ಕನ್ನಡಪ್ರಭ ವಾರ್ತೆ ಮೈಸೂರು
ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕಾದರೆ, ಮೊದಲಿಗೆ ಶಿಕ್ಷಣದಿಂದ ಹೊರಗುಳಿದವರ ಸಮಸ್ಯೆ ಬಗೆಹರಿಸಬೇಕು, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಬಗೆಹರಿಸಲು ಪ್ರಯತ್ನಿಸಬೇಕು ಹಾಗೂ ಆದಷ್ಟು ಉತ್ತಮ ಶಿಕ್ಷಣ ಪಡೆಯಲು ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಚಂಢೀಗಡ ವಿವಿ ಕುಲಪತಿ ಪ್ರೊ. ಡಾ.ಮನ್ ಪ್ರೀತ್ ಸಿಂಗ್ ಮನ್ನಾ ಹೇಳಿದರು.ನಗರದ ಬನ್ನಿಟಪದ ಸೆಂಟ್ ಫಿಲೋಮಿನಾ ಕಾಲೇಜು ( ಸ್ವಾಯುತ್ತ) ವತಿಯಿಂದ ಶನಿವಾರ ಏರ್ಪಡಿಸಿದ್ದ 11ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ 406 ಪದವಿ, 183 ಸ್ನಾತಕೋತ್ತರ, ಹೆಚ್ಚು ಅಂಕಗಳಿಸಿದ 34 ಪದವಿಧರರು ಮತ್ತು 11 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪದವಿ ಪ್ರದಾನ ನೆರವೇರಿಸಿ ಅವರು ಮಾತನಾಡಿದರು.ದೇಶದಲ್ಲಿ ಯುವಶಕ್ತಿ ಸೃದೃಢವಾಗಿದ್ದು, ತಂತ್ರಜ್ಞಾನದಲ್ಲಿ ಭಾರತವು ದೇಶದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಕಾಲ ದೂರವಿಲ್ಲ. ಯುವ ತಲೆಮಾರು ಹೆಚ್ಚು ಕ್ರಿಯಾಶೀಲವಾಗುವ ಮೂಲಕ ಭಾರತವನ್ನು ಇನ್ನೊವೇಟಿವ್ ಹಬ್ ಆಗಿ ರೂಪಿಸಬೇಕು ಎಂದರು.
ಓದುವ ವೇಳೆ ಯಾರು ಸುಖವನ್ನು ಅಪೇಕ್ಷಿಸುತ್ತಾರೋ ಅವರು ಎಂದಿಗೂ ಜೀವನದಲ್ಲಿ ಏಳಿಗೆ ಹೊಂದಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನಕ್ಕೆ ಆಲಸ್ಯ ಒಳ್ಳೆಯದಲ್ಲ. ತನ್ನ ಇರುವಿಕೆಯನ್ನು ಜಗತ್ತಿಗೆ ತೋರಬೇಕಾದರೆ ಪ್ರಾಮಾಣಿಕ ಪ್ರಯತ್ನ ಹಾಕಲೇಬೇಕು. ವಿನಯಶೀಲರಾಗಿ ತನ್ನ ಕಾರ್ಯದಲ್ಲಿ ಮುನ್ನಡೆದರೆ ಮನ್ನಣೆ ಬೆಳಕಾಗಿ ಬೆನ್ನಿಗಿರುತ್ತದೆ ಎಂದು ಅವರು ಸಲಹೆ ನೀಡಿದರು.ನೀವು ಯಾವ ದೇಶಕ್ಕೆ ಹೋದರೂ ನಿಮ್ಮ ನಡವಳಿಕೆ ಶಿಸ್ತು ನಿಮ್ಮ ಕಾಲೇಜಿನ ಘನತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಅದರ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಪದವಿ ಎಂಬುದು ನಿಮ್ಮ ಕಲಿಕೆಯ ಅಂತ್ಯವಲ್ಲ, ಅದೊಂದು ಹಂತ ಮಾತ್ರ. ಆದ್ದರಿಂದ ಪ್ರತಿಯೊಬ್ಬರೂ ಸದಾ ತಮ್ಮ ಜ್ಞಾನ ಅಭಿವೃದ್ಧಿಪಡಿಸಿಕೊಳ್ಳಲು ಪುಸ್ತಕ ಓದುವುದರೊಂದಿಗೆ, ಪತ್ರಿಕೆಗಳು, ವಾರ್ತೆಗಳು ಮತ್ತು ಇತರ ಮಾಹಿತಿ ಕಲೆ ಹಾಕುತ್ತಾ ತಮ್ಮ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಣದಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ ತುಂಬಾ ಮುಖ್ಯವಾಗಿದ್ದು ನಾನು ಕೂಡ ಕನ್ನಡ ಮಾತಾನಾಡುತ್ತೇನೆ. ಕರ್ನಾಟಕದ ಮೇಲೆ ತುಂಬಾ ಪ್ರೀತಿ ಇದೆ ಅದರಿಂದ ನನಗೆ ತುಂಬಾ ಖುಷಿಯಾಗುತ್ತಿದೆ. ನಾನು ಕೂಡ ಮಂಡ್ಯ ಪಿ.ಇ.ಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು ನಾನು ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದು ಹೇಳುವುದಕ್ಕೆ ಹೆಮ್ಮೆ ಎನಿಸುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳಾದ ನೀವು ಎಲ್ಲೇ ಹೋದರು ಮೊದಲು ನೀವು ಓದಿದಂತಹ ಶಾಲೆ ಹಾಗೂ ಗುರುಗಳನ್ನು ನೆನಪಿಸಿಕೊಳ್ಳುತ್ತ ನಿಮ್ಮ ಮನೆಯಲ್ಲಿ ಯಾವ ಕಾರ್ಯಕ್ರಮ ಮಾಡಲಿ ಅಥವಾ ನೀವು ಸಾಧನೆ ಮಾಡಿದ ನಂತರವೂ ಅವರನ್ನು ಭೇಟಿ ಮಾಡಿದರೆ ಅವರಿಗೆ ನಾವು ನೀಡುವ ಕೃತಜ್ಞತೆ ಎಂದು ಅವರು ತಿಳಿಸಿದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ ಕಲಿಕೆಯೊಂದಿಗೆ ಶಿಸ್ತು, ದೇಶಾಭಿಮಾನ, ಸಾಮರಸ್ಯದ ಬದುಕು, ರೂಢಿಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಸಮಾಜದಲ್ಲಿ ಸಭ್ಯ ನಾಗರಿಕರಾಗಿ ಎಂದರು.
ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವ ಅಗತ್ಯತೆ ಇಲ್ಲ. ಸದುದ್ದೇಶದಿಂದ ಕೂಡಿದ ನಿರಂತರ ಪ್ರಯತ್ನ ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸಾಧ್ಯತೆಗಳಿರುತ್ತದೆ. ನಮಗಿರುವ ಸೌಕರ್ಯ, ಅರ್ಹತೆ ಹಾಗೂ ಶಕ್ತಿಯನ್ನು ಬಳಸಿಕೊಂಡು ಮುನ್ನಡೆ ಸಾಧಿಸಬೇಕು ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಫಾದರ್ ಗಳಾದ ಡಾ. ಲೂರ್ದ್ ಪ್ರಸಾದ್, ಜ್ಞಾನ ಪ್ರಗಾಸಂ, ಎಸ್. ಡೇವಿಡ್ ಸಾಗಯರಾಜ್, ಪ್ರಾಂಶುಪಾಲ ಡಾ. ರವಿ ಜೆ.ಡಿ ಸಲ್ಡಾನ್ಹಾ, ಉಪ ಪ್ರಾಂಶುಪಾಲ ರೋನಾಲ್ಡ್ ಪ್ರಕಾಶ್ ಕುಟಿನ್ಹಾ, ಪ್ರೊ. ನಾಗರಾಜ್ ಅರಸ್, ಸಂಯೋಜಕ ಪ್ರೊ. ಥಾಮಸ್ ಎ. ಗುಣಸೀಲನ್, ಡಾ. ನೂರ್ ಮುಬಾಷೀರ್, ಲಿಡಿಯಾ ಅಂಜಲಿ, ಡಾ. ರೀನಾ ಫ್ರಾನ್ಸಿಸ್ ಮೊದಲಾವರು ಇದ್ದರು.