ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೇವಾ ಯೋಜನೆ ನೀಡುತ್ತಿರುವ ಎಲ್ಲಾ ಯೋಜನೆಗಳು ಸಂಕಷ್ಟದಲ್ಲಿರುವವರಿಗೆ ಸಂಜೀವಿನಿಯಾಗಿವೆ ಎಂದು ರಾಜ್ಯ ಆರ್ ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ಶ್ರೀಕ್ಷೇತ್ರದ ವತಿಯಿಂದ ಆಯೋಜಿಸಿದ್ದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ ಮತ್ತು ಆರೋಗ್ಯ ರಕ್ಷಾ ವಿಮೆ ಹಣ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಶ್ರೀಕ್ಷೇತ್ರವು ವೈದ್ಯಕೀಯ, ಇಂಜಿನಿಯರಿಂಗ್ ಮುಂತಾದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಸುಜ್ಞಾನ ನಿಧಿ ಶಿಷ್ಯ ವೇತನ ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಶಿಷ್ಯ ವೇತನದ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಶಿಕ್ಷಣಕ್ಕೆ ನೀಡುವಷ್ಟೇ ಪ್ರಾಧಾನ್ಯತೆಯನ್ನು ಸಂಸ್ಕಾರಯುತ ಜೀವನಕ್ಕೂ ನೀಡಬೇಕು. ಕಲಿಕೆ ಮುಗಿದು ಸಮಾಜದ ಮುಖ್ಯವಾಹಿನಿಗೆ ಬಂದಾಗ ನಾವು ಸಮಾಜದಿಂದ ಪಡೆದುದನ್ನು ಮತ್ತೆ ಸಮಾಜಕ್ಕೆ ಹಿಂದಿರುಗಿಸಬೇಕು ಎಂದು ಹೇಳಿದರು.
ನಿತ್ಯ ದೇವರಿಗೆ ನಮಿಸುವಂತೆ ನಮ್ಮ ತಂದೆ- ತಾಯಿಗಳಿಗೂ ನಮಿಸುವ ಪರಿಪಾಠ ರೂಢಿಸಿಕೊಳ್ಳಬೇಕು. ಧರ್ಮ ಮತ್ತು ಸಂಸ್ಕಾರಗಳ ಶಕ್ತಿ ನಮಗೆ ಅರ್ಥವಾಗಬೇಕಾದರೆ ನಾವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.ಯೋಜನೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ನಾವು ಪಾಶ್ಚಾತ್ಯ ಸಂಸ್ಕೃತಿ ಹಿಂದೆ ಹೋಗುವ ಬದಲು ಹಿರಿಯರ ಜೀವನ ಮೌಲ್ಯಗಳ ಹಿಂದೆ ಹೋಗಬೇಕು. ಪೋಷಕರು ಮಕ್ಕಳಿಗೆ ಸಂಸ್ಕಾರ ಕಲಿಕೆಗೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ದಂಪತಿ ಗ್ರಾಮಾಭಿವೃದ್ದಿ ಯೋಜನೆ ಮೂಲಕ ಜನರ ಅರ್ಥಿಕ ಮತ್ತು ಬೌದ್ಧಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.ಗ್ರಾಮೀಣ ವಿದ್ಯಾರ್ಥಿಗಳ ನೆರವಿಗಾಗಿ ಸುಜ್ಞಾನ ನಿಧಿ ಶಿಷ್ಯ ವೇತನ ಯೋಜನೆ ಮೂಲಕ ತಾಲೂಕಿನ 209 ವಿದ್ಯಾರ್ಥಿಗಳಿಗೆ 52,28,000 ರು. ಮಂಜೂರಾಗಿ ಪತ್ರ ವಿತರಿಸಲಾಗುತ್ತಿದೆ. ಆರೋಗ್ಯ ರಕ್ಷಾ ಯೋಜನೆಯಡಿ ತಾಲೂಕಿನ 174 ಜನರಿಗೆ ಆರೋಗ್ಯ ವಿಮೆ ಮಂಜೂರಾಗಿ 20,70,114 ರು. ವಿಮೆ ಹಣದ ಚೆಕ್ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹೋಟೆಲ್ ರಾಮದಾಸ್ ಮಾಲೀಕ ಅರವಿಂದ ಕಾರಂತ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಂಜುನಾಥ್, ಗ್ರಾಮಾಭಿವೃದ್ದಿ ಯೋಜನೆ ಯೋಜನಾಧಿಕಾರಿ ತಿಲಕ್ ರಾಜ್ ಉಪಸ್ಥಿತರಿದ್ದರು.