ಸಂಭ್ರಮದ ಹೇಮಗಿರಿಯ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

KannadaprabhaNewsNetwork | Published : Feb 17, 2024 1:21 AM

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಉತ್ಸವ ಮೂರ್ತಿಗೆ ಹಣ್ಣು ದವನ ಹಾಗೂ ಬಾಳೆ ಹಣ್ಣು ಎಸೆದು ಸಂಭ್ರಮಿಸಿದರು. ರಥೋತ್ಸವದುದ್ದಕ್ಕೂ ಕಲ್ಯಾಣ ವೆಂಕಟರಮಣ ಸ್ವಾಮಿ ಗೋವಿಂದಾ, ಗೋವಿಂದ..., ಉಘೇ... ಉಘೇ... ಹೇಮಗಿರಿ ರಂಗ ಎನ್ನುವ ಭಕ್ತಿಯ ಘೋಷಣೆಗಳು ಮೊಳಗಿದವು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿಯ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.

ಹೇಮಾವತಿ ನದಿ ದಂಡೆಯ ಹೇಮಗಿರಿ ಬೆಟ್ಟದ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ದಂಪತಿ ಸಮೇತ ಆಗಮಿಸಿದ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ರಥೋತ್ಸವಕ್ಕೆ ಮುನ್ನ ವಿಶೇಷ ಪೂಜೆ ಸಲ್ಲಿಸಿದರು. ಆನಂತ ಬೆಟ್ಟದ ತಪ್ಪಲಿನಲ್ಲಿ ತಹಸೀಲ್ದಾರ್ ನಿಸರ್ಗ ಪ್ರಿಯ ಜೊತೆಗೂಡಿ ತೇರು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಅಲಂಕೃತ ರಥದಲ್ಲಿ ಕಲ್ಯಾಣ ವೆಂಕಟರಮಣ ಸ್ವಾಮಿ ಉತ್ಸವ ಮೂರ್ತಿಯನ್ನಿಟ್ಟು ತೇರು ಎಳೆಯಲಾಯಿತು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಉತ್ಸವ ಮೂರ್ತಿಗೆ ಹಣ್ಣು ದವನ ಹಾಗೂ ಬಾಳೆ ಹಣ್ಣು ಎಸೆದು ಸಂಭ್ರಮಿಸಿದರು. ರಥೋತ್ಸವದುದ್ದಕ್ಕೂ ಕಲ್ಯಾಣ ವೆಂಕಟರಮಣ ಸ್ವಾಮಿ ಗೋವಿಂದಾ, ಗೋವಿಂದ, ಉಘೇ ಉಘೇ ಹೇಮಗಿರಿ ರಂಗ ಎನ್ನುವ ಭಕ್ತಿಯ ಘೋಷಣೆಗಳು ಮೊಳಗಿದವು.

ಹೇಮಗಿರಿ ಜಾತ್ರೆ ನಿಮಿತ್ತ ಸಾವಿರಾರು ರಾಸುಗಳು ಕಳೆದ ಒಂದು ವಾರದಿಂದ ಜಾತ್ರೆ ಮಾಳದಲ್ಲಿ ಸೇರಿದ್ದವು. ದನಗಳ ಜಾತ್ರೆಯಲ್ಲಿ ಉತ್ತಮ ರಾಸುಗಳನ್ನು ಕಟ್ಟಿದ್ದ ರಾಸುಗಳ ಮಾಲಿಕರಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಣೆಯನ್ನು ಶಾಸಕ ಎಚ್.ಟಿ.ಮಂಜು ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ಪುರಾಣ ಪ್ರಸಿದ್ಧ ಹೇಮಗಿರಿ ಐತಿಹಾಸಿಕ ಹಾಗೂ ಪ್ರವಾಸಿ ಸ್ಥಳ. ಮೈಸೂರು ಅರಸರು ಹೇಮಗಿರಿಯಲ್ಲಿ ಹೇಮಾವತಿ ನದಿಗೆ ಪುಟ್ಟ ಒಡ್ಡು ಅಣೆಕಟ್ಟೆಯನ್ನು ನಿರ್ಮಿಸಿ ಈ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ ಎಂದರು.

ಹೇಮಗಿರಿಯ ದನಗಳ ಜಾತ್ರೆ ರಾಜ್ಯದ ಅತ್ಯಂತ ಪ್ರಮುಖ ಜಾತ್ರೆಗಳಲ್ಲಿ ಒಂದು. ಜಾತ್ರೆ ಮಾಳದಲ್ಲಿ ಕಿ.ಮೀ ಗಟ್ಟಲೇ ದನಗಳನ್ನು ನೋಡಿಯೇ ಆನಂದಿಸಬೇಕು. ನಾನು ಶಾಸಕರಾಗಿ ಆಯ್ಕೆಯಾದ ನಂತರ ಮೊದಲನೇ ಸಲ ಜಾತ್ರೆ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಜಾತ್ರೆ ಹಾಗೂ ರಥೋತ್ಸವವು ಅದ್ಧೂರಿಯಾಗಿ ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಸಹಕಾರ ನೀಡಿದ್ದೀರಿ. ಮುಂದೆಯೂ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಈ ವೇಳೆ ತಹಸೀಲ್ದಾರ್ ನಿಸರ್ಗ ಪ್ರಿಯ, ಆರ್.ಟಿ.ಒ ಅಧಿಕಾರಿ ಮಲ್ಲಿಕಾರ್ಜುನ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಚ್.ಟಿ. ಲೋಕೇಶ್, ಟಿಎಪಿಸಿಎಂಎಸ್ ನಿರ್ದೇಶಕ ತೆರ್ನೇನಹಳ್ಳಿ ಬಲದೇವ್, ಗ್ರಾಪಂ ಮಾಜಿ ಅಧ್ಯಕ್ಷ ಕಾಯಿ ಮಂಜೇಗೌಡ, ಬಂಡಿಹೊಳೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿಅಣ್ಣಪ್ಪ, ಉಪಾಧ್ಯಕ್ಷೆ ಲೀಲಾವತಿ ಜಯರಾಂ, ಕೋರಮಂಡಲ್ ಸಕ್ಕರೆ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ, ರಾಜಸ್ವ ನಿರೀಕ್ಷಕ ಜ್ಞಾನೇಶ್ ಸೇರಿದಂತೆ ಹಲವರು ಹಾಜರಿದ್ದರು.

Share this article