ಒಳ ಕ್ರೀಡಾಂಗಣ ಉದ್ಘಾಟಿಸಿದ ದೊಡ್ಡನಗೌಡ ಪಾಟೀಲ
ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಯುವ ಜನತೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಗ್ರಾಮದಲ್ಲಿ ಜಂಪರೋಪ್ ಸಂಸ್ಥೆಯ ಒಳ ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿದರು. ಗ್ರಾಮದ ಯುವಕರು ಒಳಾಂಗಣದ ಸದುಪಯೋಗ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ಪಠ್ಯ ಚಟುವಟಿಕೆಗಳಿಗೆ ಹೆಚ್ಚಿನ ಗಮನ ನೀಡುವುದರೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು. ಸುಮಾರು ₹1.55 ಕೋಟಿ ವೆಚ್ಚದಲ್ಲಿ ಲ್ಯಾಂಡ್ ಆರ್ಮಿ ಅವರು ಒಳಾಂಗಣ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಒಳಾಂಗಣ ನಿರ್ಮಾಣಕ್ಕೆ ಶ್ರಮಿಸಿದ ರಾಜ್ಯ ಜಂಪ್ ರೋಪ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಇದೇ ವೇಳೆ ಸುಮಾರು ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಪದವಿ ಪೂರ್ವ ಕಾಲೇಜಿನ ಶಾಲಾ ಕೊಠಡಿಗಳು ಹಾಗೂ ಮೂರನೇ ವಾರ್ಡ್‌ನಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿದ 3ನೇ ಅಂಗನವಾಡಿ ಕೇಂದ್ರವನ್ನು ಶಾಸಕರು ಉದ್ಘಾಟಿಸಿದರು.