ಮಹಿಳೆಯರಿಗಾಗಿ ವಿಶೇಷ ಕಾನೂನು ಕಾರ್ಯಕ್ರಮ: ಶುಭ

KannadaprabhaNewsNetwork | Published : Dec 21, 2024 1:19 AM

ಸಾರಾಂಶ

ಮಹಿಳೆಯರಿಗೆ ಎಲ್ಲಿ ಗೌರವ ಸಿಗುತ್ತದೋ ಅಲ್ಲಿ ದೇವತೆಗಳು ಇರುತ್ತಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶುಭ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಹಿಳೆಯರು ಎಂದರೆ ಶಕ್ತಿ ಸ್ವರೂಪ. ಆದರೆ ಇಂತಹ ಮಹಿಳೆಯರಿಗೆ ಹೆಚ್ಚಿನ ದೌರ್ಜನ್ಯವಾಗುತ್ತಿದೆ. ಎಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತದೋ ಅಲ್ಲಿ ದೇವತೆಗಳು ಇರುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ತಿಳಿಸಿದರು.

ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ಬಾಲಭವನದಲ್ಲಿ ಶುಕ್ರವಾರ ನಡೆದ ಮಹಿಳೆಯರಿಗಾಗಿ ಕಾನೂನು ಅರಿವು ವಿಧಾನ ಸೆ ಸಮಾದಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಿದರೂ ಸಹ ಸಾಕಷ್ಟು ಅನ್ಯಾಯಗಳು ನಡೆಯುತ್ತಿವೆ. ಹಾಗೆಯೇ ಮಹಿಳೆಯರಿಗಾಗಿ ವಿಶೇಷ ಕಾನೂನು ಕಾರ್ಯಕ್ರಮಗಳಿವೆ. ಅದನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಮಹಿಳೆಯರ ಹಕ್ಕುಗಳ ಬಗ್ಗೆ ಹೆಚ್ಚಿನ ಧ್ವನಿ ಎತ್ತಿದವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದು ಹೇಳಿದರು. ಮೊದಲು ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇಲ್ಲವೆಂಬ ಕಾನೂನು ಇತ್ತು. ಆದರೆ ಈಗ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇದೆ ಎಂಬ ಕಾನೂನು ಸರ್ವೋಚ್ಚ ನ್ಯಾಯಾಲವು ಹೊರಡಿಸಿದೆ. ಇದೆಲ್ಲವೂ ಮಹಿಳೆಯರಿಗೆ ಸಮಾನತೆ ಹಕ್ಕು ಇದೆ ಎಂಬುದಾಗಿದೆ. ಮಹಿಳೆಯರು ಅನೇಕ ವಿಷಯಗಳಲ್ಲಿ ಬಲಿಯಾಗುತ್ತಿದ್ದಾರೆ. ಅಮಾನವೀಯವಾಗಿ ದೌರ್ಜನ್ಯಗಳು ನಡೆಯುತ್ತಿವೆ ಎಂದರು.

ಮೊದಲಾಗಿ ನಾವು ನಮ್ಮನ್ನು ಪ್ರೀತಿಸಬೇಕು ಆಗ ನಾವು ಎಲ್ಲವನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಬರುತ್ತದೆ. ಕಾನೂನು ಅರಿವು ನಮ್ಮಲ್ಲಿಯೇ ಉಳಿಯಬಾರದು. ನಾವು ಮತ್ತೊಬ್ಬರಿಗೆ ತಿಳಿಸಿ ಅವರಿಗೂ ತಿಳಿಯುವಂತೆ ಮಾಡಬೇಕು ಎಂದು ಅವರು ಮಾಹಿತಿ ನೀಡಿದರು.

ಹಿರಿಯ ನಾಗರಿಕ ಹಾಗೂ ವಿಕಲಚೇತನ ಕಲ್ಯಾಣಾಧಿಕಾರಿ ಕೆ.ಜಿ.ವಿಮಲಾ ಅವರು ಮಾತನಾಡಿ ಇದೊಂದು ಸಣ್ಣ ಕಾರ್ಯಕ್ರಮವೆಂದು ನಾವು ತಿಳಿದುಕೊಳ್ಳಬಾರದು. ನಾವು ಯಾವುದೇ ಒಂದು ವಿಷಯವನ್ನು ತಿಳಿದುಕೊಂಡ ನಂತರ ಆ ವಿಷಯವನ್ನು ಹತ್ತು ಜನರಿಗೆ ತಿಳಿಸಿದಾಗ ನಮ್ಮ ಸಮಾಜವು ಸಮೃದ್ಧವಾಗುತ್ತದೆ ಎಂದರು.

ಯಾವುದೇ ವಿಷಯದಲ್ಲಿ ಕುಗ್ಗದೇ ಎದುರಿಸುವ ಶಕ್ತಿ ಮಹಿಳೆಯರಿಗಿದೆ. ಅಲ್ಲದೆ ಅವರು ಯಾವುದೇ ವಿಷಯದಲ್ಲಿ ಹೆದರದೆ ಧೈರ್ಯವಾಗಿ ಎದುರಿಸಬೇಕು ಎಂದು ಧೈರ್ಯ ತುಂಬಿದರು. ಹಾಗೆಯೇ ವಿಶೇಷ ಚೇತನರಿಗೆ ಸಂಬಂಧಪಟ್ಟಂತೆ ಮಾತನಾಡಿ ಸರ್ಕಾರದಿಂದ ಬರುವ ಯೋಜನೆಗಳನ್ನು ಉಪಯೋಗಿಸಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ಹಿರಿಯ ನಾಗರಿಕರಿಗೆ ಯಾವುದೇ ತೊಂದರೆಗಳಿದ್ದಲ್ಲಿ ಅದರ ಮಾಹಿತಿ ಪಡೆಯಲು ಟೋಲ್ ಫ್ರೀ ನಂಬರ್ 1090 ಕರೆಮಾಡುವಂತೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಸಿ.ನಟರಾಜ್ ಅವರು ಮಾತನಾಡಿ ಮಹಿಳೆಯರಿಗಾಗಿ ನಮ್ಮ ಇಲಾಖೆ ವತಿಯಿಂದ ಅನೇಕ ಸೌಲಭ್ಯಗಳು ಹಾಗೂ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ಗರ್ಭಿಣಿ ತಾಯಂದಿರಿಗಾಗಿ ಪ್ರತಿ ಅಂಗನವಾಡಿ ಕೇಂದ್ರದಲ್ಲಿ ಸಾಂತ್ವನ ಸೆಂಟರ್ ವೇದಿಕೆಯನ್ನು ಆರಂಭಿಸಲಾಗಿದೆ. ಅಲ್ಲದೆ ಗರ್ಭಿಣಿ ತಾಯಂದಿರಿಗೆ ಆ ಸಮಯದಲ್ಲಿ ಆಗುವ ಕೂಲಿ ನಷ್ಟ ಹಾಗೂ ಅವರ ವ್ಯಾಕ್ಸಿನೆಷನ್ ಶೇ.100 ಆಗುವ ಸಲುವಾಗಿ ಪ್ರದಾನ ಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ 5 ಸಾವಿರ ರು. ಗಳನ್ನು ನೀಡಲಾಗುತ್ತಿದೆ ಎಂದರು.

ಮಹಿಳೆಯರ ದೌರ್ಜನ್ಯ ತಡೆಗಟ್ಟುವ ಸಲುವಾಗಿ ಸಖಿ ಒನ್ ಸ್ಟಾಪ್ ಸೆಂಟರನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಯಾವುದೇ ಮಹಿಳೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆಗೆ ಒಳಪಟ್ಟಿದ್ದರೆ ಅವರಿಗಾಗಿ ವೈದ್ಯಕೀಯ ಸೇವೆ, ಪೊಲೀಸ್ ಸೇವೆ, ಕಾನೂನು ಸೇವೆ ಎಲ್ಲವೂ ಇದರಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಮಹಿಳಾ ಸೇವಾವಾಣಿ 181 ನಲ್ಲಿ ಅಗತ್ಯ ಸೇವೆಗಳ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ನ್ಯಾಯವಾದಿ ಕೆ.ಎಂ.ಮೀನಾ ಕುಮಾರಿ, ಮಕ್ಕಳ ವಿಶೇಷ ಪೊಲೀಸ್ ಘಟಕದ ಸುಮತಿ ಇತರರು ಇದ್ದರು.

Share this article