ಕನ್ನಡಪ್ರಭ ವಾರ್ತೆ, ದಾವಣಗೆರೆ
ರಾಜ್ಯಾದ್ಯಂತ ಡೆಂಘೀಜ್ವರ ಹಾಗೂ ಚಿಕೂನ್ ಗುನ್ಯಾ ಪ್ರಕರಣ ಹೆಚ್ಚು ವರದಿಯಾಗುತ್ತಿವೆ. ಮಳೆಗಾಲ ಆಗಿರುವುದರಿಂದ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿದೆ. ಇದರ ನಿಯಂತ್ರಣಕ್ಕೆ ಸಮುದಾಯ ಸಹಕಾರದ ಜೊತೆಗೆ ಎಲ್ಲ ಇಲಾಖೆ, ಸಂಸ್ಥೆಗಳು ಮುನ್ನೆಚ್ಚರಿಕೆ ಕ್ರಮವಾಗಿ ಡೆಂಘೀ ನಿಯಂತ್ರಣದ ಎಸ್‌ಒಪಿ ಅನುಸರಿಸಲು ಮತ್ತು ಪ್ರತಿ ಶುಕ್ರವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿರುವ ವಿಶೇಷ ಲಾರ್ವ ಸಮೀಕ್ಷೆ ಹಾಗೂ ನಿರ್ಮೂಲನೆಯಲ್ಲಿ ಕೈ ಜೋಡಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.ಮಳೆಗಾಲದಲ್ಲಿ ಡೆಂಘೀಜ್ವರ ಮತ್ತು ಚಿಕೂನ್ ಗುನ್ಯಾ ಪ್ರಕರಣಗಳು ಹೆಚ್ಚು ವರದಿಯಾಗುತ್ತವೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಮತ್ತು ಲಸಿಕೆ ಇಲ್ಲ. ಈಡೀಸ್ ಸೊಳ್ಳೆ ಹಗಲು ಸಮಯದಲ್ಲಿ ಕಚ್ಚುವುದರಿಂದ ಬಾಧೆ ತಗುಲುತ್ತದೆ. ಇದರ ನಿಯಂತ್ರಣಕ್ಕಾಗಿ ಸೊಳ್ಳೆಗಳ ಸಂತಾನ ಹೆಚ್ಚಳ ಆಗದಂತೆ ನಿಯಂತ್ರಿಸಬೇಕಿದೆ. ಇದೊಂದೇ ಇದಕ್ಕೆ ಪರಿಹಾರೋಪಾಯ ಎಂದು ತಿಳಿಸಲಾಗಿದೆ.
ಸಮುದಾಯದವರು ಮನೆಯ ಒಳಗೆ, ಹೊರಗೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತೊಟ್ಟಿಗಳನ್ನು ಸರಿಯಾಗಿ ಮುಚ್ಚುವ ಮೂಲಕ ಲಾರ್ವ ಉತ್ಪತ್ತಿ ಆಗದಂತೆ ಗಮನಿಸಬೇಕು. ಮನೆ ಹೊರಗೆ ಮಳೆನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಶಾಲಾ- ಕಾಲೇಜು, ಅಂಗಡಿ- ಮುಂಗಟ್ಟುಗಳು, ಬಸ್ ಡಿಪೋಗಳು, ವಾಣಿಜ್ಯ ಸಂರ್ಕೀಣಗಳು, ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಪ್ರದೇಶಗಳಲ್ಲಿ ನೀರಿನ ಶೇಖರಣೆ ಆಗದಂತೆ ಮತ್ತು ಘನತ್ಯಾಜ್ಯ ವಸ್ತುಗಳಲ್ಲಿ ಮಳೆನೀರು ಸಂಗ್ರಹ ಆಗದಂತೆ ನೋಡಿಕೊಂಡು ಅವುಗಳಲ್ಲಿ ಲಾರ್ವ ಉತ್ಪತ್ತಿ ಆಗದಂತೆ ನಿಗಾ ವಹಿಸಬೇಕು ಎಂದರು.ಹೆಚ್ಚು ದರ ಪಡೆಯುವಂತಿಲ್ಲ:
ರಾಜ್ಯಾದ್ಯಂತ ಡೆಂಘೀ ಪ್ರಕರಣ ಹೆಚ್ಚುತ್ತಿವೆ. ಖಾಸಗಿ ಪ್ರಯೋಗಾಲಯಗಳು ಡೆಂಘೀ ಪರೀಕ್ಷೆಗಾಗಿ ದುಪ್ಪಟ್ಟು ದರ ಪಡೆಯುತ್ತಿವೆ ಎಂಬ ದೂರಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ದರ ನಿಗದಿ ಮಾಡಿದೆ. ಡೆಂಘೀ ಪರೀಕ್ಷೆಯನ್ನು ಎಲಿಸಾ ಎನ್‌ಎಸ್1, ಐಜಿಎಂ ಪರೀಕ್ಷೆಗೆ ₹300 ಹಾಗೂ ರ‍್ಯಾಪಿಡ್ ಕಾರ್ಡ್ ಟೆಸ್ಟ್‌ಗೆ ₹250 ಮಾತ್ರ ಪಡೆಯಬೇಕು ಎಂದು ಸೂಚಿಸಲಾಗಿದೆ.ಆಸ್ಪತ್ರೆಗಳಲ್ಲಿ ದಾಖಲಾಗುವ ಶಂಕಿತ ಡೆಂಘೀಜ್ವರ ಪ್ರಕರಣಗಳ ಚಿಕಿತ್ಸೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಿರ್ವಹಣೆ ಮಾಡಬೇಕು. ಆಸ್ಪತ್ರೆ ಆವರಣ, ಲ್ಯಾಬ್‌ಗಳಲ್ಲಿ ಲಾರ್ವ ಸಮೀಕ್ಷೆ ಮಾಡಿ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು. ವಾರ್ಡ್‌ಗಳಲ್ಲಿ ರೋಗಿಗಳಿಗೆ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು. ಕಿಟಕಿಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು ಎಂದು ತಿಳಿಸಲಾಗಿದೆ.
ಲಾರ್ವ ನಿರ್ಮೂಲನೆಗೆ ಸೂಚನೆ:ಗ್ರಾಮಾಂತರ ಪ್ರದೇಶದಲ್ಲಿ ಲಾರ್ವ ನಿರ್ಮೂಲನೆಗಾಗಿ ಆರೋಗ್ಯ ಇಲಾಖೆಯೊಂದಿಗೆ ಸಮೀಕ್ಷೆ ನಡೆಸಿ ನಿರ್ಮೂಲನೆ ಮಾಡಬೇಕು. ಜನರಿಗೆ ಡೆಂಘೀ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸೂಚನೆ ನೀಡಿ, ಪ್ರತಿ ಶುಕ್ರವಾರ ಜಿಲ್ಲಾಡಳಿತದಿಂದ ಕೈಗೊಳ್ಳುವ ವಿಶೇಷ ಲಾರ್ವ ಸಮೀಕ್ಷೆ ಹಾಗೂ ನಿರ್ಮೂಲನಾ ಆಂದೋಲನದಲ್ಲಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಗ್ರಾಮ ವ್ಯಾಪ್ತಿಯ ದೇವಸ್ಥಾನ, ಕಚೇರಿಗಳು, ಹೋಟೆಲ್, ಶಾಲಾ, ಕಾಲೇಜುಗಳ ಪರಿಸರದಲ್ಲಿ ಸಮೀಕ್ಷೆ ನಡೆಸಿ ಲಾರ್ವ ನಾಶಪಡಿಸಲು ಪಂಚಾಯಿತಿಯಿಂದ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ನಗರ, ಪಟ್ಟಣ ಪ್ರದೇಶದಲ್ಲಿ ಲಾರ್ವ ನಿರ್ಮೂಲನೆ:ನಗರಾಭಿವೃದ್ಧಿ ಇಲಾಖೆಯಿಂದ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆಯಿಂದ ಎಲ್ಲ ಮನೆ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಜಾಗೃತಿ ಮೂಡಿಸಬೇಕು. ಶಾಲಾ, ಕಾಲೇಜಿನ ಆವರಣ, ಘನತ್ಯಾಜ್ಯ ವಸ್ತುಗಳಲ್ಲಿ ನೀರು ಶೇಖರಣೆ ಆಗದಂತೆ ನೋಡಿಕೊಳ್ಳಬೇಕು. ಪ್ರತಿ ಶುಕ್ರವಾರ ಎಲ್ಲ ಸಾರ್ವಜನಿಕರು ಲಾರ್ವ ನಿರ್ಮೂಲನೆಯಲ್ಲಿ ಕೈ ಜೋಡಿಸಬೇಕು ಎಂದು ತಿಳಿಸಿದ್ದಾರೆ.
ಕೈಗಾರಿಕೆ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಮಳೆನೀರು ಶೇಖರಣೆ ಆಗದಂತೆ ನೋಡಿಕೊಳ್ಳಬೇಕು. ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಶಾಲಾ, ಕಾಲೇಜು, ವಸತಿ ನಿಲಯ, ಅಂಗನವಾಡಿ ಕೇಂದ್ರ, ಶಾಲಾ ಸುತ್ತಮುತ್ತಲಿನ ಮೈದಾನದಲ್ಲಿ, ಘನತ್ಯಾಜ್ಯ ವಸ್ತುಗಳಲ್ಲಿ ನೀರು ಶೇಖರಣೆ ಆಗದಂತೆ ನೋಡಿಕೊಳ್ಳಬೇಕು.ಪ್ರತಿ ಶುಕ್ರವಾರ ವಿಶೇಷ ಲಾರ್ವ ಸಮೀಕ್ಷೆಯನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಿದ್ದು, ಸಾರ್ವಜನಿಕರು ಲಾರ್ವ ಸಮೀಕ್ಷೆ ಮತ್ತು ನಿರ್ಮೂಲನೆಯಲ್ಲಿ ಭಾಗವಹಿಸಬೇಕು. ಡೆಂಘೀರೋಗ ಲಕ್ಷಣಗಳು ಕಂಡುಬಂದ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ತಿಳಿಸಿದ್ದಾರೆ.