ಭದ್ರಾ ನದಿ ತೀರದಲ್ಲಿ ವಿಶೇಷ ಭದ್ರಾರತಿ ಉತ್ಸವ

KannadaprabhaNewsNetwork |  
Published : Oct 04, 2025, 01:00 AM IST
೦೩ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ವತಿಯಿಂದ ಭದ್ರಾನದಿ ತಟದಲ್ಲಿ ವಿಶೇಷ ಭದ್ರಾರತಿ ನೆರವೇರಿಸಲಾಯಿತು. | Kannada Prabha

ಸಾರಾಂಶ

ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯು ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ಭದ್ರಾ ನದಿ ತಟದಲ್ಲಿ ಆಯೋಜಿಸಿದ್ದ ಭದ್ರಾರತಿ ಧಾರ್ಮಿಕ ಕಾರ್ಯಕ್ರಮವು ವೈಭವದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯು ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ಭದ್ರಾ ನದಿ ತಟದಲ್ಲಿ ಆಯೋಜಿಸಿದ್ದ ಭದ್ರಾರತಿ ಧಾರ್ಮಿಕ ಕಾರ್ಯಕ್ರಮವು ವೈಭವದಿಂದ ನಡೆಯಿತು.

ದುರ್ಗಾ ಸಮಿತಿಯ ವತಿಯಿಂದ ಎರಡನೇ ಬಾರಿಗೆ ಭದ್ರಾ ನದಿಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಪೂಜೆ ಸಲ್ಲಿಸಿ ಕಳಶ ರೂಪದಲ್ಲಿ ಗಂಗೆಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಬಳಿಕ ಕಾಶಿ, ಹರಿದ್ವಾರ, ಋಷಿಕೇಶದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ತುಂಬಿ ಹರಿಯುವ ಭದ್ರಾ ನದಿಗೆ ಪಂಚ ಅರ್ಚಕರ ಸಮ್ಮುಖದಲ್ಲಿ ದೂಪಾರತಿ, ಏಕಾರತಿ ನೆರವೇರಿಸಿ ವಿಶೇಷವಾಗಿ ಅಲಂಕೃತವಾದ ಪಂಚಲೋಹದ ಆರತಿ ತಟ್ಟೆಯಲ್ಲಿ ಮೂರು ಬಾರಿ ಭದ್ರೆಗೆ ಆರತಿ ಬೆಳಗಲಾಯಿತು.

ನಂತರ ಶಂಖ, ಜಾಗಟೆ, ಡಮರುಗ, ಚಾಮರದ ಸೇವೆ ನೆರವೇರಿಸಲಾಯಿತು. ಬಳಿಕ ಅರ್ಚಕರಾದಿಯಾಗಿ ನೆರೆದಿದ್ದ ಸಾವಿರಾರು ಜನರು ಭದ್ರಾನದಿಯ ಒಡಲಿಗೆ ವಿವಿಧ ಪುಷ್ಪಗಳನ್ನು ಅರ್ಪಿಸಿ ಧನ್ಯತೆ ಪಡೆದರು.

ಅರ್ಚಕರಾದ ಸುಬ್ರಹ್ಮಣ್ಯ ಭಟ್, ಪ್ರಶಾಂತ್ ಭಟ್, ಪ್ರಸನ್ನಭಟ್, ಅಭಿಷೇಕ್ ಭಟ್, ಶರತ್ ಭಟ್ ಭದ್ರಾರತಿಯ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಿದರು.

ಸಮಿತಿಯ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಮಾತನಾಡಿ, ಪಟ್ಟಣದಲ್ಲಿ ನವರಾತ್ರಿ ಸಂದರ್ಭದಲ್ಲಿ ವಿಶೇಷ ಭದ್ರಾರತಿಯ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದ್ದು, ಇದು ಎರಡನೇ ಬಾರಿಯಾಗಿದೆ. ದುರ್ಗಾ ಸಮಿತಿಯು ವಿಶೇಷ ಕಲ್ಪನೆಗಳೊಂದಿಗೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ಮನಗೆಲ್ಲುವ ಕಾರ್ಯ ಮಾಡುತ್ತಿದೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ಮಲೆನಾಡು ಮತ್ತು ಬಯಲು ಸೀಮೆಯ ರೈತರ ಜೀವನಾಡಿಯಾದ ಭದ್ರಾ ನದಿಗೆ ಕಳೆದ ಬಾರಿಯಿಂದ ಗಂಗಾರತಿ ಮಾದರಿಯಲ್ಲಿ ಭದ್ರಾರತಿ ಕಾರ್ಯಕ್ರಮವನ್ನು ಧಾರ್ಮಿಕ ವಿಧಾನಗಳನ್ನು ನೆರವೇರಿಸಿದ್ದು, ಸಮಸ್ತ ರೈತರು, ನದಿ ನೀರು ಬಳಕೆದಾರರಿಗೆ ಒಳಿತಾಗಲಿ ಎಂಬ ಆಶಯವನ್ನು ಸಮಿತಿ ಹೊಂದಿದೆ.

ಇದೇ ಸಂದರ್ಭದಲ್ಲಿ ಮಂಜು ಹೊಳೆಬಾಗಿಲು ನೇತೃತ್ವದಲ್ಲಿ ಉಕ್ಕಡದ ಮೂಲಕ ತುಂಬಿ ಹರಿಯುವ ಭದ್ರಾ ನದಿಯಲ್ಲಿ ವಿವಿಧ ಮಾದರಿಯ ಪಟಾಕಿಗಳನ್ನು ಪ್ರದರ್ಶನ ಮಾಡಿದ್ದು ನೋಡುಗರ ಗಮನಸೆಳೆಯಿತು.

ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಉಪಾಧ್ಯಕ್ಷ ಶಿವರಾಮಶೆಟ್ಟಿ, ಎಚ್.ಡಿ.ಸತೀಶ್, ಸಹ ಖಜಾಂಚಿ ಚೈತನ್ಯ ವೆಂಕಿ, ಕಾನೂನು ಸಲಹೆಗಾರ ಎಚ್.ಎಚ್.ಕೃಷ್ಣಮೂರ್ತಿ, ನಾರಾಯಣ ಶೆಟ್ಟಿ, ಸುಧಾಕರ್ ದಿಡಿಗೆಮನೆ, ನಾಗರಾಜ್ ಬರಗಲ್, ಬಿ.ಗಿರೀಶ್ ಬಂದಿಯಡ್ಕ ಮತ್ತಿತರರು ಹಾಜರಿದ್ದರು.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ