ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಹಾರೋಹಳ್ಳಿಯಲ್ಲಿ ಕಡೆ ಶ್ರಾವಣ ಶನಿವಾರದ ಪ್ರಯುಕ್ತ ಶ್ರೀಲಕ್ಷ್ಮಿ ನಾರಾಯಣಸ್ವಾಮಿ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.ಗ್ರಾಮದ ದೇವಸ್ಥಾನವನ್ನು ವಿದ್ಯುತ್ ದೀಪಗಳು ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶನಿವಾರ ಬೆಳಗ್ಗೆ 7ರ ಸುಮಾರಿಗೆ ವಿಶ್ವೇಶ್ವರಯ್ಯ ನಾಲೆಯಿಂದ ಕಳಸದ ಮೂಲಕ ದೇವರನ್ನು ತಂದು ದೇವರಿಗೆ ಅಲಂಕಾರ ಮಾಡಿ ಅಭಿಷೇಕ, ಪಂಚಾಮೃತ ಸೇವೆ ಮಾಡಲಾಯಿತು.
ನಂತರ ಬೆಳಗ್ಗೆಯಿಂದಲೇ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ದೇವರಿಗೆ ಭಕ್ತರು ಪೂಜೆ ಪುನಸ್ಕಾರ ಸಲ್ಲಿಸಿದರು. ದೇವಸ್ಥಾನದ ಆವರಣದಲ್ಲಿ ಅಂಗಡಿ ಮುಂಗಟ್ಟುಗಳು ಸೇರಿದ್ದವು. ಮಧ್ಯಾಹ್ನ ಸುಮಾರು 2ಗಂಟೆ ವೇಳೆಗೆ ಶ್ರೀಲಕ್ಷ್ಮೀನಾರಾಯಣಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಹೆಣ್ಣು ಮಕ್ಕಳು ಹಣ್ಣುಕಾಯಿ ಆರತಿ ಮಾಡಿ ಪೂಜೆ ಸಲ್ಲಿಸಿದರೆ ಗಂಡುಮಕ್ಕಳು ಸಿಳ್ಳೆ ಕೇಕೆಗಳನ್ನು ಹಾಕುತ್ತಾ ದೇವಾಲಯದ ಆವರಣಕ್ಕೆ ಉತ್ಸವ ಮೂರ್ತಿಯನ್ನು ಕರೆತಂದರು. ನಂತರ ದೇವಾಲಯದ ಸುತ್ತ ಪ್ರದಕ್ಷಿಣೆ ನಡೆಸಲಾಯಿತು.ಈ ವೇಳೆ ಬಾಣ ಬಿರುಸು ಹಾಗೂ ಪಟಾಕಿಗಳ ಸುರಿಮಳೆಗೈಯ್ಯಲಾಯಿತು. ಜಾತ್ರೆಗೆ ಸೇರಿದ್ದ ಅಪಾರ ಜನಸ್ತೋಮವು ದೇವರಿಗೆ ಪೂಜೆ ಪುನಸ್ಕಾರ ಸಲ್ಲಿಸಿದರು. ಮಕ್ಕಳಿಲ್ಲದ ಗೃಹಿಣಿಯರು ಮಡಿಲು ಒಡ್ಡಿ ಮುತ್ತೈದೆಯರಿಂದ ಪ್ರಸಾದ ಸ್ವೀಕರಿಸುವ ಮೂಲಕ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಗೆ ಸಾಕ್ಷಿಕರಿಸಿದರು. ಕೆಲವು ಮಹಿಳೆಯರು ಬಾಯಿಬೀಗ ಹಾಕಿಸಿಕೊಳ್ಳುವ ಮೂಲಕ ತಮ್ಮ ಅರಕೆಗಳನ್ನು ತೀರಿಸಿದರು.
15 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆ:ಜಾತ್ರೆಯಲ್ಲಿ ಭಾಗವಹಿಸಿದ್ದ 15 ಸಾವಿರಕ್ಕೂ ಭಕ್ತಾದಿಗಳು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಹರಕೆ ಹೊತ್ತ ಮಹಿಳೆಯರು ಹಾಗೂ ಯುವತಿಯರು ಬಾಯಿಬೀಗ ಹಾಕಿ ಹರಕೆ ತೀರಿಸಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ಸೇರಿದಂತೆ ಹಲವು ಗಣ್ಯರು ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಕಡೆ ಶ್ರಾವಣ ಶನಿವಾರ ಪ್ರಯುಕ್ತ ವಿಶೇಷ ಪೂಜೆ ಪುನಸ್ಕಾರ ಮತ್ತು ಜಾತ್ರಾಮಹೋತ್ಸವವು ಸಡಗರ, ಸಂಭ್ರಮದಿಂದ ಜರುಗಿದವು.