ಕುಷ್ಟಗಿಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ

KannadaprabhaNewsNetwork | Published : Aug 9, 2024 12:47 AM

ಸಾರಾಂಶ

ನಾಗರ ಪಂಚಮಿ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಕೇಸೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರು ನಾಗಪ್ಪನ ಕಟ್ಟೆಗೆ ಹಾಲೆರೆಯುವ ಮೂಲಕ ಸಂಭ್ರಮದಿಂದ ಹಬ್ಬ ಆಚರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ನಾಗರ ಪಂಚಮಿ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಕೇಸೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರು ನಾಗಪ್ಪನ ಕಟ್ಟೆಗೆ ಹಾಲೆರೆಯುವ ಮೂಲಕ ಸಂಭ್ರಮದಿಂದ ಹಬ್ಬ ಆಚರಣೆ ಮಾಡಿದರು.

ಮುಂಜಾನೆಯಿಂದಲೆ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಮನೆಯಲ್ಲಿ ಹೋಳಿಗೆ, ಖರ್ಚಿಕಾಯಿ, ಎಳ್ಳು ಚಿಗುಳಿ, ಎಳ್ಳುಂಡಿ ಸಿದ್ದಪಡಿಸಿ ಮಹಿಳೆಯರೆಲ್ಲ ಸೇರಿ ಸಮೀಪದ ನಾಗಪ್ಪ ದೇವಸ್ಥಾನಕ್ಕೆ ತೆರಳಿ ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲವನ್ನಿಟ್ಟು ಹಾಲೆರೆದರು.

ವಿಶೇಷವಾಗಿ ರೈತ ಮಹಿಳೆಯರು ವರ್ಷಪೂರ್ತಿ ಕೃಷಿ ಬದುಕಿನಲ್ಲಿ ತೊಡಗಿದ್ದಾಗ ಯಾವುದೇ ವಿಷ ಜಂತುಗಳಿಂದ ಅಪಾಯವಾಗದಿರಲಿ. ನಮ್ಮ ಮಕ್ಕಳು ನಾವು ಕ್ಷೇಮದಿಂದ ಇರಲಿ. ಮಳೆ-ಬೆಳೆ ಸಮೃದ್ಧಿಯಾಗಿ ಬರಲಿ. ನಾಡಿನೆಲ್ಲೆಡೆ ಸುಖ-ಶಾಂತಿ ನೆಲೆಸಲಿ ಎಂಬು ಪ್ರಾರ್ಥಿಸಿ ಹಾಲೆರೆದರು.ಮಹಿಳೆಯರು, ಮಕ್ಕಳು ಹೊಸಬಟ್ಟೆ ಧರಿಸಿ ಸಂಭ್ರಮಪಟ್ಟರು. ನಂತರ ತರಹೇವಾರಿ ಉಂಡಿಗಳು, ಕುರುಕುಲ ತಿಂಡಿಗಳನ್ನು ಅಕ್ಕಪಕ್ಕದವರೊಂದಿಗೆ ವಿನಿಮಯ ಮಾಡಿ ಸಂಭ್ರಮಿಸಿದರು.

ಸಂತಾನ ಪ್ರಾಪ್ತಿ, ಮಕ್ಕಳ ಉನ್ನತಿ, ನಾಗದೋಷ ಪರಿಹಾರಕ್ಕಾಗಿ, ಸ್ತ್ರೀಯರು ತಮ್ಮ ಸೋದರರ ಒಳಿತಿಗಾಗಿ ಅನಾದಿ ಕಾಲದಿಂದಲೂ ನಾಗದೇವತೆಯನ್ನು ಪೂಜಿಸುತ್ತಾ ಬಂದಿರುವುದು ವಿಶೇಷ. ಮನೆಯಲ್ಲಿ ತಾಯಂದಿರು ನಾಗಮೂರ್ತಿಗೆ ವಿಶೇಷ ತಿನಿಸುಗಳ ನೈವೇದ್ಯ ಮತ್ತು ಹರಕೆ ಹೊತ್ತವರು ಲೋಹಗಳ ಕಣ್ಣು, ಮೀಸೆ, ಇತ್ಯಾದಿಗಳನ್ನು ಸಮರ್ಪಿಸಿ, ಮನೆಯವರ ಶ್ರೇಯೋಭಿವೃದ್ಧಿಗಾಗಿ ಹರಕೆ ತೀರಿಸುವುದು ನಂಬಿಕೆಯಾಗಿದೆ.

ಹಬ್ಬದ ಅಂಗವಾಗಿ ಮನೆಯಂಗಳದ ಮರಗಳಿಗೆ ಹಗ್ಗದಿಂದ ಜೋಕಾಲಿ ಕಟ್ಟಿಕೊಂಡು ಮಕ್ಕಳು ಸರದಿಯಂತೆ ಜೋಕಾಲಿ ಆಡುತ್ತಾ ಸಂಭ್ರಮಿಸಿದರು.

ಎಲ್ಲೆಲ್ಲಿ:

ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳದ ಶುಖಮುನಿಸ್ವಾಮಿ ಮಠದ ಹತ್ತಿರ, ಪಾದಗಟ್ಟೆಯ ಹತ್ತಿರ ರುದ್ರಮುನಿ ಸ್ವಾಮಿ ಮಠದ ಹತ್ತಿರ, ಸಂತೆ ಬಜಾರ್ ಹತ್ತಿರ ಹಾಗೂ ವಿವಿಧ ನಾಗಕಟ್ಟೆಯ ಬಳಿ ಮಹಿಳೆಯರು ನಾಗ ದೇವತೆಗೆ ಹಾಲೆರೆದು ಜೋಕಾಲಿ ಆಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

Share this article