15ರಿಂದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ: ರಾಜಕಾರಣಿಗಳ ಭೇಟಿಗೆ ನಿಷೇಧ

KannadaprabhaNewsNetwork | Published : Apr 5, 2024 1:07 AM

ಸಾರಾಂಶ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಗಳ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದ್ದು, ಏ.15ರಿಂದ ಏಕಕಾಲಕ್ಕೆ ಎಲ್ಲೆಡೆ ಮೌಲ್ಯಮಾಪನ ಕಾರ್ಯ ಆರಂಭಿಸಬೇಕೆಂದು ಜಿಲ್ಲಾ ಉಪನಿರ್ದೇಶಕರುಗಳಿಗೆ ಸೂಚಿಸಿದೆ.

- ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್‌ ಫೋನ್‌ ಬಳಕೆ ನಿಷೇಧ

ಕನ್ನಡಪ್ರಭ ವಾರ್ತೆ, ಬೆಂಗಳೂರು

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಗಳ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದ್ದು, ಏ.15ರಿಂದ ಏಕಕಾಲಕ್ಕೆ ಎಲ್ಲೆಡೆ ಮೌಲ್ಯಮಾಪನ ಕಾರ್ಯ ಆರಂಭಿಸಬೇಕೆಂದು ಜಿಲ್ಲಾ ಉಪನಿರ್ದೇಶಕರುಗಳಿಗೆ ಸೂಚಿಸಿದೆ.

ಇನ್ನೆರಡು ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಡಿಡಿಪಿಐಗಳ ಕರ್ತವ್ಯ ಮತ್ತು ಜವಾಬ್ದಾರಿ ಕುರಿತು ಮಾರ್ಗಸೂಚಿ ಪ್ರಕಟಿಸಿದ್ದು, ಮೌಲ್ಯಮಾಪನ ಕಾರ್ಯವನ್ನು ಅತ್ಯಂತ ಪಾರದರ್ಶಕ ಮತ್ತು ಎಚ್ಚರಿಕೆಯಿಂದ ನಡೆಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಂಡಳಿ ಸೂಚಿಸಿದೆ.

ರಾಜಕೀಯ ನಾಯಕರ ಬಗ್ಗೆ ಎಚ್ಚರ:

ಆಯಾ ಜಿಲ್ಲಾ ಡಿಡಿಪಿಐಗಳು ಪ್ರತಿ ಮೌಲ್ಯಮಾಪನ ಕೇಂದ್ರಗಳಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಸಕಾಲದಲ್ಲಿ ಮೌಲ್ಯಮಾಪಕರು ಕೇಂದ್ರಗಳಿಗೆ ಹಾಜರಾಗುವಂತೆ ಸ್ಪಷ್ಟ ಸೂಚನೆ ನೀಡಬೇಕು. ಕೇಂದ್ರಗಳಲ್ಲಿ ಮೊಬೈಲ್‌ ಫೋನ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಲೋಕಸಭಾ ಚುನಾವಣಾ ಸಮಯವಾಗಿರುವುದರಿಂದ ಪ್ರಚಾರದಲ್ಲಿರುವ ರಾಜಕೀಯ ವ್ಯಕ್ತಿಗಳು, ಜನಪ್ರತಿನಿಧಿಗಳು ಮೌಲ್ಯಮಾಪನ ಕೇಂದ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಂತಹ ಭೇಟಿಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಗಳು ಕೇಂದ್ರವನ್ನು ಪ್ರವೇಶಿಸುವುದು ಕಾನೂನುಬಾಹಿರ. ಮೌಲ್ಯಮಾಪನ ಕೇಂದ್ರಗಳ ಕಟ್ಟಡದ 200 ಮೀ. ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸಿ ಅಗತ್ಯ ಪೊಲೀಸ್‌ ಭದ್ರತೆ ಕೈಗೊಳ್ಳಬೇಕು. ಯಾವುದೇ ಪ್ರಾಯೋಜಕರಿಂದ ಊಟ, ತಿಂಡಿ, ಕಾಫೀ/ಟೀಯನ್ನು ಈ ಕೇಂದ್ರಗಳಿಗೆ ಪಡೆಯಬಾರದು ಎಂದು ಮಂಡಳಿ ಸೂಚಿಸಿದೆ.

------------------ಮೌಲ್ಯಮಾಪನ ಕೇಂದ್ರಗಳಿಗೆ ವ್ಯವಸ್ಥಾಪಕರು ಮೊದಲು ಏ.7ರಂದು ಬೆಳಗ್ಗೆ 10 ಗಂಟೆಗೆ ಹಾಜರಾಗಿ ಪರಿಶೀಲನೆ ನಡೆಬೇಕು. ಏ.10ರಂದು ಜಂಟಿ ಮುಖ್ಯ ಮೌಲ್ಯಮಾಪಕರ ವಿಡಿಯೋ ಸಂವಾದ ನಡೆಸಬೇಕು. ಜಂಟಿ ಮುಖ್ಯ ಮೌಲ್ಯಮಾಪಕರು ಏ.12ರಂದು, ಉಪ ಮುಖ್ಯಮೌಲ್ಯಮಾಪಕರು ಏ.13ರಂದು ಮೌಲ್ಯಮಾಪನ ಕೇಂದ್ರಗಳಿಗೆ ಹಾಜರಾಗಿ ಉತ್ತರ ಪತ್ರಿಕೆಗಳ ಕೋಡಿಂಗ್‌, ಡೀ ಕೋಡಿಂಗ್‌ ಪ್ರಕ್ರಿಯೆ ನಡೆಸಬೇಕು. ಏ.15ರಿಂದ ಸಹಾಯಕ ಮೌಲ್ಯಮಾಪಕರು ಹಾಜರಾಗಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭಿಸಬೇಕು

Share this article