ಗರಕ್ಕೆ ನವ ಭಾರತದ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ: ಪ್ರೊ.ಎನ್.ಕೆ. ಲೋಕನಾಥ್

KannadaprabhaNewsNetwork | Published : Apr 15, 2024 1:16 AM

ಸಾರಾಂಶ

ಬದುಕಿನುದ್ದಕ್ಕೂ ಎಲ್ಲರನ್ನೂ ಒಳಗೊಳ್ಳುವ ಚರಿತ್ರೆಯ ನಿರ್ಮಾಣದ ಹಾದಿಯನ್ನು ನಿರ್ಮಿಸಿ ಪ್ರತಿಯೊಬ್ಬ ಭಾರತೀಯನ ಬೆಳವಣಿಗೆಗೆ ಮುಕ್ತ ಅವಕಾಶವನ್ನು ಕಲ್ಪಿಸಿದ ಕೀರ್ತಿ ಡಾ. ಅಂಬೇಡ್ಕರ್ ಅವರದ್ದು.

ಕನ್ನಡಪ್ರಭ ವಾರ್ತೆ ಮೈಸೂರು

ನವ ಭಾರತದ ನಿರ್ಮಾಣದಲ್ಲಿ ಡಾ. ಅಂಬೇಡ್ಕರ್ ಅವರ ಕೊಡುಗೆ ಅಪಾರವಾದದ್ದು. ಛಿದ್ರಗೊಂಡಿದ್ದ ಸಮಾಜವನ್ನು ಒಂದು ಗೂಡಿಸುವ ನೆಲೆಗಳನ್ನು ಕಟ್ಟುವಲ್ಲಿ ಅವರ ಪಾತ್ರ ಅವಿಸ್ಮರಣೀಯವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

ಮಾನಸಗಂಗೋತ್ರಿಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ವಿಶ್ವಜ್ಞಾನಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕದ ಸಹಯೋಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತಿಯ ಅಂಗವಾಗಿ ಭಾನುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಅಭಿನಂದನಾ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಬದುಕಿನುದ್ದಕ್ಕೂ ಎಲ್ಲರನ್ನೂ ಒಳಗೊಳ್ಳುವ ಚರಿತ್ರೆಯ ನಿರ್ಮಾಣದ ಹಾದಿಯನ್ನು ನಿರ್ಮಿಸಿ ಪ್ರತಿಯೊಬ್ಬ ಭಾರತೀಯನ ಬೆಳವಣಿಗೆಗೆ ಮುಕ್ತ ಅವಕಾಶವನ್ನು ಕಲ್ಪಿಸಿದ ಕೀರ್ತಿ ಡಾ. ಅಂಬೇಡ್ಕರ್ ಅವರದ್ದು. ಅವರು ಭಾರತದ ಸಮಸ್ಯೆಗಳಿಗೆ ತಮ್ಮ ಆಳವಾದ ಅಧ್ಯಯನದ ಮೂಲಕವೇ ಪರಿಹಾರದ ಮಾರ್ಗಗಳನ್ನು ತೋರಿಸಿಕೊಟ್ಟಿದ್ದಾರೆ. ಅಂದು ಅಂಬೇಡ್ಕರ್ ಅವರು ಒಬ್ಬ ವಿದ್ಯಾರ್ಥಿಯಾಗಿ ಭಾರತದಲ್ಲಿ ಅನುಭವಿಸಿದ ಸವಾಲುಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಇಲ್ಲದಂತೆ ಮಾಡಿರುವ ಮಹಾನಾಯಕ ಎಂದು ಅವರು ಸ್ಮರಿಸಿದರು.

ಇದೇ ವೇಳೆ ಒಳಗೊಳ್ಳುವ ಸಮಾಜದ ರೂವಾರಿಯಾಗಿ ಅಂಬೇಡ್ಕರ್ ಕುರಿತು ಹೈದರಾಬಾದ್ ಕೇಂದ್ರೀಯ ವಿವಿ ಪ್ರಾಧ್ಯಾಪಕ ಪಿ. ತಿರುಮಾಳ್ ವಿಶೇಷ ಉಪನ್ಯಾಸ ನೀಡಿದರು.

ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ. ಬಸಪ್ಪ, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕಿ ಡಾ.ಆರ್. ಇಂದಿರಾ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕದ ಉಪ ಕುಲಸಚಿವ ಎನ್.ಎಸ್. ಚಿದಾನಂದಮೂರ್ತಿ, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನರೇಂದ್ರಕುಮಾರ್ ಮೊದಲಾದವರು ಇದ್ದರು.

Share this article