ಜೀವನ ಶಿಕ್ಷಣ ಶಿಬಿರದಲ್ಲಿ ವಿದೇಶಿಗರಿಗೆ ಆಧ್ಯಾತ್ಮಿಕ ಶಿಕ್ಷಣ

KannadaprabhaNewsNetwork | Published : Dec 8, 2023 1:45 AM

ಸಾರಾಂಶ

ಕಳೆದ ಕೆಲವು ದಿನಗಳಿಂದ ಯಲ್ಲಾಪುರದಲ್ಲಿ ನಾರ್ವೆ ದೇಶದ ೨೫ ವ್ಯಕ್ತಿಗಳಿಗೆ ಜೀವನ ಶಿಕ್ಷಣ ನೀಡುವ ಪ್ರಕ್ರಿಯೆಯನ್ನು ಸಂಹಿತಾ ಟ್ರಸ್ಟ್ ಕೈಗೊಂಡಿದೆ.

ಯಲ್ಲಾಪುರ:

ತಾಲೂಕಿನ ಗ್ರಾಮೀಣ ಪ್ರದೇಶದ ಟ್ರಸ್ಟ್‌ವೊಂದು ವಿದೇಶಿಗರನ್ನು ಆಕರ್ಷಿಸಿ ಭಾರತದ ಯೋಗ, ಧ್ಯಾನ, ಭಗವದ್ಗೀತೆಯನ್ನು ವಿದೇಶದಲ್ಲಿ ಪಸರಿಸುತ್ತಿದೆ. ಭಾರತೀಯ ಜೀವನ, ಶಿಕ್ಷಣ, ಕೌಟುಂಬಿಕ ವ್ಯವಸ್ಥೆಯನ್ನು ವಿದೇಶಿಗರಲ್ಲಿ ಮೂಡಿಸುತ್ತ ತಾಲೂಕಿನ ಬಾಗಿನಕಟ್ಟಾವನ್ನು ಕೇಂದ್ರವಾಗಿಟ್ಟುಕೊಂಡ ಸಂಹಿತಾ ಟ್ರಸ್ಟ್‌ ದೇಶ-ವಿದೇಶಗಳಲ್ಲಿ ತನ್ನ ಗರಿಮೆ ತೋರುತ್ತಿದೆ.

ಮೈಸೂರಿನ ಅಮೃತಾ ವಿಶ್ವ ವಿದ್ಯಾಪೀಠದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ವಿಘ್ನೇಶ್ವರ ಭಟ್ಟ ಹಾಗೂ ಬೆಂಗಳೂರಿನ ಯೋಗ ತರಬೇತುದಾರ ಪ್ರಸಾದ ಭಟ್ಟ ದುಂಡಿ ೨೦೧೪ರಲ್ಲಿ ಹುಟ್ಟುಹಾಕಿದ ಸಂಸ್ಥೆ ಸಂಹಿತಾ ಟ್ರಸ್ಟ್. ಇದು ಜೀವನ ಶಿಕ್ಷಣ ನೀಡುವ ಕೇಂದ್ರವಾದರೆ, ಇದರ ಅಂಗ ಸಂಸ್ಥೆಗಳಾದ ಸಾಧನ ಗಂಗಾದ ಮೂಲಕ ಮಂತ್ರ, ಹವನ, ಯಜ್ಞ ಯಾಗಾದಿಗಳನ್ನು ಪ್ರಾಯೋಗಿಕವಾಗಿ ಸಂಶೋಧನೆ ನಡೆಸುತ್ತಿದ್ದು, ಋಷಿಕುಲಂ ಆಧ್ಯಾತ್ಮಿಕತೆಯ ಬಗೆಗೆ ಸಂಶೋಧನೆ ನಡೆಸುತ್ತಿದೆ.ಮೈಸೂರಿನಲ್ಲಿ ಭಗವದ್ಗೀತೆ ಕುರಿತಾಗಿ ಅಧ್ಯಯನ ನಡೆಸಿ, ಭಗವದ್ಗೀತೆಯನ್ನು ನಾರ್ವೆ ಭಾಷೆಗೆ ಭಾಷಾಂತರ ಮಾಡಿದ ನಾರ್ವೆಯ ಅಲೆಕ್ಸಾಂಡರ್ ಮೇಡಿನ್ ವಿಘ್ನೇಶ್ವರ ಭಟ್ಟರ ಸಂಪರ್ಕಕ್ಕೆ ಬಂದಿದ್ದಾರೆ. ಬಳಿಕ ನಾರ್ವೆದಲ್ಲಿ ಕ್ರೈಂ, ಡ್ರಗ್ಸ್, ಕೌಟುಂಬಿಕ ಸಮಸ್ಯೆಗಳಿಂದ ಮಾನಸಿಕ ಖಿನ್ನತೆಗೊಳಗಾಗಿ ಹಲವರು ಬಲಿಯಾಗುತ್ತಿರುವುದನ್ನು ತಡೆಯಲು ಅಲೆಕ್ಸಾಂಡರ್ ಬ್ಯಾಕ್ ಇನ್ ದಿ ರಿಂಗ್ ಸಂಸ್ಥೆ ಹುಟ್ಟು ಹಾಕಿದ್ದಾರೆ. ಇದೀಗ ಸಂಹಿತಾ ಟ್ರಸ್ಟ್‌ನೊಂದಿಗೆ ಸೇರಿ ನಾರ್ವೆಯಲ್ಲಿ ಖಿನ್ನತೆಯಿಂದ ಮುಕ್ತಿಯಾಗಲು ಶಿಕ್ಷಣ ಪಡೆಯುತ್ತಿರುವವರನ್ನು ಹೆಚ್ಚಿನ ಅಧ್ಯಯನಕ್ಕಾಗಿ ಭಾರತಕ್ಕೆ ಕರೆತಂದು ಇವರಿಗೆ ಜೀವನ ಶಿಕ್ಷಣ ಒದಗಿಸುವ ಕಾರ್ಯವನ್ನು ಜಂಟಿಯಾಗಿ ನಿರ್ವಹಿಸುತ್ತಿವೆ.25 ಜನರಿಗೆ ಶಿಕ್ಷಣ:ಕಳೆದ ಕೆಲವು ದಿನಗಳಿಂದ ಯಲ್ಲಾಪುರದಲ್ಲಿ ನಾರ್ವೆ ದೇಶದ ೨೫ ವ್ಯಕ್ತಿಗಳಿಗೆ ಜೀವನ ಶಿಕ್ಷಣ ನೀಡುವ ಪ್ರಕ್ರಿಯೆಯನ್ನು ಸಂಹಿತಾ ಟ್ರಸ್ಟ್ ಕೈಗೊಂಡಿದೆ. ಬೆಳಿಗಿನಿಂದ ಯೋಗ, ಜಪ, ಗುಂಪು ಚರ್ಚೆ, ಧ್ಯಾನ, ಭಗವದ್ಗೀತೆ, ವೇದಾಂತ, ಮೀಮಾಂಸ, ಫಿಲಾಸಫಿಯ ಕುರಿತು ಉಪನ್ಯಾಸ ಹಾಗೂ ಕರ್ಮಯೋಗದ ಮೂಲಕ ಜೀವನ ಶಿಕ್ಷಣವನ್ನು ನೀಡಲಾಗುತ್ತಿದೆ.ಇಲ್ಲಿನ ಜೀವನ ಶಿಕ್ಷಣದ ಕುರಿತು ಬ್ಯಾಕ್ ಇನ್ ದಿ ರಿಂಗ್ ಸಂಸ್ಥೆಯ ಪ್ರಮುಖರಾದ ಲೀನಾಯಿ ಮಾತನಾಡಿ, ಜೀವನ ಹೋರಾಟದಿಂದ ಹೊರಬರಲು ಯೋಗ ಮಾತ್ರ ಸಾಧನ. ಇದು ಪರಾವಲಂಬಿಯಲ್ಲ. ಯೋಗ ನಮ್ಮೊಳಗಿರುವ ಶಕ್ತಿಯ ಮೂಲಕ ನಮ್ಮಲ್ಲಿ ಬದಲಾವಣೆ ತಂದುಕೊಳ್ಳಲು ನೆರವಾಗುತ್ತದೆ. ಯೋಗಾಸನ ಮಾತ್ರವಾಗಿರದೇ, ಮನಸ್ಸನ್ನು ಹತೋಟಿಗೆ ತರಲು ಉಪಯುಕ್ತ. ಕೌಟುಂಬಿಕ ವ್ಯವಸ್ಥೆಯೂ ಆಗಿರುವ ಯೋಗ ಇಲ್ಲಿನ ಜೀವನ ಶೈಲಿಯೇ ಆಗಿದೆ. ಇದನ್ನು ಅನುಭವಿಸಲು ವಿಶ್ವದ ಬೇರೆಲ್ಲೂ ಸಾಧ್ಯವಿಲ್ಲ. ಇದು ಕಷ್ಟದ ಮಾರ್ಗವಾದರೂ ಕೊನೆಯಲ್ಲಿ ಸನ್ಮಾರ್ಗ ದೊರೆಯುತ್ತದೆ. ಇದನ್ನು ಅನುಭವಿಸಲು ಭಾರತವೇ ಸೂಕ್ತ. ಈ ಕಾರಣದಿಂದಲೇ ಇಲ್ಲಿಗೆ ಬಂದಿದ್ದೇವೆ ಎಂದರು.ಮಾನಸಿಕವಾಗಿ ಸದೃಢರಾಗುವ ಉತ್ತಮ ಪರಿಸರ ಭಾರತದಲ್ಲಿದೆ. ಹಾಗಾಗಿ ಭಾರತ ನಮಗೆ ಇಷ್ಟವಾಗಿದೆ. ಇಲ್ಲಿನ ಕೌಟುಂಬಿಕ ವ್ಯವಸ್ಥೆ ಜಗತ್ತಿನ ಬೇರೆಲ್ಲೂ ಕಾಣಸಿಗದು. ಈ ಸಂಸ್ಕೃತಿಯನ್ನು ನಮ್ಮಲ್ಲೂ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಬ್ಯಾಕ್ ಇನ್ ದಿ ರಿಂಗ್ ಕಚೇರಿ ಸಹಾಯಕಿ ಮೆರಿಥಾ ಹೇಳುತ್ತಾರೆ.

ಅಮೃತಾ ವಿಶ್ವವಿದ್ಯಾಪೀಠಂ ಸಹಕಾರದಿಂದ ಭಾರತೀಯ ಜೀವನ ಪದ್ಧತಿಯನ್ನು ಜಗತ್ತಿಗೆ ಸಾರುವ ಕಾರ್ಯ ಮಾಡುತ್ತಿದ್ದೇವೆ. ಜತೆಗೆ ನಮ್ಮ ಸಂಸ್ಕಾರ, ಮಂತ್ರ, ಯಜ್ಞ, ಯಾಗಾದಿಗಳ ಕುರಿತು ಸಂಶೋಧನೆ ನಡೆಸುವುದು. ವಿದೇಶಗರಲ್ಲಿ ಭಾರತೀಯತೆ ತುಂಬುವ ಕಾರ್ಯ ನಮ್ಮ ಸಂಸ್ಥೆಯ ಮೂಲಕ ಮಾಡುತ್ತಿದ್ದೇವೆ ಎಂದು ಸಂಹಿತಾ ಟ್ರಸ್ಟ್‌ ಸಂಸ್ಥಾಪಕ ಡಾ. ವಿಘ್ನೇಶ್ವರ ಭಟ್ಟ ಹೇಳಿದ್ದಾರೆ.

Share this article