ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ- ಸಿದ್ಧತೆ ಜೋರು

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ರಥೋತ್ಸವ ದಿನವೇ ಸುಮಾರು 6-8 ಲಕ್ಷ ಭಕ್ತರು ಆಗಮಿಸುತ್ತಾರೆ. ರಥೋತ್ಸವದ ದಿನ ಸುಮಾರು 1.5-2.5 ಲಕ್ಷ ಭಕ್ತರು ಕೇವಲ 24 ಗಂಟೆಯಲ್ಲಿ ಪ್ರವಾಸ ಸ್ವೀಕಾರ ಮಾಡುತ್ತಾರೆ. ಹೀಗಾಗಿ, ಇವರೆಲ್ಲರಿಗೂ ಯಾವುದೇ ಸಮಸ್ಯೆಯಾಗದಂತೆ ಅಚ್ಚುಕಟ್ಟಾಗಿ ಮಾಡಲು ಶತಾಯ ಪ್ರಯತ್ನ ಮಾಡಲಾಗುತ್ತದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ನಾಡಿನ ಸುಪ್ರಸಿದ್ಧ ಜಾತ್ರಾ ಮಹೋತ್ಸವಗಳಲ್ಲೊಂದಾದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಇನ್ನೇನು ಕೇವಲ 25 ದಿನಗಳು ಬಾಕಿ ಉಳಿದಿದೆ. ಈಗಾಗಲೇ ತಯಾರಿ ಭರದಿಂದ ನಡೆದಿದೆ. ಮಠದ ಆವರಣದಲ್ಲಿ ಜಾತ್ರೆಗಾಗಿ ಸಿದ್ಧತೆ ಭರ್ಜರಿಯಾಗಿಯೇ ನಡೆದಿದೆ.

ಜಾತ್ರೆಯುದ್ದಕ್ಕೂ 20 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ನಿತ್ಯವೂ ಆಗಮಿಸುವ ಲಕ್ಷೋಪಲಕ್ಷ ಭಕ್ತರಿಗೂ ಮಹಾಪ್ರಸಾದ ವಿತರಣೆ ಮಾಡಲಾಗುತ್ತದೆ.

ಹೀಗಾಗಿ, ಈ ವರ್ಷ ಮಹಾದಾಸೋಹ ಭವನ ನಿರ್ಮಾಣಕ್ಕೆ 2 ತಿಂಗಳು ಮೊದಲೇ ತಯಾರಿ ನಡೆದಿದ್ದು, ಈಗಾಗಲೇ ಒಂದು ಹಂತಕ್ಕೆ ತಲುಪಿದೆ. ಅಡುಗೆ ತಯಾರು ಮಾಡುವುದರಿಂದ ಹಿಡಿದು ಪ್ರಸಾದ ವಿತರಣೆಯೂ ಅಚ್ಚುಕಟ್ಟಾಗಿ ಆಗಬೇಕು ಎನ್ನುವ ಕಾರಣಕ್ಕಾಗಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗುತ್ತದೆ.

ರಥೋತ್ಸವ ದಿನವೇ ಸುಮಾರು 6-8 ಲಕ್ಷ ಭಕ್ತರು ಆಗಮಿಸುತ್ತಾರೆ. ರಥೋತ್ಸವದ ದಿನ ಸುಮಾರು 1.5-2.5 ಲಕ್ಷ ಭಕ್ತರು ಕೇವಲ 24 ಗಂಟೆಯಲ್ಲಿ ಪ್ರವಾಸ ಸ್ವೀಕಾರ ಮಾಡುತ್ತಾರೆ. ಹೀಗಾಗಿ, ಇವರೆಲ್ಲರಿಗೂ ಯಾವುದೇ ಸಮಸ್ಯೆಯಾಗದಂತೆ ಅಚ್ಚುಕಟ್ಟಾಗಿ ಮಾಡಲು ಶತಾಯ ಪ್ರಯತ್ನ ಮಾಡಲಾಗುತ್ತದೆ.

ಕಳೆದ ವರ್ಷದ ದೋಷಗಳನ್ನು ಪಟ್ಟಿ ಮಾಡಿಕೊಂಡು, ಅವುಗಳನ್ನು ತಿದ್ದಿಕೊಂಡು ಈ ವರ್ಷದ ಮಹಾದಾಸೋಹ ವ್ಯವಸ್ಥೆ ಮಾಡಲಾಗುತ್ತದೆ.

ಮಹಾದಾಸೋಹ ಭವನ ನಿರ್ಮಾಣ ಮತ್ತು ಉಗ್ರಾಣ ಕೋಣೆಯ ನಿರ್ಮಾಣದ ಎಲ್ಲ ಉಸ್ತುವಾರಿಯನ್ನು ಗವಿಸಿದ್ದೇಶ್ವರ ಶ್ರೀಗಳೇ ನೋಡಿಕೊಳ್ಳುತ್ತಾರೆ. ಕಳೆದ ವರ್ಷ ಭಕ್ತರು ನೀಡಿರುವ ಸಲಹೆ-ಸೂಚನೆಗಳು ಮತ್ತು ಸಮಸ್ಯೆಗಳನ್ನು ಖುದ್ದು ಶ್ರೀಗಳೇ ಪರಾಮರ್ಶೆ ಮಾಡಿ, ಈ ವರ್ಷ ನಿರ್ಮಾಣ ಹಂತದಲ್ಲಿ ಅವುಗಳನ್ನು ಸರಿಪಡಿಸುತ್ತಾರೆ.

ಕಳೆದೊಂದು ತಿಂಗಳಿಂದ ಶ್ರೀಗಳ ಸೂಚನೆಯ ಮೇರೆಗೆ ಈ ಬಾರಿ ನಾನಾ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ. ಬಂದಿರುವ ಭಕ್ತರಲ್ಲಿ ವೃದ್ಧರು, ವಿಕಲಚೇತನರು ಸೇರಿದಂತೆ ಯಾರೊಬ್ಬರಿಗೂ ಸಮಸ್ಯೆಯಾಗದಂತೆ ದಾಸೋಹ ಭವನಕ್ಕೆ ತೆರಳುವ ವ್ಯವಸ್ಥೆ ಮಾಡಲಾಗುತ್ತದೆ.

ಮಹಾದಾಸೋಹ ಸಿದ್ಧತೆಯ ನಿಮಿತ್ತ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್ ಗಾರ್ಡನ್‌ನಲ್ಲಿನ (ಮಲಿಯಮ್ಮ ದೇವಸ್ಥಾನ ಪಕ್ಕ) ಸುಮಾರು ಆರು ಎಕರೆಯಷ್ಟು ವಿಶಾಲವಾದ ಆವರಣದಲ್ಲಿ ಮಹಾದಾಸೋಹ ಮಂಟಪದ ಸಿದ್ಧತೆ ಭರದಿಂದ ಸಾಗಿದೆ. ಪರಿಸರಸ್ನೇಹಿ ಭವ್ಯವಾದ ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ, ಮುಂತಾದವುಗಳು ಪ್ರತಿವರ್ಷದಂತೆ ಈ ವರ್ಷವೂ ಸಿದ್ಧಗೊಳ್ಳುತ್ತಿವೆ. ಭಕ್ತರಿಗೆ ಪ್ರಸಾದ ಸೇವನೆಗೆ ತೊಂದರೆಯಾಗದಂತೆ ಸಾಲಾಗಿ ಬರಲು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಈ ವರ್ಷ ಪ್ರತಿ ವರ್ಷಕ್ಕಿಂತಲೂ ಹೆಚ್ಚು ಜನಸಾಗರ ಹರಿದುಬರುವ ನಿರೀಕ್ಷೆ ಇದೆ. ಹೀಗಾಗಿ, ಮಹಾದಾಸೋಹ ಭವನದಲ್ಲಿ ಪ್ರಸಾದ ವಿತರಣೆ ಕೌಂಟರ್ ಹಾಗೂ ಜಾಗವನ್ನು ಸ್ವಲ್ಪಮಟ್ಟಿಗೆ ವಿಸ್ತರಣೆ ಮಾಡುತ್ತಾರೆ. ಕಳೆದ ಬಾರಿ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲವೊಂದು ಮಾರ್ಪಾಡುಗಳನ್ನು ಮಾಡಲು ತಯಾರಿ ಮಾಡುತ್ತಿದ್ದಾರೆ.

ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ವದಲ್ಲಿ ಇಡೀ ಪ್ರಸಾದ ವ್ಯವಸ್ಥೆ ನಡೆಯುವುದೇ ಭಕ್ತರು ಭಕ್ತರಿಗಾಗಿ ಎನ್ನುವ ತತ್ವದ ಆಧಾರದಲ್ಲಿ. ಹೀಗಾಗಿ, ಭಕ್ತರು ದಾಸೋಹಕ್ಕೆ ಅಪಾರ ಪ್ರಮಾಣದ ದವಸ, ಧಾನ್ಯ ಅಷ್ಟೇ ಅಲ್ಲ, ತಿನಿಸುಗಳನ್ನು ತಯಾರಿಕೊಂಡು ಬಂದು ಕೊಡುತ್ತಾರೆ. ಹೀಗಾಗಿ, ಇವುಗಳನ್ನು ಸಂಗ್ರಹ ಮಾಡುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ.

ಲಕ್ಷ ಲಕ್ಷ ರೊಟ್ಟಿಗಳ ಸಂಗ್ರಹದಿಂದ ಹಿಡಿದು ನೂರಾರು ಕ್ವಿಂಟಲ್‌ ಬರುವ ಸಿಹಿತಿನಿಸುಗಳನ್ನು ಸಂಗ್ರಹಿಸುವುದಕ್ಕೂ ಪ್ರತ್ಯೇಕ ವ್ಯವಸ್ಥೆ ಇರುತ್ತದೆ.

ದಾಸೋಹದಲ್ಲಿ ಅನ್ನ ಪ್ರಸಾದ ಮಾತ್ರ ಇರುವುದಿಲ್ಲ, ರೊಟ್ಟಿ ಪಲ್ಯಗಳಿಂದ ಹಿಡಿದು ವಿವಿಧ ಬಗೆಯ ಖಾದ್ಯಗಳನ್ನು ನೀಡುತ್ತಾರೆ, ಮೈಸೂರು ಪಾಕ್, ಸೋನ್ ಪಾಪ್ಡಿ, ಮನೆಯಲ್ಲಿ ಮಾಡುವ ಕರ್ಜಿಕಾಯಿ, ರವೆ ಉಂಡಿ, ಮಾದಲಿ, ಉದುರ ಸಜ್ಜಕ, ಮಿರ್ಚಿ ಸೇರಿದಂತೆ ಭಕ್ತರು ಮಾಡಿಕೊಂಡು ಬರುವುದೆಲ್ಲವನ್ನು ಮಹಾದಾಸೋಹದಲ್ಲಿ ವಿತರಣೆ ಮಾಡುವ ಸಂಪ್ರದಾಯ ಇರುವುದರಿಂದ ನಿತ್ಯವೂ ನಾನಾ ಬಗೆ ಸಿಹಿತಿನಿಸುಗಳನ್ನು ಭಕ್ತರು ತಂದುಕೊಡುತ್ತಾರೆ. ಅವುಗಳೆಲ್ಲವನ್ನು ಮಹಾದಾಸೋಹದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.

Share this article