ಗಜೇಂದ್ರಗಡ: ವಿದ್ಯಾರ್ಥಿಗಳು ಬದುಕನ್ನು ಕೇವಲ ಓದಿಗೆ ಮಾತ್ರ ಸಿಮೀತವಾಗಿರಿಸಿಕೊಳ್ಳದೆ, ಓದಿನೊಂದಿಗೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಅಂದಾಗ ಮಾನಸಿಕ ಹಾಗೂ ದೈಹಿಕವಾಗಿ ಸಮಾನತೆ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸ್ಥಳೀಯ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರ ಕಾರ್ಯಾಲಯ ಗದಗ ಆಶ್ರಯದಲ್ಲಿ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ಕ್ರೀಡಾಪಟುಗಳು ನಿಸ್ವಾರ್ಥ ಮನೋಭಾವದಿಂದ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕ್ರೀಡಾಭಿಮಾನ ಮೆರೆಯಬೇಕು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದೆ ಬರಲು ಪ್ರಯತ್ನಿಸಬೇಕು ಎಂದ ಅವರು, ರಾಜ್ಯಮಟ್ಟದಲ್ಲಿ ಜಿಲ್ಲೆಯು ಪಿಯು ವಿಭಾಗದ ಫಲಿತಾಂಶ ಕೊನೆಯ ಸ್ಥಾನದಲ್ಲಿರುವುದು ನೋವಿನ ಸಂಗತಿಯಾಗಿದೆ. ಶಿಕ್ಷಣ ವ್ಯವಸ್ಥೆ ಹಾಗೂ ಫಲಿತಾಂಶ ಸುಧಾರಿಸುವ ಅವಶ್ಯಕತೆ ಇದೆ ಎಂದರು.
ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷರು ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಉತ್ತಮ ಶಾರೀರಕ್ಕೆ ಹಾಗೂ ಆರೋಗ್ಯಯುತ ಜೀವನಕ್ಕೆ ಬೌದ್ಧಿಕ ಸಾಮರ್ಥ್ಯದ ಜತೆಗೆ ದೈಹಿಕ ಸಾಮರ್ಥ್ಯ ಅವಶ್ಯಕವಾಗಿದೆ. ದೈಹಿಕ ಚಟುವಟಿಕೆಗಳು ಇಲ್ಲದಿದ್ದರೆ ಜನರು ರೋಗಿಗಳಾಗುತ್ತಾರೆ. ಗಾಡಿ ಚಲಾವಣೆ ಇಲ್ಲದೆ ಒಂದೇ ಕಡೆ ಇದ್ದರೆ ಜಂಗು ಹಿಡಿದು ಹಾಳಾಗುತ್ತದೆ, ಆದರೆ ಗಾಡಿ ಬದಲಾವಣೆ ಮಾಡಬಹುದು ಆದರೆ ಬಾಡಿಗೆ ದೈಹಿಕ ಚಟುವಟಿಕೆಯಿಲ್ಲದೆ ನಿಂತರೆ ರೋಗ ಎಂಬ ಜಂಗು ಹಿಡಿದಾಗ ಬದಲಾವಣೆ ಮಾಡಲು ಬರುವುದಿಲ್ಲ. ಅದಕ್ಕಾಗಿ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದರು.ಗದಗ ಜಿಲ್ಲಾ ಉಪನಿರ್ದೇಶಕ ಜಿ.ಎನ್. ಕುರ್ತಕೋಟಿ ಮಾತನಾಡಿ, ನಮ್ಮ ಗದಗ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಈಗಾಗಲೇ ಅನೇಕ ರೂಪರೇಷ ಅಳವಡಿಸಿ ಪಾಲನೆ ಮಾಡಲಾಗುತ್ತಿದೆ. ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಲು ಸಾಂಘಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಪಾಟೀಲ ಕ್ರೀಡಾಜ್ಯೋತಿ ಸ್ವೀಕಾರ ಮಾಡಿದರೆ. ಡಿಡಿಪಿಯು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ನಂತರ ಧ್ವಜಾ ಗೌರವ ಸಲ್ಲಿಸಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಪಿಯು ಕಾಲೇಜ್ ಆಡಳಿತ ಮಂಡಳಿ ಚೇರಮನ್ ವಿ.ವಿ. ವಸ್ತ್ರದ, ಬಿ.ಎಸ್. ಗೌಡರ, ಸಿದ್ದಣ್ಣ ಬಂಡಿ, ವೀರಣ್ಣ ಶೆಟ್ಟರ, ಹುಲಿಗವ್ವ ಸಣ್ಣಕ್ಕಿ, ಶಶಿಧರ ಹೂಗಾರ, ಪಿಎಸ್‌ಐ ಸೋಮನಗೌಡ ಗೌಡ್ರ, ಪ್ರಾಚಾರ್ಯ ವಸಂತರಾವ ಗಾರಗಿ, ವೈ.ಸಿ. ಪಾಟೀಲ, ಎ.ಪಿ. ಗಾಣಗೇರ, ಬಿ.ಎಸ್. ಹಿರೇಮಠ, ಆರ್.ಎಸ್. ಮರಾಠಿ ಸೇರಿ ಇತರರು ಇದ್ದರು.