ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇಲ್ಲಿನ ಭವಾನಿ ನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಅದ್ಧೂರಿಯಾಗಿ ನಡೆಯಿತು.ಶ್ರೀಗುರು ಸಾರ್ವಭೌಮರ 404ನೇ ಪಟ್ಟಾಭಿಷೇಕ ಮಹೋತ್ಸವ ಮತ್ತು 426ನೇ ವರ್ಧಂತ್ಯುತ್ಸವ ಒಳಗೊಂಡ ಶ್ರೀಗುರು ವೈಭವೋತ್ಸವದ ಅಂಗವಾಗಿ ಬೆಂಗಳೂರಿನ ಶ್ರೀವಾರಿ ಫೌಂಡೇಶನ್ ಹಾಗೂ ಹುಬ್ಬಳ್ಳಿ ಭವಾನಿ ನಗರದ ಪೂರ್ಣಪ್ರಜ್ಞಾ ಸೇವಾ ಸಂಘದ ಸಹಯೋಗದಲ್ಲಿ ಲೋಕಕಲ್ಯಾಣಾರ್ಥ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ಶ್ರೀನಿವಾಸನ ದರ್ಶನ ಪಡೆದರು.
ಇದಕ್ಕೂ ಪೂರ್ವ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ರಾಯರಿಗೆ ಅಷ್ಟಾಕ್ಷರ ಹೋಮ, ಪ್ರವಚನ ಮಂಗಳ, ದೀವಟಿಗೆ ಸೇವೆ, ಜಯವಿಜಯ ಭಜನಾ ಮಂಡಳಿಯಿಂದ ವಿಶೇಷ ಭಜನೆ, ದೀಪಾರಾಧನೆ, ಅಷ್ಟಾವಧಾನ ಸೇವೆ ಹಾಗೂ ಅಲಂಕಾರ ಪೂಜೆ ನಡೆಯಿತು. ನಂತರ ಛತ್ರ ಚಾಮರದ ಜತೆಗೆ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಶ್ರೀನಿವಾಸ ಮತ್ತು ಪದ್ಮಾವತಿ ಮೂರ್ತಿಯನ್ನು ಭಜನೆ ಹಾಗೂ ನೃತ್ಯದ ಮೂಲಕ ತಂದು ಪ್ರತಿಷ್ಠಾಪನೆ ಮಾಡಲಾಯಿತು.ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ನಿರ್ಮಿಸಿದ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮಾದರಿ ಭಕ್ತರನ್ನು ವಿಸ್ಮಯಗೊಳಿಸಿತು. ಶಂಕ- ಚಕ್ರದ ಮಧ್ಯದಲ್ಲಿ ನಿರ್ಮಿಸಿದ್ದ ದೇವಸ್ಥಾನದಲ್ಲಿ ತಿಮ್ಮಪ್ಪನ ದರ್ಶನವಾಗುತ್ತಿದ್ದಂತೆ ಭಕ್ತರು ಭಕ್ತಿಯಿಂದ ಜಯಘೋಷ ಕೂಗಿ ಪುಷ್ಪಗಳ ಸುರಿಮಳೆಗೈದರು.
ನಂತರ ಶ್ರೀಮಠದ ವೇಣುಗೋಪಾಲ ಆಚಾರ್ಯ ದಂಪತಿ ಹಾಗೂ ಪೂರ್ಣ ಪ್ರಜ್ಞಾ ಸೇವಾ ಸಂಘದ ಬಿಂದು ಮಾಧವ ಪುರೋಹಿತ ದಂಪತಿ ನೇತೃತ್ವದಲ್ಲಿ ಶ್ರದ್ಧಾ-ಭಕ್ತಿ ಮತ್ತು ವಿಜೃಂಭಣೆಯಿಂದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ಅದಕ್ಕೂ ಮುನ್ನ ಶ್ರೀನಿವಾಸನಿಗೆ ಮಂಗಳ ಸ್ನಾನ, ವಸ್ತ್ರ ಧಾರಣೆ, ಛತ್ರ ಚಾಮರ ಸೇವೆ, ಮಹಾ ಮಂಗಳಾರತಿ, ಅಕ್ಷತಾರೋಹಣದೊಂದಿಗೆ ಶ್ರೀನಿವಾಸ ಕಲ್ಯಾಣೋತ್ಸವ ಮುಕ್ತಾಯಗೊಂಡಿತು. ಎಲ್ಲ ಭಕ್ತರಿಗೆ ಶ್ರೀಮಠದ ಭಕ್ತರಿಂದ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಎ.ಸಿ. ಗೋಪಾಲ, ರಾಘವೇಂದ್ರ ನಂಜನಗೂಡು, ಗುರಾಚಾರ್ಯ ಸಾಮಗಾ, ರಘುವೀರ ಆಚಾರ್ಯ, ವಾಸುದೇವ ಕಟ್ಟಿ, ರಾಘವೇಂದ್ರ ಗೊಗ್ಗಿ, ಗಿರೀಶ್ ಕುಲಕರ್ಣಿ, ಸಂಜಯ್ ಅರ್ಚಕ, ಶ್ರೀರಂಗ ಹನುಮಸಾಗರ, ಪ್ರಮೋದ್ ಗುಣಾರಿ, ಮನೋಹರ ಪರ್ವತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ದರ್ಶನಕ್ಕೆ ಭಕ್ತ ಸಾಗರ:ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭವನ್ನು ಕಣ್ತುಂಬಿಕೊಳ್ಳಲು ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಶ್ರೀಮಠದ ಆವರಣ ಭರ್ತಿಯಾಗಿದ್ದರಿಂದ ಭಕ್ತರು ನಿಂತುಕೊಂಡೇ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ನಂತರ ಸರದಿಯಲ್ಲಿ ನಿಂತು ಶ್ರೀನಿವಾಸ-ಪದ್ಮಾವತಿಯ ದರ್ಶನ ಪಡೆದರು. ಎಲ್ಲೆಡೆ ಗೋವಿಂದನ ನಾಮಸ್ಮರಣೆ, ಭಜನೆ ಕೇಳಿ ಬಂದವು.