ಕನ್ನಡಪ್ರಭ ವಾರ್ತೆ ತಿಪಟೂರು
ಮನುಷ್ಯನ ಉತ್ತಮ ಆರೋಗ್ಯ ಸುಧಾರಣೆಗೆ ಕ್ರೀಡೆ ಸಹಕಾರಿಯಾಗಿದ್ದು, ಇದಕ್ಕೆ ಉತ್ತೇಜನ, ಪ್ರೋತ್ಸಾಹ ನೀಡುವ ಸಲುವಾಗಿ ಕ್ರೀಡಾ ಇಲಾಖೆಯಿಂದ ಬಹಳಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರದ ಕಲ್ಪತರು ಕ್ರೀಡಾಂಗಣದಲ್ಲಿ ತಿಪಟೂರು ಉಪವಿಭಾಗ ವ್ಯಾಪ್ತಿಯ ತಾಲೂಕು ಆಡಳಿತ, ತಿಪಟೂರು, ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿ ಕಂದಾಯ ಇಲಾಖಾ ನೌಕರರ ಸಂಘಗಳ ತಾಲೂಕು ಘಟಕಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಕಂದಾಯ ಇಲಾಖಾ ನೌಕರರ ಕ್ರೀಡಾಕೂಟ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಪಟುಗಳು ಸೋಲು-ಗೆಲುವಿನ ಬಗ್ಗೆ ಚಿಂತನೆ ಮಾಡುವುದಕ್ಕಿಂತಲೂ ಕ್ರೀಡೆಯಲ್ಲಿ ಭಾಗವಹಿಸುವಿಕೆ ಅತ್ಯಂತ ಪ್ರಮುಖವಾಗಿರುತ್ತದೆ. ಮಾನಸಿಕ ಆರೋಗ್ಯದ ಜೊತೆ ದೈಹಿಕ ಸದೃಢತೆ ಬಹಳ ಮುಖ್ಯವಾಗಿದೆ. ಕ್ರೀಡಾ ಚಟುವಟಿಕೆ ಮತ್ತು ಕ್ರೀಡಾ ಮನೋಭಾವನೆ ದೈಹಿಕ ಸದೃಢತೆಗೆ ದಾರಿಯಾಗಿದೆ. ಸೋಲು ಗೆಲುವಿನ ಮೆಟ್ಟಿಲಾಗಿದ್ದು, ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.ಉಪವಿಭಾಗಾಧಿಕಾರಿ ಸಪ್ತಶ್ರೀ ಮಾತನಾಡಿ, ಕೆಲಸದ ಒತ್ತಡಗಳ ನಡುವೆ ಕ್ರೀಡಾಕೂಟ ಹೆಚ್ಚಿನ ಮನಃಶಾಂತಿ ನೀಡುವುದರಿಂದ ಅಧಿಕಾರಿಗಳು ಹೆಚ್ಚು ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದುರು.
ತಹಸೀಲ್ದಾರ್ ಪವನ್‌ಕುಮಾರ್ ಮಾತನಾಡಿ, ಒತ್ತಡದ ನಡುವೆ ಕೆಲಸ ಮಾಡುತ್ತಿರುವ ಇಲಾಖಾ ನೌಕರರಿಗೆ ಇಂತಹ ಕ್ರೀಡಾಕೂಟದ ಅವಶ್ಯಕತೆ ಇದೆ. ಕ್ರೀಡೆ ನಮ್ಮನ್ನು ದೈಹಿಕವಾಗಿ ಕ್ರಿಯಾಶೀಲರನ್ನಾಗಿಸುತ್ತದೆ. ದೇಹ ಚಟುವಟಿಕೆಯಿಂದ ಕೂಡಿದ್ದರೆ ಮನಸ್ಸು ಕೂಡ ಆರೋಗ್ಯಕರವಾಗಿರುತ್ತದೆ. ಋಣಾತ್ಮಕ ಚಿಂತನೆಗಳಿಗೆ ಆಸ್ಪದ ನೀಡದೆ ಯಾವಾಗಲೂ ನಾವು ಧನಾತ್ಮಕವಾಗಿರುವಂತೆ ಪ್ರೆರೇಪಿಸುತ್ತದೆ. ಆದ್ದರಿಂದ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದು ಹೇಳಿದರು.ಕ್ರೀಡಾಕೂಟದಲ್ಲಿ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಕೀರ್ತಿ, ತುರುವೇಕೆರೆ ಗ್ರೇಡ್-2 ತಹಸೀಲ್ದಾರ್ ಸುಮತಿ, ಶಿರಸ್ತೇದಾರ್ ರವಿಕುಮಾರ್, ತಿಪಟೂರು ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್ ಸೇರಿದಂತೆ ತಿಪಟೂರು, ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿ ಕಂದಾಯ ಇಲಾಖಾ ನೌಕರರು ಭಾಗವಹಿಸಿದ್ದರು.
ಅಥ್ಲೆಟಿಕ್ಸ್, ಮ್ಯೂಸಿಕಲ್ ಚೇರ್, ಲೆಮೆನ್ ಮತ್ತು ಸ್ಪೂನ್, ಇನ್ ಅಂಡ್ ಔಟ್, ಶಾಟ್‌ಪುಟ್, ವಾಲಿಬಾಲ್, ಥ್ರೋಬಾಲ್, ಕ್ರಿಕೆಟ್ ಮತ್ತಿತರ ಕ್ರೀಡೆಗಳನ್ನು ಕ್ರೀಡಾಕೂಟದಲ್ಲಿ ಆಯೋಜಿಸಲಾಗಿತ್ತು.