ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಜನ್ಮದಿನ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಗರದಲ್ಲಿ ಆಯೋಜಿಸಲಾಗಿದ್ದ 5 ಕಿ.ಮೀ ರಸ್ತೆ ಓಟ (ಮ್ಯಾರಥಾನ್) ಹಾಗೂ ಹಗ್ಗ-ಜಗ್ಗಾಟ ಸ್ಪರ್ಧಾ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ 5 ಕಿ.ಮೀ ರಸ್ತೆ ಓಟ ಹಾಗೂ ಹಗ್ಗ-ಜಗ್ಗಾಟಕ್ಕೆ ಹಸಿರು ನಿಶಾನೆ ತೋರಿದರು.
ಶಾಸಕರ ಜೊತೆಗೆ ಪಾಲ್ಗೊಂಡಿದ್ದ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಇತರೆ ಗಣ್ಯರು ಆರಂಭದಲ್ಲಿ ವರ್ಮ್ ಅಪ್ (ನೃತ್ಯ-ವ್ಯಾಯಾಮ) ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಸಮಾವೇಶಗೊಂಡಿದ್ದ ಸಾರ್ವಜನಿಕರು, ಮಕ್ಕಳು, ವಿದ್ಯಾರ್ಥಿಗಳು, ಅಧಿಕಾರಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಎಲ್ಲರಲ್ಲೂ ಕ್ರೀಡಾ ದಿನಾಚರಣೆಯ ಉತ್ಸಾಹ, ಹುರುಪು ತುಂಬಿದರು.ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಕ್ರೀಡೆ ಎನ್ನುವುದು ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದ್ದು, ಚಿಕ್ಕ ವಯಸ್ಸಿನಿಂದ ಪ್ರತಿಯೊಬ್ಬರು ಒಂದಲ್ಲಾ ಒಂದು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾ ದಿನಾಚರಣೆ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ಮೇಜರ್ ಧ್ಯಾನ್‌ಚಂದ್ ಜನ್ಮದಿನವನ್ನು ಸ್ಮರಿಸುವ ಸಲುವಾಗಿ ರಾಷ್ಟ್ರದಾದ್ಯಂತ ಕ್ರೀಡಾ ದಿನ ಆಚರಿಸಲಾಗುತ್ತಿದೆ. ಚುನಾಯಿತ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಗರದಲ್ಲಿಯೂ ರಸ್ತೆ ಓಟ, ಹಗ್ಗ-ಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ನಗರದ ಎಲ್ಲಾ ವಯೋಮಾನದವರು ಆರೋಗ್ಯವಂತರಾಗಲು ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಚೆಲುವ ಚಾಮರಾಜನಗರ, ಹಸಿರು ಚಾಮರಾಜನಗರ ಮುಂದಿನ ದಿನಗಳಲ್ಲಿ ಕ್ರೀಡಾ ಚಾಮರಾಜನಗರವಾಗಬೇಕು ಎಂದು ತಿಳಿಸಿದರು.ಚಾಮರಾಜೇಶ್ವರ ದೇವಸ್ಥಾನದಿಂದ ಆರಂಭಗೊಂಡ ರಸ್ತೆ ಓಟವು ಪಚ್ಚಪ್ಪ ವೃತ್ತ, ಬಿ. ರಾಚಯ್ಯ ಜೋಡಿ ರಸ್ತೆ ರಾಮಸಮುದ್ರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿ, ವಾಪಸ್ಸು ತಿರುಗಿ ಜೋಡಿ ರಸ್ತೆ ಮೂಲಕ ಚಾಮರಾಜೇಶ್ವರ ದೇವಸ್ಥಾನದಲ್ಲಿ ಅಂತಿಮವಾಗಿ ಮುಕ್ತಾಯಗೊಂಡಿತು. ಬಳಿಕ ಪುರುಷ ಹಾಗೂ ಮಹಿಳೆಯರಿಗಾಗಿ ಹಗ್ಗ-ಜಗ್ಗಾಟ ಸ್ಪರ್ಧೆ ನಡೆಯಿತು. ಈ ಎರಡು ಸ್ಪರ್ಧೆಗಳು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿತ್ತು. ಕ್ರೀಡಾಪಟುಗಳು, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೈಗಾರಿಕೊದ್ಯಮಿಗಳು, ಸಂಘ-ಸಂಸ್ಥೆಯ ಪದಾಧಿಕಾರಿಗಳು ಸ್ಪರ್ಧೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುವಿಕೆ ಕಂಡುಬಂತು.ರಸ್ತೆ ಓಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಗುಂಡ್ಲುಪೇಟೆಯ ಮಣಿಕಂಠ ಪ್ರಥಮ, ಚಾಮರಾಜನಗರದ ಯೋಗೇಶ್ ದ್ವಿತೀಯ, ಚಂದು ತೃತೀಯ, ನವೀನ್ ಕುಮಾರ್ ನಾಲ್ಕನೇ, ಕೃಷ್ಣಪ್ಪ 5ನೇ ಹಾಗೂ ಬಿ. ಅಭಿಷೇಕ್ 6ನೇ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಕೊಳ್ಳೇಗಾಲ ತಾಲೂಕು ತೆಳ್ಳನೂರಿನ ನದಿಯಾ ಪ್ರಥಮ, ಪ್ರಭಾವತಿ ದ್ವಿತೀಯ, ಕೀರ್ತನಾ ನಾಲ್ಕನೇ, ರಂಜಿತಾ 5ನೇ ಹಾಗೂ ಮೇಘನಾ 6ನೇ ಮತ್ತು ಚಾಮರಾಜನಗರ ರಾಮಸಮುದ್ರದ ಸರಸ್ವತಿ ತೃತೀಯ ಬಹುಮಾನ ಪಡೆದರು.
ಹಗ್ಗ ಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಚಾಮರಾಜನಗರ ಪೊಲೀಸ್ ಇಲಾಖೆಯ ಸುರೇಶ್ ನೇತೃತ್ವದ ತಂಡ ಪ್ರಥಮ ಹಾಗೂ ವಿ.ಎಚ್.ಪಿ ಕಾಲೇಜಿನ ವೇದಾಂತ್ ತಂಡ ದ್ವಿತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ನಗರದ ಜೆ.ಎಸ್.ಎಸ್. ಕಾಲೇಜಿನ ಮೋಹಿತ ನೇತೃತ್ವದ ತಂಡ ಪ್ರಥಮ ಹಾಗೂ ಜಿ.ಟಿ.ಜಿ.ಸಿ ತಂಡದ ದೀಪಿಕಾ ದ್ವಿತೀಯ ಸ್ಥಾನ ಪಡೆದರು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ನಗದು ಬಹುಮಾನ, ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು. ಕಾರ್ಯಕ್ರಮಕ್ಕೂ ಮೊದಲು ಗುಂಡ್ಲುಪೇಟೆಯ ಸದ್ದಾಂ ನೃತ್ಯ ತಂಡದಿಂದ ನಡೆದ ದೇಶ ಭಕ್ತಿಗೀತೆಗಳ ನೃತ್ಯ ಕಾರ್ಯಕ್ರಮ ಮನರಂಜಿಸಿತು. ನಗರಸಭೆ ಸದಸ್ಯರಾದ ಚಿನ್ನಮ್ಮ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಚಿದಂಬರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಸುರೇಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಂಕರ್, ಜಿಲ್ಲಾ ಕ್ರೀಡಾಂಗಣ ಸಮಿತಿ ಸದಸ್ಯರಾದ ಶ್ರೀನಿವಾಸಪ್ರಸಾದ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಋಗ್ವೇದಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.