ಎಸ್ಸೆಸ್ಸೆಲ್ಸಿ: ಬೆಳಗಾವಿ ವಿಭಾಗದ 32 ಸಾವಿರವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ ಫೇಲ್‌..!

KannadaprabhaNewsNetwork | Published : May 25, 2024 12:49 AM

ಸಾರಾಂಶ

ಫಲಿತಾಂಶದ ಅಂಕಿ-ಅಂಶಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಈ ಬಾರಿ ಗ್ರೇಸ್‌ ಅಂಕ ನೀಡಿಯೂ ಮಾತೃಭಾಷೆಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಫೇಲ್‌ ಆಗಿರುವುದು ಕಳವಳ ಸೃಷ್ಟಿಸಿದೆ.

ಬಸವರಾಜ ಹಿರೇಮಠ

ಧಾರವಾಡ:

ಇತ್ತೀಚೆಗೆ ಪ್ರಕಟವಾದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬೆಳಗಾವಿ ವಿಭಾಗದ 9 ಜಿಲ್ಲೆಗಳ 32 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾತೃಭಾಷೆ (ಕನ್ನಡ)ಯಲ್ಲಿ ಫೇಲ್‌ ಆಗಿದ್ದಾರೆ. ಇದು ಶಿಕ್ಷಣ ತಜ್ಞರನ್ನು ಆತಂಕಕ್ಕೀಡು ಮಾಡಿದೆ.

ಫಲಿತಾಂಶದ ಅಂಕಿ-ಅಂಶಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಈ ಬಾರಿ ಗ್ರೇಸ್‌ ಅಂಕ ನೀಡಿಯೂ ಮಾತೃಭಾಷೆಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಫೇಲ್‌ ಆಗಿರುವುದು ಕಳವಳ ಸೃಷ್ಟಿಸಿದೆ. ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ, ಇಂಗ್ಲಿಷ್, ಮರಾಠಿ, ಉರ್ದು, ಸಂಸ್ಕೃತ, ಹಿಂದಿ ಮತ್ತು ತೆಲುಗು ಮೊದಲ ಭಾಷೆಯಾಗಿ ಆಯ್ಕೆ ಮಾಡಲು ಅವಕಾಶವಿದೆ. ಹಾಗೆಯೇ, ಕನ್ನಡ ಅಥವಾ ಇಂಗ್ಲಿಷ್ ಭಾಷೆಯನ್ನು ಎರಡನೇ ಭಾಷೆಯಾಗಿ ಆಯ್ಕೆ ಮಾಡಬಹುದು. ಶಾಲಾ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2024ರ ಪರೀಕ್ಷೆಯಲ್ಲಿ ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ 32,655 ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡ, 2,334 ವಿದ್ಯಾರ್ಥಿಗಳು ಪ್ರಥಮ ಭಾಷೆ ಇಂಗ್ಲಿಷ್‌ನಲ್ಲಿ ಅನುತ್ತೀರ್ಣರಾಗಿದ್ದಾರೆ.

ಇನ್ನು, ಮರಾಠಿಯಲ್ಲಿ 1222, ಉರ್ದುವಿನಲ್ಲಿ 745, ಸಂಸ್ಕೃತದಲ್ಲಿ 12 ಮತ್ತು ಹಿಂದಿ ಮತ್ತು ತೆಲುಗಿನಲ್ಲಿ ತಲಾ ಒಬ್ಬರು ಅನುತ್ತೀರ್ಣರಾಗಿದ್ದಾರೆ. ಪ್ರಥಮ ಭಾಷೆಯಲ್ಲಿ ಒಟ್ಟು ವಿಫಲರ ಸಂಖ್ಯೆ 36970ಕ್ಕೆ ತಲುಪಿದೆ.

ಕನ್ನಡವನ್ನು ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದ 7017 ವಿದ್ಯಾರ್ಥಿಗಳು ವಿಷಯದಲ್ಲಿ ಅನುತ್ತೀರ್ಣರಾಗಿದ್ದರೆ, ಇಂಗ್ಲಿಷ್‌ ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡ 39320 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ಅಂಕಿ-ಅಂಶಗಳು ಬಹಿರಂಗಪಡಿಸಿವೆ. ದ್ವಿತೀಯ ಭಾಷೆಯಲ್ಲಿ ಅನುತ್ತೀರ್ಣರಾದವರ ಒಟ್ಟು ಸಂಖ್ಯೆ 46337. ಇನ್ನು, ತೃತೀಯ ಭಾಷೆಯಲ್ಲಿ ಅನುತ್ತೀರ್ಣರಾದ 41084 ವಿದ್ಯಾರ್ಥಿಗಳಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್‌ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ದ್ವಿತೀಯ ಭಾಷೆಯಲ್ಲಿ ಅಭ್ಯಸಿಸುತ್ತಾರೆ. ಈ ಅಂಕಿ ಸಂಖ್ಯೆ ಗಮನಿಸಿದರೆ ಫೇಲಾಗಿರುವ 32,655 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿಯೇ ಓದಿದವರು. 1ರಿಂದ 10ನೇ ತರಗತಿ ವರೆಗೆ ಕನ್ನಡದಲ್ಲಿ ಓದಿ, ನಿತ್ಯ ಕನ್ನಡದಲ್ಲಿ ಮಾತನಾಡಿ, ಬರೆದು, ಅಭ್ಯಾಸ ಮಾಡಿಯೂ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ.

7ನೇ ತರಗತಿಯ ಅನೇಕ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ಬರುವುದಿಲ್ಲ. ಶಿಕ್ಷಕರು ಕಲಿಸುವುದನ್ನು ಬಿಟ್ಟು ಇತರೆ ಅನಗತ್ಯ ಚಟುವಟಿಕೆಗಳಿಂದ ಬೇಸರಗೊಂಡಿದ್ದು ಬರೀ ಪಠ್ಯಕ್ರಮ ಪೂರ್ಣಗೊಳಿಸಲು ಆತುರಪಡುತ್ತಾರೆಯೇ ಹೊರತು ಸರಿಯಾಗಿ ಕಲಿಸಲು ಅಲ್ಲ. ಜತೆಗೆ ಕನ್ನಡ ಭಾಷೆ ಪಾಸಾಗುತ್ತಾರೆ ಎಂದು ಉಳಿದ ವಿಷಯಗಳಿಗೆ ಮಾನ್ಯತೆ ನೀಡಲು ಮುಂದಾಗಿರುವುದೇ ಇಷ್ಟೊಂದು ಸಂಖ್ಯೆಯಲ್ಲಿ ಕನ್ನಡ ಮಾಧ್ಯಮ ಮಕ್ಕಳು ಮಾತೃ ಭಾಷೆಯಲ್ಲಿ ಅನುತ್ತೀರ್ಣರಾಗಲು ಕಾರಣ ಎಂದು ಶಿಕ್ಷಣ ತಜ್ಞ ಡಾ. ಆನಂದ ಕಬ್ಬೂರು ಹೇಳುತ್ತಾರೆ.

1ರಿಂದ 10ನೇ ತರಗತಿ ವರೆಗೆ ಮಕ್ಕಳು ಎಷ್ಟು ಕಲಿತಿದ್ದಾರೆ, ಅಧ್ಯಯನಶೀಲರು ಎಂಬುದನ್ನು ಅರಿಯದೇ ಪ್ರತಿಯೊಬ್ಬರನ್ನು ಉತ್ತೀರ್ಣ ಮಾಡುತ್ತಿರುವ ಪರಿಣಾಮವೂ ಇದಾಗಿದೆ. ಜತೆಗೆ ಕನ್ನಡದ ಮೇಲೆ ಅಭಿಮಾನ ಇರದೇ ಇರುವುದನ್ನು ಸಹ ಇದು ಸೂಚಿಸುತ್ತದೆ ಎಂದು ನಿವೃತ್ತ ಕನ್ನಡ ಶಿಕ್ಷಕರೊಬ್ಬರು ವಿಶ್ಲೇಷಿಸಿದರು.

Share this article