ಕನ್ನಡಪ್ರಭ ವಾರ್ತೆ ಮೈಸೂರು
ಕ್ರಾಫರ್ಡ್ ಭವನದಲ್ಲಿ ಭಾನುವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ 104ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ನಮ್ಮ ಯುವಜನರು ನಮ್ಮ ರಾಜ್ಯ ಮತ್ತು ದೇಶವನ್ನು ಉನ್ನತ ಮಜಲಿಗೆ ಕೊಂಡೊಯ್ಯಬೇಕು. ಆದರೆ, ಅನೇಕ ಸುಶಿಕ್ಷಿತ ಜನರೇ ಇವತ್ತು ಕಾನೂನುಬಾಹಿರವಾದ ಸಂಗತಿಗಳಲ್ಲಿ, ಅಪರಾಧಗಳಲ್ಲಿ, ದ್ವೇಷ ಮುಂತಾದ ವಿನಾಶಕಾರಿಯಾದ ವಿಚಾರಗಳಲ್ಲಿ ತೊಡಗಿರುವುದು ಆತಂಕಕಾರಿಯಾಗಿದೆ. ನಮ್ಮ ಬುದ್ಧಿವಂತಿಕೆಯನ್ನು ಹೆಚ್ಚು ರಚನಾತ್ಮಕ ಉದ್ದೇಶಗಳಿಗೆ ಬಳಸಬೇಕು ಎಂದರು.
ವಿದ್ಯಾರ್ಥಿಗಳು ಕನಸು ನನಸಾಗಬೇಕಾದರೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆತವಿಶ್ವಾಸವಿಲ್ಲದಿದ್ದರೆ ಅಂಥವರಿಗೆ ಯಶಸ್ಸು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಸವಾಲುಗಳಿರುತ್ತವೆ. ಸಮಸ್ಯೆಗಳಿರುತ್ತವೆ. ಈ ಸಮಸ್ಯೆಗಳು ಎದುರಾಗುವುದು ನಿಮ್ಮನ್ನು ನಾಶಗೊಳಿಸುವುದಕ್ಕಲ್ಲ. ಬದಲಿಗೆ ನಿಮ್ಮ ಅಂತಃಶಕ್ತಿಯನ್ನು ಪರೀಕ್ಷಿಸುವುದಕ್ಕೆ ಎಂದು ಅವರು ಹೇಳಿದರು.ಅಂಕಗಳು ಹಾಗೂ ಶೈಕ್ಷಣಿಕ ಶ್ರೇಷ್ಠತೆಯೇ ನಮ್ಮ ಯಶಸ್ವಿ ಬದುಕಿನ ಮಾನದಂಡವಲ್ಲ. ಕಡಿಮೆ ಅಂಕಗಳನ್ನು ತೆಗೆದುಕೊಂಡವರು ಬದ್ಧತೆ, ಶ್ರಮ ಹಾಗೂ ಶ್ರದ್ಧೆಯಿಂದ ಸಾಧಕರಾಗಬಹುದು. ಸ್ಥಾನಮಾನಕ್ಕಿಂತ ಶ್ರದ್ಧೆ ಬಹಳ ಮುಖ್ಯ. ಹಿರಿತನಕ್ಕಿಂತ ಪ್ರಾಮಾಣಿಕತೆ ಮುಖ್ಯ. ಬೆಲೆ ಬಾಳುವ ವಸ್ತುಗಳಿಗಿಂತ ಮೌಲ್ಯಗಳು ಮುಖ್ಯ. ಅಂಕಗಳಿಗಿಂತ ಮನಸ್ಸನ್ನು ಅಂಕೆಯಲ್ಲಿಡುವುದು ಮುಖ್ಯ ಎಂದು ಅವರು ಸಲಹೆ ನೀಡಿದರು.
ಒತ್ತಡ ಅಂದರೆ ನಿರೀಕ್ಷೆ ಮತ್ತು ಕ್ರಿಯೆ ಇವೆರಡರ ನಡುವಿನ ವ್ಯತ್ಯಾಸ ಮಾತ್ರ. ನಿಮ್ಮ ಗುರಿ ಸಾಧನೆಯ ಹಾದಿಯಲ್ಲಿ ಒಳ ದಾರಿಯನ್ನು ಹಿಡಿಯಬೇಡಿ. ನಿಮ್ಮ ಗುರಿ ಸಾಧನೆಯ ಪಯಣದಲ್ಲಿ ಮುಳ್ಳುಗಳು ಎದುರಾಗಬಹುದು. ಆದರೆ, ಶ್ರಮವನ್ನು ತ್ಯಜಿಸಬಾರದು. ನ್ಯಾಯ ಮಾರ್ಗವನ್ನು ಬಿಡದೆ ಬದುಕಿನ ಮೌಲ್ಯಗಳಿಗೆ ಗೌರವ ಸಲ್ಲಿಸಬೇಕು. ಇತರರೊಡನೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ. ನಿಮ್ಮ ಜೊತೆ ನಿಮ್ಮನ್ನೇ ಹೋಲಿಕೆ ಮಾಡಿಕೊಂಡು ಮುಂದೆ ಸಾಗಬೇಕು. ನಿಮಗೆ ಅತ್ಯುತ್ತಮ ಪ್ರೇರಣೆ ಅಂದರೆ ನೀವೇ ಎಂದು ಅವರು ಕಿವಿಮಾತು ಹೇಳಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ವಿ.ಆರ್. ಶೈಲಜ, ಪರೀಕ್ಷಾಂಗ ಕುಲಸಚಿವ ಡಾ.ಕೆ.ಎಂ. ಮಹದೇವನ್ ಇದ್ದರು.
ಭಾರತದ ಸರಿ ಸುಮಾರು ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಅನುದಾನದ ಕೊರತೆಯಿಂದಾಗಿ ಸಂಶೋಧನೆ ಹಿಂದೆ ಸರಿದಿದೆ. ಸಂಶೋಧನಾ ಚಟುವಟಿಕೆಗಳಿಗೆ ಸಾಕಷ್ಟು ಸಂಪನ್ಮೂಲವನ್ನು ಒದಗಿಸಬೇಕಾದ್ದು ರಾಜ್ಯ ಸರ್ಕಾರಗಳ ಹಾಗೂ ಯುಜಿಸಿಯ ಕರ್ತವ್ಯವಾಗಿದೆ ಎಂದು ಎಂದು ಜಯದೇವ ಆಸ್ಪತ್ರೆಯ ವಿಶ್ರಾಂತ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.
ಉನ್ನತ ಶಿಕ್ಷಣದಲ್ಲಿ ಸಂಶೋಧನೆಯಿಲ್ಲದೆ ಪ್ರಗತಿ ಇಲ್ಲ. ನಾವೀನ್ಯತೆ ಇಲ್ಲ ಮತ್ತು ಹೊಸ ಚಿಂತನೆಗಳು ಇಲ್ಲ. ಸಂಶೋಧನೆಯೇ ಹೊಸ ಹೊಸ ಆವಿಷ್ಕಾರಗಳ ಜೀವಾಳ. ಅದು ಇಲ್ಲದೇ ಕಲಿಕಾ ಕ್ರಿಯೆಯೇ ಸ್ಥಗಿತವಾಗುತ್ತದೆ. ಆದ್ದರಿಂದ ಸಂಬಂಧಿಸಿದ ಸಂಸ್ಥೆಗಳು ಅನುದಾನ ನೀಡಬೇಕು. ಜೊತೆಗೆ ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಬೋಧಕರು, ಸಿಂಡಿಕೇಟ್ ಸದಸ್ಯರು ಪರಸ್ಪರ ಚರ್ಚೆಗಳನ್ನು ನಡೆಸಿ ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ರೂಪುರೇಷೆಗಳನ್ನು ರೂಪಿಸುವ ಜವಾಬ್ದಾರಿ ನಿಭಾಯಿಸಬೇಕು ಎಂದು ಅವರು ಹೇಳಿದರು.