ಬಿಜೆಪಿಯಿಂದ ಶ್ರೀರಾಮುಲು, ಕೈ ಅಭ್ಯರ್ಥಿ ಯಾರು?

KannadaprabhaNewsNetwork | Published : Feb 20, 2024 1:49 AM

ಸಾರಾಂಶ

ಬಿಜೆಪಿ ಮೂಲಗಳ ಪ್ರಕಾರ ಶ್ರೀರಾಮುಲು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಪಕ್ಷದ ಹೈಕಮಾಂಡ್ ಸಹ ಶ್ರೀರಾಮುಲು ಮೇಲೆ ಒಲವು ತೋರಿದೆ ಎನ್ನಲಾಗಿದೆ.

ಕೆ.ಎಂ. ಮಂಜುನಾಥ್ಬಳ್ಳಾರಿ: ಬಳ್ಳಾರಿ ಲೋಕಸಭಾ ಚುನಾವಣೆ ಅಖಾಡಕ್ಕೆ ಮಾಜಿ ಸಚಿವ ಬಿ. ಶ್ರೀರಾಮುಲು ಧುಮುಕುವುದು ಬಹುತೇಕ ಖಚಿತವಾಗಿದ್ದು, ಶ್ರೀರಾಮುಲುಗೆ ಎದುರಾಳಿಯಾಗಿ ಸ್ಪರ್ಧೆಗಿಳಿಯುವ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬ ಕುತೂಹಲ ಮೂಡಿದೆ.ಹಾಲಿ ಬಿಜೆಪಿ ಸಂಸದ ವೈ. ದೇವೇಂದ್ರಪ್ಪ ಅವರು ಮತ್ತೊಮ್ಮೆ ಅವಕಾಶ ಬಯಸಿ ಕೇಂದ್ರದ ನಾಯಕರನ್ನು ಭೇಟಿ ಮಾಡಿ ಟಿಕೆಟ್‌ ದಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದೇವೇಂದ್ರಪ್ಪ ಹೊರತುಪಡಿಸಿದರೆ ಬಿಜೆಪಿಯಿಂದ ಟಿಕೆಟ್‌ಗೆ ಪೈಪೋಟಿ ಕಂಡುಬಂದಿಲ್ಲ.

ಬಿಜೆಪಿ ಮೂಲಗಳ ಪ್ರಕಾರ ಶ್ರೀರಾಮುಲು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಪಕ್ಷದ ಹೈಕಮಾಂಡ್ ಸಹ ಶ್ರೀರಾಮುಲು ಮೇಲೆ ಒಲವು ತೋರಿದೆ ಎನ್ನಲಾಗಿದೆ. ಬಿಜೆಪಿ ಟಿಕೆಟ್‌ಗೆ ತೀವ್ರ ಪೈಪೋಟಿಯಿಲ್ಲವಾದ್ದರಿಂದ ಶ್ರೀರಾಮುಲು ಸ್ಪರ್ಧೆ ಸಲೀಸಾಗಿದೆ.ಈ ಹಿಂದೆ ಶ್ರೀರಾಮುಲು ರಾಯಚೂರಿನಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಇತ್ತೀಚೆಗಾದ ರಾಜಕೀಯ ಬೆಳವಣಿಗೆ ಪ್ರಕಾರ ಶ್ರೀರಾಮುಲು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಪಕ್ಷದ ಹಿರಿಯ ನಾಯಕರು ಹಸಿರುನಿಶಾನೆ ತೋರಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಜರುಗುವ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ಶ್ರೀರಾಮುಲು ಹೆಸರು ಖಚಿತಗೊಳ್ಳುವ ಸಾಧ್ಯತೆಯಿದೆ.ಕೈ ಪಕ್ಷದ ಆಕಾಂಕ್ಷಿಗಳೇ ಹೆಚ್ಚು: ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಥಿಯಾಗಿ ಸ್ಪರ್ಧೆಗಿಳಿಯಲು ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಲಿ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಹೋದರ ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ಕೊಡಿಸಲು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಹಿಂದೆ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದ್ದ ವಿ.ಎಸ್. ಉಗ್ರಪ್ಪ ಅವರು ಮತ್ತೊಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಇನ್ನು ಸಂಡೂರು ಶಾಸಕ ಈ. ತುಕಾರಾಂ ಅವರು ತಮ್ಮ ಪುತ್ರಿ ಚೈತನ್ಯಕುಮಾರಿ ಅವರು ಸಹ ಆಕಾಂಕ್ಷಿಯಾಗಿದ್ದು, ಅದೃಷ್ಟ ಪರೀಕ್ಷೆಗೆ ಉತ್ಸುಕರಾಗಿದ್ದಾರೆ. ವಿಜಯನಗರ ಜಿಲ್ಲೆಯ ಗುಜ್ಜಲ್ ನಾಗರಾಜ್ ಆಕಾಂಕ್ಷಿಯಾಗಿದ್ದಾರೆ.ಏತನ್ಮಧ್ಯೆ ಹಾಲಿ ಜಿಲ್ಲಾ ಸಚಿವ ಬಿ. ನಾಗೇಂದ್ರ ಅವರನ್ನು ಅಖಾಡಕ್ಕೆ ಇಳಿಸಲು ಪಕ್ಷ ಚಿಂತನೆ ನಡೆಸಿದೆ ಎಂದು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಅವರು ಅಖಾಡಕ್ಕಿಳಿದರೆ, ಎದುರಾಳಿಯಾಗಿ ಸಚಿವ ನಾಗೇಂದ್ರ ಸ್ಪರ್ಧಿಸಿದರೆ ಮಾತ್ರ ಕಾಂಗ್ರೆಸ್ ಗೆಲುವು ಸಾಧ್ಯ ಎಂಬ ರಾಜಕೀಯ ಲೆಕ್ಕಾಚಾರವಿದೆ. ಹೀಗಾಗಿ ಸಚಿವ ನಾಗೇಂದ್ರಗೆ ಚುನಾವಣೆ ಸ್ಪರ್ಧಿಸುವ ಅನಿವಾರ್ಯತೆ ಸೃಷ್ಟಿಯಾದರೆ ಅಚ್ಚರಿಯಿಲ್ಲ.ಶಕ್ತಿ ತುಂಬುವೆ: ನಾನು ಈ ಬಾರಿ ಮತ್ತೆ ಸ್ಪರ್ಧಿಸುವುದು ಖಚಿತ. ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮೊರೆ ಇಟ್ಟಿರುವೆ. ಖಂಡಿತ ಈ ಬಾರಿ ಮತ್ತೆ ಟಿಕೆಟ್ ಸಿಗುವ ವಿಶ್ವಾಸವಿದೆ. ನನಗೆ ಬರೀ 71 ವರ್ಷವಷ್ಟೇ. ನಾನು 17ರ ಯುವಕನಂತೆ ಉತ್ಸಾಹಿಯಾಗಿರುವೆ. ವಯಸ್ಸು ಟಿಕೆಟ್ ನೀಡಿಕೆ ವಿಚಾರದಲ್ಲಿ ಅಡ್ಡಿಯಾಗಲಾರದು. ಜನರ ಆಶೀರ್ವಾದದಿಂದ ಮತ್ತೊಮ್ಮೆ ಗೆಲುವು ಪಡೆದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬುವೆ ಎಂದು ಸಂಸದ ವೈ. ದೇವೇಂದ್ರಪ್ಪ ತಿಳಿಸಿದರು.

ಜನಾರ್ದನ ರೆಡ್ಡಿ ಪಕ್ಷದ ಪಾತ್ರವೇನು?ಮಾಜಿ ಸಚಿವ ಜನಾರ್ದನ ರೆಡ್ಡಿ ಸಂಸ್ಥಾಪಿತ ಕಲ್ಯಾಣರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ) ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ಪಾತ್ರ ನಿರ್ವಹಿಸಲಿದೆ ಎಂಬುದು ನಿಗೂಢವಿದೆ. ಜನಾರ್ದನ ರೆಡ್ಡಿ ಬಿಜೆಪಿಗೆ ಮರಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಒಂದು ವೇಳೆ ರೆಡ್ಡಿ ಮತ್ತೆ ಕಮಲ ಪಕ್ಷ ಪ್ರವೇಶ ಮಾಡಿದಲ್ಲಿ ರಾಜಕೀಯ ಚಿತ್ರಣವೂ ಬದಲಾಗುವ ಸಾಧ್ಯತೆಗಳಿವೆ. ಲೋಕಸಭಾ ಚುನಾವಣೆಗೆ ತಾವು ಹೇಳಿದ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂದು ರೆಡ್ಡಿ ಪಟ್ಟು ಹಿಡಿದರೆ ಅಚ್ಚರಿಯಿಲ್ಲ. ಬಿಜೆಪಿ ಸೇರ್ಪಡೆಯಾಗದೆ ಸ್ವಂತ ಪಕ್ಷದಲ್ಲಿಯೇ ಉಳಿದರೆ, ಕೆಆರ್‌ಪಿಪಿ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸುವುದು ಭಾಗಶಃ ಖಚಿತವಾಗಿದ್ದು, ಇದರ ಲಾಭ ಯಾರಿಗಾಗಲಿದೆ ಎಂಬುದು ಚುನಾವಣೆ ಮುನ್ನ ಆಗುವ ಬೆಳವಣಿಗೆಗಳ ಮೇಲೆ ಆಧಾರ ಪಟ್ಟಿದೆ.

Share this article