ಪ್ರವಾಸೋದ್ಯವೂ ಆರಂಭವಾಗಲಿದೆ ಎಂದು ಇಸ್ರೋದ ಹಿರಿಯ ವಿಜ್ಞಾನಿ ಶಿವಕುಮಾರ ಎಸ್.ಪಾಟೀಲ್ ತಿಳಿಸಿದರು.

ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪಿಯು ಕಾಲೇಜಿನಲ್ಲಿ ಶನಿವಾರ ದಿವಂಗತ ಪಾರ್ವತಮ್ಮ ಶಾಮನೂರು ಸ್ಮರಣಾರ್ಥ 15ನೇ ವಿಜ್ಞಾನ ವಿಚಾರ ಸಂಕಿರಣದಲ್ಲಿ ಮಾತನಾಡಿ ಭೂಮಿಯಿಂದ 85 ಕಿಮೀನಷ್ಟು ಎತ್ತರದ ಕರ್ಮಲ್ ಲೈನ್‌ನಲ್ಲಿ 5-6 ನಿಮಿಷ ಕಳೆಯಲು ಬಾಹ್ಯಾಕಾಶ ಪ್ರವಾಸಕ್ಕೆ ಸುಮಾರು ₹25 ಕೋಟಿ ವೆಚ್ಚವಾಗುತ್ತದೆ. ಎಲಾನ್‌ ಮಸ್ಕ್‌, ಗ್ಯಾಲಕ್ಸಿ ಓರಿಯನ್‌ ಮತ್ತಿತರರು ಇಂತಹ ಬಾಹ್ಯಾಕಾಶ ಪ್ರವಾಸ ಏರ್ಪಡಿಸಲು ತುದಿಗಾಲ ಮೇಲೆ ನಿಂತಿದ್ದು, ತೀವ್ರ ಪೈಪೋಟಿಯಲ್ಲೂ ತೊಡಗಿದ್ದಾರೆ. ಗುರುತ್ವಾಕರ್ಷಣೆ ರಹಿತ ಅನುಭವ, ಅಂತರಿಕ್ಷದಿಂದ ಭೂಮಿಯ ವಿಹಂಗಮ ನೋಟ ಮತ್ತಿತರೆ ರೋಚಕ ಅನುಭವಗಳ ಯಾತ್ರಿಗಳಿಗೆ ಬಾಹ್ಯಾಕಾಶ ಪ್ರವಾಸ ಕಟ್ಟಿಕೊಡಲಿದೆ ಎಂದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ವಿಶ್ವವೇ ಬೆರಗಾಗುವ ಸಾಧನೆ ಮಾಡುತ್ತಿದೆ. ಭೂಮಿಯಿಂದ 3.84 ಲಕ್ಷ ಕಿಲೋ ಮೀಟರ್ ದೂರದ ಚಂದ್ರನ ದಕ್ಷಿಣ ಧ್ರುವದ ಮೇಲೆ ಈವರೆಗೆ ಜಗತ್ತಿನ ಯಾರೂ ಸ್ಪರ್ಶಿಸದ, ಆಳ ಕಂದಕ, ಪರ್ವತಗಳ ಪ್ರದೇಶದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಇಳಿಸಿ, ವಿಶ್ವವೇ ಬೆರಗಾಗುವ ಸಾಧನೆ ಮೆರೆದಿದೆ. ಅದೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಇಸ್ರೋ ಮಾಡಿರುವ ಸಾಧನೆಗೆ ಜಗತ್ತೇ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದು ತಿಳಿಸಿದರು.

ಚಂದ್ರಯಾನ 4ರಿಂದ ಮೂಲಧಾತುಗಳ ಮಾದರಿ ಭೂಮಿಗೆ:

ಹಿರಿಯ ವಿಜ್ಞಾನಿ ಡಾ.ಯು.ಆರ್‌.ರಾವ್‌ ನೇತೃತ್ವದಲ್ಲಿ ಕ್ರಯೋಜನಿಕ್ ತಂತ್ರಜ್ಞಾನ ನಾವೇ ಮಾಡಿದ್ದಲ್ಲದೇ, ಚಂದ್ರಯಾನ-4ಕ್ಕೆ ಎದುರು ನೋಡುತ್ತಿದ್ದೇವೆ. ಇದು ಚಂದ್ರನ ಮೇಲಿನ ಅನೇಕ ಮೂಲಧಾತುಗಳ ಮಾದರಿಗಳ ಭೂಮಿಗೆ ಹೊತ್ತು ತರಲಿದೆ. ನಂತರದ ಗಗನ್ ಯಾನದಲ್ಲಿ ಮನುಷ್ಯರನ್ನೂ ಕಳಿಸಲಾಗುವುದು. ಈಗಾಗಲೇ 15 ಕೋಟಿಗೂ ಅಧಿಕ ಕಿಮೀ ದೂರವಿರುವ ಸೂರ್ಯನ ಒಳ ತಾಪಮಾನದ ಬಗ್ಗೆ ಭೂಮಿಯಿಂದ 15 ಲಕ್ಷ ಕಿಮೀ ದೂರದಲ್ಲಿ ಆದಿತ್ಯ ಎಲ್‌ಒನ್‌ ಸಂಶೋಧನೆ ನಡೆಸುತ್ತಿದೆ ಎಂದು ವಿವರಿಸಿದರು.

ಚಂದ್ರಯಾನ-1 ಅತ್ಯಂತ ಆಳದ ಕಣಿವೆಗಳ ಮೈನಸ್ 175 ಡಿಗ್ರಿ ತಾಪಮಾನದ ಸ್ಥಿತಿಯಲ್ಲಿ ಸಂಯೋಜನೆಗೊಳ್ಳುವ ಜಲಜನಕ, ಆಮ್ಲಜನಕ ಮಂಜುಗಡ್ಡೆಗಳ ಕಂಡು ಹಿಡಿದು, ಚಂದ್ರನ ಮೇಲೂ ನೀರಿದೆಯೆಂಬುದು ವಿಶ್ವ ಬೆರಗಾಗುವ ಸಾಧನೆ ಮಾಡಿದೆ. ಅಮೆರಿಕಾದ ನಾಸಾ ಬಾಹ್ಯಾಕಾಶ ಸಂಸ್ಥೆ ಶೇ.30ಕ್ಕೂ ಹೆಚ್ಚು ಭಾರತೀಯ ವಿಜ್ಞಾನಿಗಳೇ ಇದ್ದು, ಇದೆಲ್ಲವೂ ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನದಲ್ಲಿ ಭಾರತ ಮಾಡಿದ ಮಹತ್ತರ ಸಾಧನೆ ಎಂದು ತಿಳಿಸಿದರು.

ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ಖಜಾಂಚಿ ಎ.ಎಸ್‌.ನಿರಂಜನ, ಕಾಲೇಜು ಪ್ರಾಚಾರ್ಯ ಪ್ರೊ.ಎಂ.ಸಿ.ರುದ್ರಪ್ಪ, ಹಿರಿಯ ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ, ನಿವೃತ್ತ ಮುಖ್ಯ ಶಿಕ್ಷಕ ಟಿ.ಎಂ.ಶರಣಪ್ಪ, ವಿಜ್ಞಾನ ಶಿಕ್ಷಕ ಎಂ.ಎನ್‌.ಶ್ರೀಧರಯ್ಯ, ಒಲಂಪಿಯಾಡ್‌ ಪ್ರೋಗ್ರಾಂ ನಿರ್ದೇಶಕ ಜೆ.ಪದ್ಮನಾಭ, ಬೋಧಕರಾದ ಎಚ್.ಸಿ.ಶಿವಶಂಕರ, ಉಮೇಶ, ಎಚ್.ಸಿ.ವಿನಯಕುಮಾರ, ಕೆ.ಶಿ.ಶಿವಶಂಕರ, ಕೆ.ಸಿ.ವಿಜಯಕುಮಾರ, ಬಿ.ಎಂ.ಶಿವಕುಮಾರ, ಶರ್ಮಿಳಾ, ವಿನಯಕುಮಾರ, ದರ್ಶನ್ ಇತರರಿದ್ದರು. .................ಕೋಟ್‌..ಇಸ್ರೋದಿಂದ ಪುನರ್ ಬಳಕೆಯ ಪ್ರಯೋಗ

ಈಗಾಗಲೇ ಅವಧಿ ಮೀರಿದ, ನಿರುಪಯುಕ್ತ ಉಪಗ್ರಹಗಳ ದಟ್ಟಣೆ ಬಾಹ್ಯಾಕಾಶದಲ್ಲಿ ಉಂಟಾಗಿದ್ದು, ಅವುಗಳ ಶೂಟ್ ಮಾಡಿ, ಪುಡಿಗಟ್ಟುವ ಪ್ರಯೋಗ ಚೀನಾ ಮಾಡಿದೆ. ಮತ್ತೆ ಬಾಹ್ಯಾಕಾಶದಲ್ಲಿ, ಭೂಮಿ ಮೇಲು ಉಪಗ್ರಹಗಳ ಕಸದ ಸಮಸ್ಯೆ ಉಂಟಾಗಬಹುದು. ಇದಕ್ಕೆ ಪರಿಹಾರವಾಗಿ ಪುನರ್ ಬಳಸುವ ಉಪಗ್ರಹ ತಯಾರಿಸುವ ಪ್ರಯೋಗ ಇಸ್ರೋ ಮಾಡುತ್ತಿದೆ. ಆಧುನಿಕ ತಂತ್ರಜ್ಞಾನದ ಬಳಕೆ ಮೇಲೆ ವಿಶ್ವದ ಭವಿಷ್ಯ ನಿಂತಿದ್ದು, ಹೊರ ಜಗತ್ತನ್ನು ಪ್ರಶ್ನಿಸಿದಾಗ ವಿಜ್ಞಾನ ಹುಟ್ಟುತ್ತದೆ. ಶಿವಕುಮಾರ ಎಸ್.ಪಾಟೀಲ್‌, ಇಸ್ರೋದ ಹಿರಿಯ ವಿಜ್ಞಾನ.

................. ಕ್ಯಾಪ್ಷನ್ 16ಕೆಡಿವಿಜಿ5-ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪಿಯು ಕಾಲೇಜಿನಲ್ಲಿ ಶನಿವಾರ ದಿ. ಪಾರ್ವತಮ್ಮ ಶಾಮನೂರು ಸ್ಮರಣಾರ್ಥ 15ನೇ ವಿಜ್ಞಾನ ವಿಚಾರ ಸಂಕಿರಣ ಉದ್ಘಾಟಿಸಿದ ಇಸ್ರೋ ವಿಜ್ಞಾನಿ ಶಿವಕುಮಾರ ಪಾಟೀಲ್, ಡಾ.ಎಂ.ಜಿ.ಈಶ್ವರಪ್ಪ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ