ಎಸ್ಸೆಸ್ಸೆಲ್ಸಿ: 15ರಿಂದ 23ನೇ ಸ್ಥಾನಕ್ಕೆ ಕುಸಿತ ಜಿಲ್ಲೆ!

KannadaprabhaNewsNetwork |  
Published : May 10, 2024, 01:31 AM IST
9ಕೆಡಿವಿಜಿ19, 20-ದಾವಣಗೆರೆ ಸಾಶಿಇ ಉಪ ನಿರ್ದೇಶಕ ಜಿ.ಕೊಟ್ರೇಶ. | Kannada Prabha

ಸಾರಾಂಶ

ವಿದ್ಯಾನಗರಿ ಖ್ಯಾತಿಯ ದಾವಣಗೆರೆ ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ 15ನೇ ಸ್ಥಾನದಿಂದ ಏಕಾಏಕಿ 23ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಶೇ.15ರಷ್ಟು ಫಲಿತಾಂಶದಲ್ಲೂ ಇಳಿಕೆಯಾಗಿದೆ. ಈ ಮಧ್ಯೆ ಫಲಿತಾಂಶ ಪ್ರಕಟಗೊಳ್ಳುವ ಮುಂಚೆ ಅನುತ್ತೀರ್ಣನಾಗುವ ಭೀತಿಯಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

- 3 ಖಾಸಗಿ ಶಾಲೆಗಳ ಸಾಧನೆ ಶೂನ್ಯ । 47 ಶಾಲೆಗೆ ಶೇ.40ಕ್ಕಿಂತ ಕಡಿಮೆ ಫಲಿತಾಂಶ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ವಿದ್ಯಾನಗರಿ ಖ್ಯಾತಿಯ ದಾವಣಗೆರೆ ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ 15ನೇ ಸ್ಥಾನದಿಂದ ಏಕಾಏಕಿ 23ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಶೇ.15ರಷ್ಟು ಫಲಿತಾಂಶದಲ್ಲೂ ಇಳಿಕೆಯಾಗಿದೆ. ಈ ಮಧ್ಯೆ ಫಲಿತಾಂಶ ಪ್ರಕಟಗೊಳ್ಳುವ ಮುಂಚೆ ಅನುತ್ತೀರ್ಣನಾಗುವ ಭೀತಿಯಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಜ್ಯದಲ್ಲಿ 15ನೇ ಸ್ಥಾನದಿಂದ ಅಗ್ರ 10 ಸ್ಥಾನದೊಳಗಿನ ಗುರಿ ಇಟ್ಟುಕೊಂಡಿದ್ದ ಜಿಲ್ಲೆಯಲ್ಲಿ ಶೇ.74.28 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.90.12 ಫಲಿತಾಂಶ ಬಂದಿದ್ದು. ಕಳೆದ ಸಾಲಿನಲ್ಲಿ 15ನೇ ಸ್ಥಾನ ಅಲಂಕರಿಸಿದ್ದ ದಾವಣಗೆರೆಗೆ ಈಗ 23ನೇ ಸ್ಥಾನಕ್ಕೆ ಕುಸಿದಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯನ್ನೇ ಬೆಚ್ಚಿ ಬೀಳಿಸಿದೆ.

ಎಸ್ಸೆಸ್ಸೆಲ್ಸಿ 2023-24ನೇ ಸಾಲಿನಲ್ಲಿ 20,602 ಮಕ್ಕಳು ಪರೀಕ್ಷೆ ಬರೆದಿದ್ದರು. ಈ ಪೈಕಿ 6547 ಬಾಲಕರು, 8756 ಬಾಲಕಿಯರು ಸೇರಿದಂತೆ 15,303 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎಂದಿನಂತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರ ಪೈಕಿ ಶೇ.82.53 ಜನ ಉತ್ತೀರ್ಣರಾದರೆ, ಬಾಲಕರ ಉತ್ತೀರ್ಣ ಪ್ರಮಾಣ ಶೇ.65.52ರಷ್ಟು ಇದೆ.

ಜಿಲ್ಲೆಯ ಟಾಪರ್‌ಗಳು:

ಜಿಲ್ಲೆಯ 2 ಅನುದಾನರಹಿತ ಶಾಲೆಗಳ ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 620 ಅಂಕ ಗಳಿಸಿ, ಜಿಲ್ಲೆಯ ಟಾಪರ್ ಪಟ್ಟ ಅಲಂಕರಿಸಿದ್ದಾರೆ. ಅಷ್ಟೇ ಇಲ್ಲ, ಇಬ್ಬರೂ ಜಿಲ್ಲೆಗೆ ಅಗ್ರಸ್ಥಾನವನ್ನೂ ಹಂಚಿಕೊಂಡಿದ್ದಾರೆ. ಚನ್ನಗಿರಿ ತಾ. ತ್ಯಾವಣಿಗೆ ಗ್ರಾಮದ ಪ್ರಕೃತಿ ಪ್ರೌಢಶಾಲೆಯ ಎಂ.ಎನ್.ಸೃಷ್ಟಿ, ದಾವಣಗೆರೆ ಶ್ರೀ ಸಿದ್ಧಗಂಗಾ ಪ್ರೌಢಶಾಲೆಯ ಗಾನವಿ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.

- - -

* ದಾವಣಗೆರೆ ದಕ್ಷಿಣ ವಲಯ ಪ್ರಥಮ ವಲಯವಾರು ಫಲಿತಾಂಶದಲ್ಲಿ ದಾವಣಗೆರೆ ದಕ್ಷಿಣ ವಲಯದ ಮಕ್ಕಳು ಪ್ರಥಮ ಸ್ಥಾನ ಅಲಂಕರಿಸಿದ್ದು, ವಲಯವು ಶೇ.81.63 ಫಲಿತಾಂಶ ಪಡೆದಿದೆ. ಹರಿಹರ ಶೇ.60.05 ಫಲಿತಾಂಶದೊಂದಿಗೆ ಜಿಲ್ಲೆಗೆ ಕಡೆಯ ಸ್ಥಾನ ಅಲಂಕರಿಸಿದೆ. ಚನ್ನಗಿರಿ ಶೇ.70, ದಾವಣಗೆರೆ ಉತ್ತರ ಶೇ.74.34, ಹೊನ್ನಾಳಿ ಶೇ.80.72, ಜಗಳೂರು ಶೇ.70.01 ಫಲಿತಾಂಶ ಪಡೆದಿದೆ. ಕಳೆದ ಸಾಲಿನಲ್ಲಿ ಜಗಳೂರು ಶೇ.96.42 ಫಲಿತಾಂಶದೊಂದಿಗೆ ಜಿಲ್ಲೆಗೆ ಅಗ್ರಸ್ಥಾನದಲ್ಲಿತ್ತು.

- - -

* ಆಂಗ್ಲ ಮಾಧ್ಯಮ ಮಕ್ಕಳ ಪಾರಮ್ಯ ಆಂಗ್ಲ ಮಾಧ್ಯಮ ಶಾಲೆ ಮಕ್ಕಳು ಈ ಸಲದ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಆಂಗ್ಲ ಮಾಧ್ಯಮದಿಂದ ಪರೀಕ್ಷೆ ಬರೆದಿದ್ದ 8619 ಮಕ್ಕಳಲ್ಲಿ 7606 ಮಕ್ಕಳು ಉತ್ತೀರ್ಣರಾಗಿದ್ದು, ಶೇ.80.82 ಫಲಿತಾಂಶ ತಂದಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 11,245 ಮಕ್ಕಲ್ಲಿ 7214 ಮಕ್ಕಳು ಉತ್ತೀರ್ಣರಾಗಿ, ಶೇ.64.15 ಫಲಿತಾಂಶಕ್ಕೆ ಕಾರಣರಾಗಿದ್ದಾರೆ.

- - - * ನಗರ ಮಕ್ಕಳ ಮೇಲುಗೈ ಗ್ರಾಮೀಣ ಪ್ರದೇಶದ ಮಕ್ಕಳಿಗಿಂತ ನಗರ ಪ್ರದೇಶದ ಮಕ್ಕಳು ಉತ್ತಮ ಫಲಿತಾಂಶ ತಂದಿದ್ದಾರೆ. ನಗರ ಪ್ರದೇಶದ 8024 ಮಕ್ಕಳು ಪರೀಕ್ಷೆ ಬರೆದಿದ್ದು, 6230 ಮಕ್ಕಳು ಉತ್ತೀರ್ಣರಾಗಿ, ಶೇ.77.64 ಫಲಿತಾಂಶ ತಂದಿದ್ದಾರೆ. ಗ್ರಾಮೀಣ ಪ್ರದೇಶದ 12,578 ಮಕ್ಕಳಲ್ಲಿ 9072ಮಕ್ಕಳು ತೇರ್ಗಡೆಯಾಗಿ, ಶೇ.72.13 ಫಲಿತಾಂಶ ತಂದಿದ್ದಾರೆ.

- - -

* 36 ಶಾಲೆಗೆ ಶೇ.100 ಫಲಿತಾಂಶ

ದಾವಣಗೆರೆ ಜಿಲ್ಲೆಯ 36 ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. 9 ಸರ್ಕಾರಿ ಶಾಲೆಗಳು ಸೇರಿದಂತೆ ಜಿಲ್ಲೆಯ ಒಟ್ಟು 36 ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. 26 ಅನುದಾನ ರಹಿತ ಮತ್ತು 1 ಅನುದಾನರಹಿತ ಶಾಲೆಗೆ ಶೇ.100 ಫಲಿತಾಂಶ ಬಂದಿದೆ.

- - - ಮೂರು ಖಾಸಗಿ ಶಾಲೆ ಸಾಧನೆ ಶೂನ್ಯ ಜಿಲ್ಲೆಯ ಮೂರು ಖಾಸಗಿ ಶಾಲೆಗಳಿಗೆ ಶೂನ್ಯ ಫಲಿತಾಂಶ ಲಭಿಸಿದೆ. ದಾವಣಗೆರೆ ನಗರದ ಭಾರತ್ ಕಾಲನಿಯ ನೇತಾಜಿ ಸುಭಾಶ್ಚಂದ್ರ ಪ್ರೌಢಶಾಲೆ, ಎಸ್ಸೆಸ್ ಬಡಾವೆಯ ಶ್ರೀ ರಾಘವೇಂದ್ರ ವಿದ್ಯಾನಿಕೇತನ ಶಾಲೆ, ಹೊನ್ನಾಳಿ ತಾಲೂಕು ಸಾಸ್ವೇಹಳ್ಳಿಯ ಎಡಿವಿಎಸ್ ಶಾಲೆಯ ಯಾವೊಬ್ಬ ವಿದ್ಯಾರ್ಥಿಯೂ ತೇರ್ಗಡೆಯಾಗಿಲ್ಲ. ಜಿಲ್ಲೆಯ 47 ಶಾಲೆಗಳಿಗೆ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಲಭಿಸಿದೆ. ಈ ಪೈಕಿ 8 ಸರ್ಕಾರಿ ಶಾಲೆಗಳಾದರೆ, 33 ಅನುದಾನಿತ ಹಾಗೂ 6 ಅನುದಾನ ರಹಿತ ಶಾಲೆಗಳೆಂಬುದು ವಿಶೇಷ.

- - -

ಬಾಕ್ಸ್‌

* ಶೂನ್ಯ, ಕಡಿಮೆ ಫಲಿತಾಂಶ ಶಾಲೆಗಳಿಗೆ ನೋಟೀಸ್

- ಫಲಿತಾಂಶ ಕುಸಿತ ಕಂಡ ಶಾಲೆಗಳ ಅಧಿಕಾರಿಗಳಿಂದ ದತ್ತು: ಡಿಡಿಪಿಐ ಕೊಟ್ರೇಶ

ಕನ್ನಡಪ್ರಭ ವಾರ್ತೆ, ದಾವಣಗೆರೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.40ಕ್ಕಿಂತ ಕಡಿಮೆ ಹಾಗೂ ಶೂನ್ಯ ಫಲಿತಾಂಶ ಬಂದ ಒಟ್ಟು 50 ಶಾಲೆಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೊಟ್ರೇಶ ಹೇಳಿದರು.

ನಗರದ ಸಾಶಿಇ ಉಪ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಸುಧಾರಣೆಗೆ ರಾತ್ರಿ ಪಾಠ ಸೇರಿದಂತೆ ಹತ್ತುಹಲವು ಪ್ರಯೋಗ ಮಾಡಿದರೂ, ಜಿಲ್ಲೆಯ ಫಲಿತಾಂಶ ಕಳೆದ ಸಾಲಿಗೆ ಹೋಲಿಸಿದರೆ ತುಂಬಾ ಕುಸಿತ ಕಂಡಿದೆ. ಇದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದರು.

ಫಲಿತಾಂಶ ಸುಧಾರಣೆಗೆ ಕೇವಲ ಇಲಾಖೆ ಮತ್ತು ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ. ಮಕ್ಕಳ ಪರಿಶ್ರಮವೂ ಇರಬೇಕು. ಪಾಲಕರ ಪಾಲ್ಗೊಳ್ಳುವಿಕೆಯೂ ಅತಿ ಮುಖ್ಯವಾಗುತ್ತದೆ. ಸತತವಾಗಿ ಮೊಬೈಲ್, ಟಿವಿ ನೋಡುವುದು, ನಿರಂತರ ಅಧ್ಯಯನ ಇಲ್ಲದಿರುವುದು, ಪರೀಕ್ಷಾ ಸಮಯದಲ್ಲಿ ಸರಿಯಾಗಿ ಆರಂಭವಾಗುವ ಐಪಿಎಲ್‌ ಕ್ರಿಕೆಟ್ ಪಂದ್ಯಾವಳಿ ಹೀಗೆ ನಾನಾ ಕಾರಣಗಳು ಮಕ್ಕಳ ಗಮನ ಬೇರೆಡೆ ಸೆಳೆಯುತ್ತಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.

ಅನುದಾನಿತ ಶಾಲೆಗಳಲ್ಲಿ ಕಳೆದ ಅನೇಕ ವರ್ಷಗಳಿಂದಲೂ ಶೇ.70ರಷ್ಟು ಬೋಧಕರ ಹುದ್ದೆಗಳು ಖಾಲಿ ಇವೆ. ಇದೆಲ್ಲವೂ ಗಂಭೀರ ಸಮಸ್ಯೆಗಳೇ ಆಗಿವೆ. ಇಂತಹವುಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳನ್ನು ಇಲಾಖೆಯ ಅಧಿಕಾರಗಳೇ ದತ್ತು ಪಡೆದು, ಮುಂದಿನ ಸಲವಾದರೂ ಫಲಿತಾಂಶ ಸುಧಾರಣೆಗೊಳ್ಳಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಾಶಿಇ ಉಪ ನಿರ್ದೇಶಕ ಕೊಟ್ರೇಶ್ ಸ್ಪಷ್ಟಪಡಿಸಿದರು.

- - - -9ಕೆಡಿವಿಜಿ19, 20: ಜಿ.ಕೊಟ್ರೇಶ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ