ಶುಂಠಿ, ಅರಿಶಿನದಂತಹ ಮಸಾಲೆ ಪದಾರ್ಥಗಳು ತಂಬಾಕಿಗೆ ಪರ್‍ಯಾಯ ಬೆಳೆಯಾಗಿ ನಿಲ್ಲಬಲ್ಲದು: ಡಾ.ಎಸ್.ಜೆ. ಅಂಕೇಗೌಡ

KannadaprabhaNewsNetwork | Published : Mar 29, 2024 12:50 AM

ಸಾರಾಂಶ

ಭಾರತ ಈ ಹಿಂದಿನಿಂದಲೂ ಮಸಾಲೆ ಪದಾರ್ಥಗಳನ್ನು ಬೆಳೆಯುವ ತವರೂರು ಆಗಿದೆ. ಪಾಶ್ಚಾತ್ಯರು ಭಾರತಕ್ಕೆ ಬಂದಿದ್ದೇ ಮಸಾಲೆ ಪದಾರ್ಥಗಳ ಸವಿರುಚಿಯನ್ನು ಪಡೆಯಲು ಎನ್ನುವುದನ್ನು ತಿಳಿದಿದ್ದೇವೆ. ಇಂದಿಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಮಸಾಲೆ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಹುಣಸೂರು ಉಪವಿಭಾಗ ವ್ಯಾಪ್ತಿಯ ರೈತರು ತಂಬಾಕಿನೊಂದಿಗೆ ಶುಂಠಿ ಮತ್ತು ಅರಿಶಿನ ಬೆಳೆಯನ್ನು ಬೆಳೆಯುವ ಮೂಲಕ ಆರ್ಥಿಕ ಸದೃಢತೆ ಗಳಿಸಬಹುದು.

ಕನ್ನಡಪ್ರಭ ವಾರ್ತೆ ಹುಣಸೂರು

ಶುಂಠಿ ಮತ್ತು ಅರಿಶಿನದಂತಹ ಮಸಾಲೆ ಪದಾರ್ಥಗಳು ತಂಬಾಕಿಗೆ ಪರ್‍ಯಾಯ ಬೆಳೆಯಾಗಿ ಸಮರ್ಥವಾಗಿ ನಿಲ್ಲಬಲ್ಲದು ಎಂದು ಮಡಿಕೇರಿಯ ಅಪ್ಪಂಗಾಲದಲ್ಲಿನ ಸಿಎಆರ್-ಐಐಎಸ್ಆರ್ ನ ಮುಖ್ಯಸ್ಥ ಡಾ.ಎಸ್.ಜೆ. ಅಂಕೇಗೌಡ ಅಭಿಪ್ರಾಯಪಟ್ಟರು.

ಕೇರಳಾ ರಾಜ್ಯದ ಕೋಜಿಕೋಡ್ ನ ಐಸಿಎಆರ್-ಐಐಎಸ್.ಆರ್ ಮತ್ತು ಹುಣಸೂರು ನಗರದ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ (ಸಿಟಿಆರ್‌) ಸಹಯೋಗದಲ್ಲಿ ಗುರುವಾರ ಕೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಶುಂಠಿ ಮತ್ತು ಅರಿಶಿಣ ಬೆಳೆಗಳಲ್ಲಿ ಸುಧಾರಿತ ಪದ್ಧತಿ ಕುರಿತಾದ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಈ ಹಿಂದಿನಿಂದಲೂ ಮಸಾಲೆ ಪದಾರ್ಥಗಳನ್ನು ಬೆಳೆಯುವ ತವರೂರು ಆಗಿದೆ. ಪಾಶ್ಚಾತ್ಯರು ಭಾರತಕ್ಕೆ ಬಂದಿದ್ದೇ ಮಸಾಲೆ ಪದಾರ್ಥಗಳ ಸವಿರುಚಿಯನ್ನು ಪಡೆಯಲು ಎನ್ನುವುದನ್ನು ತಿಳಿದಿದ್ದೇವೆ. ಇಂದಿಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಮಸಾಲೆ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಹುಣಸೂರು ಉಪವಿಭಾಗ ವ್ಯಾಪ್ತಿಯ ರೈತರು ತಂಬಾಕಿನೊಂದಿಗೆ ಶುಂಠಿ ಮತ್ತು ಅರಿಶಿನ ಬೆಳೆಯನ್ನು ಬೆಳೆಯುವ ಮೂಲಕ ಆರ್ಥಿಕ ಸದೃಢತೆ ಗಳಿಸಬಹುದು. ಅರಿಶಿನ ಮತ್ತು ಶುಂಠಿ ಕೃಷಿ ತಂತ್ರಜ್ಞಾನಗಳ ಕುರಿತು ರೈತರಿಗೆ ಆಗಿಂದ್ದಾಗೆ ತರಬೇತಿ ನೀಡುವ ಅವಶ್ಯಕತೆಯಿದೆ. ಅಲ್ಲದೇ ಗುಣಮಟ್ಟದ ಬಿತ್ತನೆಬೀಜಗಳ ಉತ್ಪಾದನೆಯ ಮೂಲಕ ರೈತರನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ. ತಂಬಾಕಿಗೆ ಪರ್ಯಾಯವಾಗಿ ಕೂಡ ಈ ಮಸಾಲೆ ಪದಾರ್ಥಗಳು ರೈತರನ್ನು ಆರ್ಥಿಕವಾಗಿ ಕೈಹಿಡಿಯುವ ಸಾಮರ್ಥ್ಯ ಹೊಂದಿದೆ ಎಂದರು.

ಐಐಎಸ್.ಆರ್.ನ ಹಿರಿಯ ವಿಜ್ಞಾನಿ ಡಾ.ಕೆ. ಕಂದಿಯಣ್ಣನ್ ತೋಟಗಾರಿಕಾ ಬೆಳೆಗಳ ಸಮಗ್ರ ಅಭಿವೃದ್ಧಿಯಲ್ಲಿ ಮಸಾಲೆ ಪದಾರ್ಥಗಳ ಪ್ರಾಮುಖ್ಯತೆ ಕುರಿತಾಗಿ ಮಾಹಿತಿ ನೀಡಿದರು. ಮಸಾಲೆ ಪದಾರ್ಥಗಳು ತೂಕದಲ್ಲಿ ಹಗುರಾಗಿದ್ದರೂ ಬೆಲೆಯಲ್ಲಿ ಭಾರವಾಗಿರುತ್ತವೆ ಎಂದರು.

ಸಿಟಿಆರ್.ಐ ಮುಖ್ಯಸ್ಥ ಡಾ.ಎಸ್. ರಾಮಕೃಷ್ಣನ್ ಸ್ಥಳೀಯ ರೈತರು ಅರಿಶಿನ ಮತ್ತು ಶುಂಠಿ ಬೆಳೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆದು ಸುಧಾರಿತ ಕೃಷಿ ಪದ್ಧತಿ ಅನುಸರಿಸುವ ಅಗತ್ಯವಿದೆ ಎಂದರು.

ವಿಜ್ಞಾನಿಗಳಾದ ಡಾ.ಪಿ. ರಾಜೀವ್, ಡಾ.ಎಚ್.ಜೆ. ಅಕ್ಷಿತಾ, ಡಾ. ಮಹಮದ್ ಫೈಸಲ್ ಸೇರಿದಂತೆ 120ಕ್ಕೂ ಹೆಚ್ಚು ಪ್ರಗತಿಪರ ರೈತರು ಇದ್ದರು.

Share this article