ಶ್ರೀಸೋಮನಹಳ್ಳಿ ಅಮ್ಮನವರ ಜಾತ್ರಾ ಮಹೋತ್ಸವ ಸಂಪನ್ನ..!

KannadaprabhaNewsNetwork | Published : Mar 4, 2024 1:21 AM

ಸಾರಾಂಶ

ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ 9 ದಿನಗಳಿಂದ ಅಂಕುರಾರ್ಪಣೆ, ಪಂಚಾಮೃತಾಭಿಷೇಕ, ದನಗಳ ಜಾತ್ರೆ, ಬಿಸಿಲು ಕೊಂಡೋತ್ಸವ, 101 ಮಡೆ ಆರತಿ ಸೇವೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಭಾನುವಾರ ಮಧ್ಯಾಹ್ನ 1.30ಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರೀ ಅಮ್ಮನವರ ಬ್ರಹ್ಮರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಸೋಮನಹಳ್ಳಿ ಅಮ್ಮನವರ ಕ್ಷೇತ್ರದಲ್ಲಿ ಭಾನುವಾರ ಮಧ್ಯಾಹ್ನ ವಿಜೃಂಭಣೆಯ ಬ್ರಹ್ಮರಥೋತ್ಸವದ ಮೂಲಕ ಕಳೆದ 10 ದಿನಗಳ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ 9 ದಿನಗಳಿಂದ ಅಂಕುರಾರ್ಪಣೆ, ಪಂಚಾಮೃತಾಭಿಷೇಕ, ದನಗಳ ಜಾತ್ರೆ, ಬಿಸಿಲು ಕೊಂಡೋತ್ಸವ, 101 ಮಡೆ ಆರತಿ ಸೇವೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಭಾನುವಾರ ಮಧ್ಯಾಹ್ನ 1.30ಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಸಂತೋಷ್, ನಾಡ ಕಚೇರಿಯ ಉಪ ತಹಸೀಲ್ದಾರ್ ರವಿಶಂಕರ್ ಮತ್ತು ರಾಜಸ್ವ ನಿರೀಕ್ಷಕ ಮಧುಸೂಧನ್ ಪೂಜೆ ಸಲ್ಲಿಸುವ ಮೂಲಕ ಶ್ರೀ ಅಮ್ಮನವರ ಬ್ರಹ್ಮರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ನಂತರ ನೆರೆದಿದ್ದ ಸಹಸ್ರಾರು ಭಕ್ತರು ರಥವನ್ನು ಎಳೆದು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿಸಿದರು.

ದೇವಿಯ ಮೂಲ ಸ್ಥಾನ ಚಿಣ್ಯ ಸೇರಿದಂತೆ, ಹೊಣಕೆರೆ, ವಡ್ಡರಹಳ್ಳಿ, ಗುಡ್ಡೇನಹಳ್ಳಿ, ಸೋಮನಹಳ್ಳಿ, ಅಲ್ಪಹಳ್ಳಿ, ಜೋಡಿಹೊಸೂರು, ಗಂಗನಹಳ್ಳಿ, ಕನಗೋನಹಳ್ಳಿ, ಕುಪ್ಪಹಳ್ಳಿ, ಕೆಮ್ಮನಹಳ್ಳಿ ಸೇರಿದಂತೆ ಜಿಲ್ಲೆ ಮತ್ತು ನಾಡಿನ ವಿವಿದೆಡೆಗಳಿಂದ ಆಗಮಿಸಿದ್ದ ಸಹ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಿ ಹಣ್ಣು ಜವನ ಎಸೆದು ತಮ್ಮ ಭಕ್ತಿ ಭಾವ ಸಮರ್ಪಿಸಿದರು.

ತುರುವೇಕರೆಯ ಗೀತಾ ಮತ್ತು ರಾಜಣ್ಣ ದಂಪತಿ ಬ್ರಹ್ಮರಥೋತ್ಸವಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಿದ್ದರು. ಜಾತ್ರಾ ಮಹೋತ್ಸವಕ್ಕೆ ಪೋಷಕರು ಕರೆತಂದಿದ್ದ 5 ವರ್ಷದೊಳಗಿನ ನೂರಾರು ಮಕ್ಕಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಪಲ್ಸ್ ಪೊಲೀಯೋ ಲಸಿಕೆ ಹಾಕಿದರು.

ಸನ್ನಿಧಿಯ ಶ್ರೀ ಕೋಟೆಮಾರಮ್ಮದೇವಿ ಮತ್ತು ಶ್ರೀ ಆಂಜನೇಯಸ್ವಾಮಿ, ಶ್ರೀ ದೊಡ್ಡಮ್ಮ ಹಾಗೂ ಶ್ರೀ ಚಿಕ್ಕಮ್ಮದೇವಿ ದೇವಾಲಯಗಳಲ್ಲಿಯೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ರಥೋತ್ಸವದ ಬಳಿಕ ವಡ್ಡರಹಳ್ಳಿ ಗ್ರಾಮಸ್ಥರಿಂದ ವಸಂತೋತ್ಸವ ನಡೆಯಿತು.

ಅವಭೃತಾಮೃತ ಮತ್ತು ಅಶ್ವಾರೋಹಣ ಸೇವೆ ನಂತರ ದೇವಿಯನ್ನು ಕಟ್ಟೆಮನೆ ಚಿಣ್ಯದ ಮೂಲಸ್ಥಾನಕ್ಕೆ ಕರೆದೊಯ್ಯಲಾಯಿತು. ಆ ಮೂಲಕ ಕಳೆದ ಹತ್ತು ದಿನಗಳಿಂದ ನಡೆದ ಜಾತ್ರಾಮಹೋತ್ಸವಕ್ಕೆ ತೆರೆಬಿದ್ದಿತು.

ಬ್ರಹ್ಮರಥೋತ್ಸವದ ಪ್ರಯುಕ್ತ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದ ಹಿನ್ನಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರವಿಕುಮಾರ್ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಅನ್ನಪೂರ್ಣ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

Share this article