ಬಸವರಾಜ ಹಿರೇಮಠಧಾರವಾಡ:ಎರಡ್ಮೂರು ದಶಕಗಳ ಹಿಂದಷ್ಟೇ ಪ್ರತಿಯೊಬ್ಬರ ಮನೆ ಅಂಗಳದಲ್ಲಿ ಸದಾ ''''''''ಚಿಂವ್ ಚಿಂವ್ '''''''' ಎಂದು ಸಂಗೀತ ಹೊರಡಿಸುತ್ತಿದ್ದ ಗುಬ್ಬಿಗಳು ಈಗ ಮಾಯವಾಗಿವೆ. ಸಾವಿರಾರು ವರ್ಷಗಳಿಂದ ಮನುಷ್ಯರೊಂದಿಗೆ ಸಂತೋಷದಿಂದ ಅವರ ನೆರಳಿನಂಚಿನಲ್ಲಿ ಜೀವನ ರೂಪಿಸಿಕೊಂಡಿದ್ದ ಗುಬ್ಬಿಗಳು ನಮ್ಮನ್ನೇಕೆ ಅಗಲಿ ದೂರವಾಗಿವೆ ಎಂಬ ಪ್ರಶ್ನೆ ಬರುವುದು ಸಹಜ.ಗುಬ್ಬಚ್ಚಿಗಳು ನಮ್ಮಿಂದ ದೂರವಾಗಲು ಮೊಬೈಲ್ ಕಾರಣವೇ? ಗುಬ್ಬಿಗಳೆಲ್ಲಿ ಎಂದು ಯಾರನ್ನಾದರೂ ಕೇಳಿದರೆ ಅವರು ಥಟ್ಟನೆ ಹೇಳುವುದು ಮೊಬೈಲ್ ತರಂಗಗಳಿಂದ ಎಂದು. ಆದರೆ, ಈ ತರಂಗಳಿಂದಲೇ ಅವು ನಮ್ಮಿಂದ ದೂರವಾದವು ಎನ್ನುವುದು ನೆಪ ಮಾತ್ರ. ಕೆಲವು ಪಕ್ಷಿ ತಜ್ಞರ ಪ್ರಕಾರ ಗುಬ್ಬಿ ನಮ್ಮಿಂದ ದೂರವಾಗಲು ಮುಖ್ಯ ಕಾರಣ ಮಾನವನ ಜೀವನ ಶೈಲಿಯೆಲ್ಲಾದ ಬದಲಾವಣೆ.ಒಟ್ಟಾರೆ ಗುಬ್ಬಿಗಳು ದೂರವಾದ ಕುರಿತು ಅದಕ್ಕಾಗಿ ನಾವೇನು ಮಾಡಬೇಕಾದ ಕಾರ್ಯಗಳ ಕುರಿತು ಕನ್ನಡಪ್ರಭದೊಂದಿಗೆ ಪಕ್ಷಿಮಿತ್ರ ಪ್ರಕಾಶ ಗೌಡರ ಮಾಹಿತಿ ಹಂಚಿಕೊಂಡಿದ್ದಾರೆ.ದೂರವಾಗಲು ಕಾರಣಗಳು..ಈ ಮೊದಲು ಪ್ರತಿ ದಿನ ಮನೆಯ ತಾಯಂದಿರು, ಅಮ್ಮಂದಿರು ಮನೆಯ ಅಂಗಳದಲ್ಲಿ ಕುಳಿತು ಈ ಕಾಳು ಕಡಿಗಳ ಸ್ವಚ್ಛತೆ ಅದರ ಮೇಲಿನ ಹೊಟ್ಟು, ಸಿಪ್ಪೆ ಮುಂತಾದವುಗಳನ್ನು ಪ್ರತ್ಯೇಕ ಮಾಡುತ್ತಿದ್ದರು. ಈ ಸಿಪ್ಪೆ, ಇಡಿಯಾದ ಕಾಳುಗಳೇ ಈ ಗುಬ್ಬಿಗೆ ಆಹಾರ. ಯಾವಾಗ ಈ ಬಿಗ್ ಬಜಾರಗಳೂ ಪ್ರಾರಂಭ ಆದವೋ, ಸಂಪೂರ್ಣ ಸ್ವಚ್ಛ ಮಾಡಿದ, ಪಾಲಿಶ್ ಮಾಡಿದ ಕಾಳುಗಳು ಪ್ಲಾಸ್ಟಿಕ್ ಪ್ಯಾಕೆಟನಲ್ಲಿ ಸೀಲ್ ಆಗಿ ಸೀದಾ ನಮ್ಮ ಅಡುಗೆ ಮನೆಗೆ ಬಂದವು. ಗುಬ್ಬಿಗಳಿಗೆ ಸ್ವಚ್ಛಗೊಳಿಸುವಾಗ ಸಿಗುವ ಆಹಾರ ದೊರಕದಂತಾಯಿತು. ಮುಸರಿಯಲ್ಲಿ ಸಿಗುವ ಆಹಾರವನ್ನು ತಿಂದು ಬದುಕಿದರಾಯಿತು ಎನ್ನುವುದಾದರೆ, ಮುಸರಿಯಲ್ಲಿ ಅನ್ನ, ಬೇಳೆಯನ್ನು ತಿಂದು ಬದುಕಲು ಪ್ರಾರಂಭಿಸಿತು. ಆದರೆ, ಯಾವಾಗ ನಮ್ಮ ಪಾತ್ರೆಗಳನ್ನು ಈ ರಾಸಾಯನಿಕದಿಂದ ತಯಾರಾದ ಪೌಡರ್ ಮತ್ತೂ ಸೋಪಗಳಿಂದ ತೊಳೆಯಲು ಪ್ರಾರಂಭಿಸಿದೆವೋ ಆ ಮುಸುರಿಯು ಸಹಿತ ಕಲುಷಿತಗೊಂಡಿತು. ಮಾನವ ತನಗೆ ಮನೆಯಾದರೂ ನೀಡದ್ದಾನೆ ಎಂದು ಸಮಾಧಾನ ಪಟ್ಟರೆ ಈ ಮಣ್ಣಿನ, ಹಂಚಿನ ಮನೆಗಳೆಲ್ಲ ಮಾಯವಾಗಿ ಕಾಂಕ್ರೀಟ್ ಹಾಗೂ ಸಿಮೆಂಟ್ ಕಟ್ಟಡಗಳು ಮೇಲೆದ್ದಿವೆ. ಆಹಾರ ಮತ್ತು ಮನೆಯನ್ನು ಕಸಿದುಕೊಂಡಿದ್ದಕ್ಕೆ ನಿಧಾನವಾಗಿ ಅವು ದೂರವಾದವು. ಇನ್ನೂ ಹೆಂಚಿನ ಮನೆಗಳು, ಕಾಳು ಕಡಿಗಳು ಲಭ್ಯವಿದೆಯೋ (ಹಳ್ಳಿಗಳಲ್ಲಿ ) ಅಲ್ಲಿ ಇನ್ನೂ ಈ ಗುಬ್ಬಿಗಳನ್ನು ಕಾಣಬಹುದು. ಜೊತೆಗೆ ಪಕ್ಷಿ ಪ್ರಿಯರು ಮನೆ ಮೇಲೆ ಆಹಾರ, ನೀರು ಇಡುತ್ತಿದ್ದು ಅಲ್ಲೊಂದಿಷ್ಟು ಗುಬ್ಬಿಗಳು ಉಳಿದಿವೆ ಎನ್ನುವುದೇ ಸಮಾಧಾನದ ಸಂಗತಿ. ಗುಬ್ಬಿಗಳ ಸಂತತಿ ಪ್ರಾರಂಭವಾಗಲಿ..ಗುಬ್ಬಿಗಳ ಸಂತತಿ ವೃದ್ಧಿಸುವ ಕಾರ್ಯ ಆರಂಭವಾಗಲಿ ಎನ್ನುವ ಪ್ರಕಾಶ ಗೌಡರ, ಈಗಾಗಲೇ ಧಾರವಾಡದಲ್ಲಿ ಆರ್.ಜಿ. ತಿಮ್ಮಾಪೂರ ಹಾಗೂ ವೆಂಕಟೇಶ ನಗರದ ಪೂರ್ಣಿಮಾ ಪೂಜಾರ್ (ಚಿಕ್ಕೇರೂರು) ಸೇರಿದಂತೆ ಹಲವರು ಗುಬ್ಬಿಗಳ ರಕ್ಷಣೆಗೆ ಕಾರ್ಯೋನ್ಮುಖರಾಗಿದ್ದಾರೆ. ದೇಶಪಾಂಡೆ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಗುಬ್ಬಿ ಗೂಡುಗಳನ್ನು ನಿರ್ಮಿಸುವ ಕಾರ್ಯಾಗಾರ ಏರ್ಪಡಿಸಿ ನೂರಾರು ಗೂಡುಗಳು ಸ್ಥಾಪಿತವಾಗುಂತೆ ಮಾಡಿದ್ದು ಶ್ಲಾಘನೀಯ. ಜೊತೆಗೆ ನಾವೆಲ್ಲರೂ ಸೇರಿ ಉಪನ್ಯಾಸ ನೀಡುತ್ತಿದ್ದು, ನಮ್ಮಿಂದ ದೂರವಾದ ಗುಬ್ಬಿಗಳನ್ನು ಮತ್ತೇ ನಮ್ಮ ಅಂಗಳದಲ್ಲಿ ತರಬಹುದು ಹಾಗೂ ಅವುಗಳ ಸುರಕ್ಷತೆಗೆ ಸರಳವಾದ ಗೂಡುಗಳನ್ನು ಹೇಗೆ ಮಾಡಬಹುದು ಎಂದು ತಿಳಿಸಿಕೊಡುತ್ತಿದ್ದೇವೆ. ಗೂಡುಗಳನ್ನು ಉತ್ಸಾಹಿತರ ಮನೆಯೆಲ್ಲಿ ಸ್ಥಾಪಿಸಿ ಗುಬ್ಬಿಗಳ ಕಾರಿಡಾರ್ ನಿರ್ಮಿಸುವುದು, ಗುಬ್ಬಿಗಳು ಬಂದು ಸಂತಾನೋತ್ಪತ್ತಿ ಮಾಡಲು ಅನಕೂಲತೆಗಳನ್ನು ಕಲ್ಪಿಸುವುದು, ಪಕ್ಷಿ ಮಿತ್ರರು ಗುಬ್ಬಿ ಗೂಡುಗಳನ್ನು ನಿರ್ಮಿಸಿ ತಾವಲ್ಲದೇ, ಅಕ್ಕಪಕ್ಕದವರ ಮನೆಯೆಲ್ಲಿ ಸ್ಥಾಪಿಸುವುದು, ಗುಬ್ಬಿಗಳ ಕುರಿತಾಗಿ ಜಾಗೃತಿ ಮೂಡಿಸಿ, ಈ ಪಕ್ಷಿ ಸಂಕುಲದ ಸಂರಕ್ಷಣೆಯನ್ನು ಯಶಸ್ವಿಗೊಳಿಸುವ ಕಾರ್ಯ ನಿಧಾನವಾಗಿ ನಡೆಯುತ್ತಿದ್ದು ಅದು ಜೋರುಗೊಳ್ಳಬೇಕಿದೆ ಎಂದು ಪ್ರಕಾಶ ಮನವಿ ಮಾಡಿದರು. ಗುಬ್ಬಿಗಳು ಬರೀ ಕಾಳು ಕಡಿ ಮಾತ್ರವಲ್ಲದೇ ಕೃಷಿ ಭೂಮಿಯಲ್ಲಿನ ಹುಳು ಹುಪ್ಪಡಿ, ಮಿಡತೆಗಳನ್ನು ತಿನ್ನುವ ಮೂಲಕ ಪ್ರಕೃತಿಯ ಸಮತೋಲನ ಮಾಡುತ್ತವೆ. ಹೀಗಾಗಿ ಅವುಗಳಿಗೆ ರೈತನ ಮಿತ್ರ ಎಂದೇ ಕರೆಯುತ್ತಾರೆ. ಗುಬ್ಬಿಗಳು ಮತ್ತೊಂದು ದೊಡ್ಡ ಜೀವಿಗೆ ಆಹಾರವಾಗಿಯೂ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಳ್ಳುತ್ತವೆ. ಪರಿಸರದ ಚಕ್ರದಲ್ಲಿ ಗುಬ್ಬಿಗಳ ಮಹತ್ತರ ಪಾತ್ರವಿದ್ದು, ಅವುಗಳ ಉಪಸ್ಥಿತಿ ಸಮಾಜಕ್ಕೆ ಅಗತ್ಯ. ಈ ಹಿನ್ನೆಲೆಯಲ್ಲಿ ಗುಬ್ಬಿಗಳ ರಕ್ಷಣೆಯಲ್ಲಿ ಪ್ರತಿಯೊಬ್ಬರು ತೊಡಗಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.