ವೀರೇಶ ಹಿರೇಮಠ ಮಾಡುತ್ತಿರುವುದು ಪುಣ್ಯದ ಕೆಲಸ

KannadaprabhaNewsNetwork | Published : Jan 28, 2024 1:17 AM

ಸಾರಾಂಶ

ವರ ಫೋಟೋಗಳನ್ನು ಮನೆಗೆ ತಂದು ಭಕ್ತಿಯಿಂದ ಪೂಜಿಸುತ್ತೇವೆ. ಆದರೆ, ಅವು ವಿಘ್ನವಾದಾಗ ಅವುಗಳನ್ನು ಗಿಡ, ಮರದ ಕೆಳಗಿಡುತ್ತೇವೆ. ಇದು ನಿಜ ಭಕ್ತಿಯಲ್ಲ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮನೆಯಲ್ಲಿ ಪೂಜಿಸುವ ದೇವರ ಪೋಟೊಗಳು ವಿಘ್ನವಾದಾಗ ಜನರು ರಸ್ತೆ ಪಕ್ಕದಲ್ಲಿರುವ ಗಿಡ, ಮರಗಳ ಬುಡದಲ್ಲಿಡುವ ಎಸೆಯುತ್ತಾರೆ. ಅವುಗಳನ್ನು ವೀರೇಶ ಹಿರೇಮಠ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡುತ್ತಿರುವುದು ಪುಣ್ಯದ ಕೆಲಸ ಎಂದು ಬಡೇಕೊಳ್ಳಮಠದ ಶ್ರೀ ನಾಗೇಂದ್ರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.ಈಚೆಗೆ ಸಮೀಪದ ಹಿರೇಬಾಗೇವಾಡಿಯ ಬಡೇಕೊಳಮಠದ ಪರಿಸರದ ಗಿಡ, ಮರಗಳಲ್ಲಿ ಸೇವಾದಳದ ವತಿಯಿಂದ ದೇವರ ಫೋಟೋಗಳ ಸಂಗ್ರಹ ಕಾರ್ಯಕ್ರಮ ಮುಗಿದ ಬಳಿಕ ಮಾತನಾಡಿದ ಅವರು, ದೇವರ ಫೋಟೋಗಳನ್ನು ಮನೆಗೆ ತಂದು ಭಕ್ತಿಯಿಂದ ಪೂಜಿಸುತ್ತೇವೆ. ಆದರೆ, ಅವು ವಿಘ್ನವಾದಾಗ ಅವುಗಳನ್ನು ಗಿಡ, ಮರದ ಕೆಳಗಿಡುತ್ತೇವೆ. ಇದು ನಿಜ ಭಕ್ತಿಯಲ್ಲ. ದೇವರ ಫೋಟೋಗಳಿಗೂ ವಿಧಿ ವಿಧಾನದ ಮೂಲಕ ವಿಸರ್ಜನೆ ಮಾಡಬೇಕು. ಆ ಕಾರ್ಯ ಸೇವಾದಳದ ವೀರೇಶ ಹಿರೇಮಠರ ತಂಡ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ವೀರೇಶ ಹಿರೇಮಠ ಅವರ ಕಾರ್ಯದ ಬಗ್ಗೆ ರಘುನಾಥ ಜಾಧವ ಅವರು ಮಾಹಿತಿ ನೀಡಿದಾಗ ಕೂಡಲೇ ಅವರನ್ನು ನಮ್ಮ ಬಡೇಕೊಳಮಠಕ್ಕೆ ಬರುವಂತೆ ತಿಳಿಸಿದೇವು. ನಮ್ಮ ಕರೆಗೆ ಸ್ಪಂದಿಸಿದ ಅವರು, ಇಲ್ಲಿನ ದೇವರ ಫೋಟೋಗಳನ್ನು ವಿಸರ್ಜಿಸುತ್ತಿರುವುದು ಅಭಿಮಾನದ ಸಂಗತಿ ಎಂದರು.

ಸೇವಾದಳದ ಸಂಸ್ಥಾಪಕ ಅಧ್ಯಕ್ಷ ವೀರೇಶ ಹಿರೇಮಠ ಮಾತನಾಡಿ, ಹಿಂದು ದೇವರ ಫೋಟೋಗಳನ್ನು ಗಿಡ, ಮರಗಳ ಕೆಳಗಡೆ ಇಡುವುದು ನಮ್ಮ ಸಂಸ್ಕೃತಿಯಲ್ಲ. ದೇವರ ಫೋಟೋಗಳಿಗೂ ಮನುಷ್ಯರಂತೆ ಜೀವ ಇರುತ್ತವೆ. ದೇವಸ್ಥಾನ ಅಥವಾ ಪುಣ್ಯಕ್ಷೇತ್ರದಿಂದ ತಂದು ಮನೆಯಲ್ಲಿ ಪೂಜೆ ಮಾಡಿದ ಬಳಿಕ ಅದು ವಿಘ್ನವಾದಾಗ ನಡು ರಸ್ತೆಯಲ್ಲಿಡುವುದು ಸರಿಯಲ್ಲ. ಫೋಟೋಗಳನ್ನು ವಿಧಿ ವಿಧಾನಗಳಿಂದ ವಿಸರ್ಜನೆ ಮಾಡಬೇಕು. ಜನರು ಜಾಗೃತರಾಗಬೇಕೆಂದು ಕರೆ ನೀಡಿದರು.

ಈ ವೇಳೆ ಸೇವಾದಳದ ಸಂಸ್ಥಾಪಕ, ಅಧ್ಯಕ್ಷ ವೀರೇಶ ಹಿರೇಮಠ ಅವರನ್ನು ಶ್ರೀ ಕ್ಷೇತ್ರ ಬಡೇಕೊಳಮಠದಿಂದ ನಾಗೇಂದ್ರ ಸ್ವಾಮೀಜಿ ಅವರು ಸತ್ಕರಿಸಿದರು. ಕಲ್ಲಯ್ಯ ಹಿರೇಮಠ, ಸಾಗರ ಹಿರೇಮಠ, ದೇವಪ್ಪ ಕಾಂಬಳೆ ಸೇರಿ ಬಡೇಕೊಳಮಠದ ಭಕ್ತರು ಇದ್ದರು.

Share this article