ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಶ್ರೀರಾಂಪುರ ಸಮೀಪದ ಸೂಜಿಕಲ್ಲು ಅಮಾನಿಕೆರೆ ತೋಪಿನಲ್ಲಿ ನೆಲೆಗೊಂಡಿರುವ ಇತಿಹಾಸ ಪ್ರಸಿದ್ಧ ಶ್ರೀ ದೇವಿಕೆರೆ ಬೀರಲಿಂಗೇಶ್ವರ ಸ್ವಾಮಿಯ ಮಹಾ ಬ್ರಹ್ಮರಥೋತ್ಸವ ಮಾ.20 ರಂದು ನಡೆಯಲಿದೆ.ಜಾತ್ರಾ ಮಹೋತ್ಸವದ ಅಂಗವಾಗಿ ಮಾ.15ರ ಬೆಳಿಗ್ಗೆ ಅರಿಶಿನ ಕುಟ್ಟಿಸುದು, ಲಗ್ನ ಕಟ್ಟಿಸುವುದು, ಧ್ವಜಾರೋಹಣ, ಮಧ್ಯಾಹ್ನ ಶ್ರೀರಾಂಪುರ ಸಿಂಹಾಸನದ ಶ್ರೀ ಗುರುರೇವಣ ಸಿದ್ದೇಶ್ವರಸ್ವಾಮಿ, ದೇವಿಕೆರೆ ಬೀರಲಿಂಗೇಶ್ವರಸ್ವಾಮಿ, ಸೇರಿದಂತೆ ವಿವಿಧ ದೇವರುಗಳ ಆಗಮನ ಹಾಗೂ ಕೂಡು ಭೇಟಿ, ನಂತರ ಗುರುಕಾಣಿಕೆ, ಮೀಸಲು ಸ್ವೀಕರಿಸಿ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.
ಮಾ.16ಕ್ಕೆ ಗಣಪತಿಪೂಜೆ, ಗಂಗಾಪೂಜೆ, ಗಜವಾಹನೋತ್ಸವ. ಮಾ.17 ಕ್ಕೆ ಬಲಿಪ್ರಧಾನ, ಅಶ್ವಾರೋಹಣ, ಗರುಡೋತ್ಸವ. ಮಾ.18ರಂದು ಹಾಲುಪಲ್ಲಕ್ಕಿ ಉತ್ಸವ, ಪುಷ್ಪ ಮಂಟಪೋತ್ಸವ. ಮಾ.19ಕ್ಕೆ ಮಧ್ಯಾಹ್ನ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕೆಲ್ಲೋಡು ಕನಕ ಗುರುಪೀಠ ಶಾಖಾ ಮಠದ ಈಶ್ವರನಾಂದಪುರಿ ಸ್ವಾಮೀಜಿ, ತಿಂತಣಿ ಶಾಖಾಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಕೆ.ಆರ್.ನಗರ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸುವರು. ಶಾಸಕರಾದ ಬಿ.ಜಿ.ಗೋವಿಂದಪ್ಪ, ಶ್ರೀನಿವಾಸ್, ಆನಂದ್, ಸುರೇಶ್ ಬಾಬು ನೇತೃತ್ವ ವಹಿಸುವರು. ರಾತ್ರಿ ಗಜೇಂದ್ರಮೋಕ್ಷ, ಲಕ್ಷ್ಮೀ ಕಲ್ಯಾಣೋತ್ಸವ ನಡೆಯಲಿದೆ.ಮಾ. 20ಕ್ಕೆ ಬ್ರಹ್ಮರಥೋತ್ಸವ ನೆರವೇರಲಿದೆ. ಮಾ.21 ರಂದು ಬೆಳಿಗ್ಗೆ ದುಳೋತ್ಸವ, ರಾತ್ರಿ ಉಯ್ಯಾಲೋತ್ಸವ, ಶಯನೋತ್ಸವ, ಮಾ.22ಕ್ಕೆ, ಅವಭೃತಸ್ನಾನ ಪೂರ್ವಕ, ವೃಷಭಾರೋಹಣೋತ್ಸವ, ಬಾಗಿಲು ಸೇವೆ, ಯಾಗಪೂರ್ತಿ ಮಹಾಭಿಷೇಕ ನಡೆಯಲಿದೆ.
ಇನ್ನು, ಸಾಮಾನ್ಯವಾಗಿ ಬೀರಲಿಂಗೇಶ್ವರಸ್ವಾಮಿಗೆ ಲಕ್ಷ್ಮಿ ಕಲ್ಯಾಣೋತ್ಸವ ನಡೆಯುವುದಿಲ್ಲ. ಇಲ್ಲಿ ನೆಲೆಗೊಂಡಿರುವ ಬೀರಲಿಂಗೇಶ್ವರಸ್ವಾಮಿಗೆ ಲಕ್ಷ್ಮಿಕಲ್ಯಾಣೋತ್ಸವ ನಡೆಯುವುದು ಇಲ್ಲಿನ ವಿಶೇಷ.ಮಾ.23ಕ್ಕೆ ದೇವರುಗಳಿಗೆ ಮಡ್ಲಕ್ಕಿ ಸೇವೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದೊಂದಿಗೆ ಸ್ವಸ್ಥಾನಕ್ಕೆ ಬೀಳ್ಕೊಡುವುದು. ಸಂಜೆ ಶ್ರೀರಾಂಪುರ ಗ್ರಾಮದಲ್ಲಿ ದೇವಿಕೆರೆ ಬೀರಲಿಂಗೇಶ್ವರಸ್ವಾಮಿಯ ರಾಜಬೀದಿ ಉತ್ಸವ ನೆಡೆಯಲಿದೆ. ಪ್ರತಿನಿತ್ಯ ಹೋಮ ಹಾಗೂ ರಾತ್ರಿ ಸಿನಿಮಾ ಹಾಗೂ ಕಿರುತೆರೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನದ ಆಡಳಿತ ಸಮಿತಿ ತಿಳಿಸಿದೆ.
2009ರಲ್ಲಿ ಬ್ರಹ್ಮರಥೋತ್ಸವ ಬಳಿಕ 2019 ರಲ್ಲಿ ಹಲ್ಲುಮರಿ ಜಾತ್ರೆ ನಡೆದ 5 ವರ್ಷಗಳ ನಂತರ ರಥೋತ್ಸವ ನಡೆಯುತ್ತಿದ್ದು, ಈ ದೇವರಿಗೆ ರಾಜ್ಯಾದ್ಯಂತ ಸುಮಾರು 3500 ಕ್ಕೂ ಹೆಚ್ಚು ಒಕ್ಕಲುಗಳ ಕುಟುಂಬಗಳು ಇದ್ದು, 9 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ವಿಶಾಲವಾದ ಮೈದಾನದಲ್ಲಿ ಒಕ್ಕಲುಗಳು ಸುಮಾರು 300ಕ್ಕೂ ಹೆಚ್ಚು ತಾತ್ಕಾಲಿಕ ಶೆಡ್‌ಗಳನ್ನು ಹಾಕಿಕೊಂಡು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆ ಮುಗಿಯುವವರೆಗೆ ಕೆರೆ ದಂಡೆಯಲ್ಲಿ ಟೆಂಟ್‌ಗಳ ಗ್ರಾಮವೇ ಸೃಷ್ಟಿಯಾಗಿರುತ್ತದೆ.