ಲೋಕಸಭಾ ಚುನಾವಣೆ ಬಳಿಕ ಕಾಡುಗೊಲ್ಲರಿಗೆ ಎಸ್ ಟಿ ಮೀಸಲಾತಿ: ದೇವೇಗೌಡ

KannadaprabhaNewsNetwork | Published : Feb 14, 2024 2:16 AM

ಸಾರಾಂಶ

ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದ ಸಹಮತ ಇದೆ. ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇಡಿ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಿರಿಯೂರು

ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದ ಸಹಮತ ಇದೆ. ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇಡಿ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಭರವಸೆ ನೀಡಿದರು.

ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಹಿರಿಯೂರು, ಚಿತ್ರದುರ್ಗ, ತುಮಕೂರು, ಚಿಕ್ಕನಾಯಕನಹಳ್ಳಿ, ಶಿರಾ ಮುಂತಾದ ಭಾಗಗಳ ಮುಖಂಡರ ಜೊತೆ ನಡೆದ ಸಭೆಯಲ್ಲಿ ಮಾತನಾಡಿ, ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಣ್ಣ ಜನಾಂಗದ ಸ್ಥಿತಿಗತಿ ಅರಿತುಕೊಂಡು ಸಮುದಾಯಕ್ಕೆ ನ್ಯಾಯ ಕೊಡಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾರವರಿಗೆ ಪತ್ರ ಬರೆದು ಭೇಟಿ ಮಾಡಿ ಮಾತುಕತೆ ನಡೆಸಿ ಕೈಮುಗಿದು ಮನವಿ ಮಾಡಲಾಗಿದೆ. ಮನವಿಗೆ ಸ್ಪಂದಿಸಿದ ಪ್ರಧಾನಿ ಹಾಗೂ ಗೃಹ ಸಚಿವರು ಕಾಡುಗೊಲ್ಲರಿಗೆ ನ್ಯಾಯ ಒದಗಿಸಲಾಗುವುದೆಂದು ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.ನಿಮಗೆ ಮೀಸಲಾತಿ ದೊರಕಿಸಲು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು, ಎಂಎಲ್‌ಸಿ ತಿಪ್ಪೇಸ್ವಾಮಿ ಅವರ ಶ್ರಮ ಸಾಕಷ್ಟಿದ್ದು ನನಗೆ ಸಮುದಾಯದ ವಿಚಾರಗಳನ್ನು ಎಳೆ ಎಳೆಯಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ನಿಮಗೆ ಪ್ರತಿಫಲ ಸಿಗುತ್ತದೆ ಎಂದು ಸಮುದಾಯಕ್ಕೆ ಧೈರ್ಯ ತುಂಬಿದರು.ರಾಜ್ಯದಲ್ಲಿರುವ ಅತ್ಯಂತ ತುಂಬಾ ಹಿಂದುಳಿದಿರುವ ಹಾಗೂ ಸಂಕಷ್ಟಕ್ಕೆ ಸಿಲುಕಿರುವ ಬುಡಕಟ್ಟು ಕಾಡುಗೊಲ್ಲ ಜನಾಂಗದವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯಸಭೆಯಲ್ಲಿ ಸಮುದಾಯದ ಪರವಾಗಿ ಧ್ವನಿ ಎತ್ತಲಾಯಿತು. ಕೈ ಮುಗಿದು ಕಳಕಳಿಯಿಂದ ಮನವಿ ಮಾಡಿದೆ. ಈ ವಿಷಯ ಚರ್ಚೆ ಆಗಬೇಕಾಯಿತು. ಆದರೆ ಸದನದಲ್ಲಿ ಕೇಂದ್ರ ಸರ್ಕಾರದ ಸಾಧನೆಯ ಶ್ರೀರಾಮ ಮಂದಿರ ನಿರ್ಮಾಣ, ಸರ್ಕಾರದ ಸಾಧನೆಯ ಬಗ್ಗೆ ಶ್ವೇತಪತ್ರ ಹೊರಡಿಸಿದ್ದರು. ಇದಕ್ಕೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಪ್ಪುಪತ್ರ ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಎಸ್ ಟಿ ವಿಚಾರ ಚರ್ಚೆಗೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಲೋಕಸಭಾ ಚುನಾವಣೆ ಮುನ್ನ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಕಾಡುಗೊಲ್ಲರ ಮನೆಯಲ್ಲಿ ಊಟ ಮಾಡಿಕೊಂಡು ಬರುತ್ತೇನೆ. ಚುನಾವಣೆ ಮುಗಿದ ಬಳಿಕ ನಿಮಗೆ ಎಸ್‌ಟಿ ಭಾಗ್ಯ ದೊರೆಯಲಿದೆ. ಮೇನಲ್ಲಿ ಚುನಾವಣೆ ಮುಗಿದ ನಂತರ ಮತ್ತೆ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನನಗೆ ಸಂಪೂರ್ಣ ವಿಶ್ವಾಸವಿದೆ. ನಾನು ಕೊಟ್ಟ ಮಾತು ತಪ್ಪುವುದಿಲ್ಲ. ನಾನು ಇನ್ನೂ ಎರಡೂವರೆ ವರ್ಷ ಬದುಕೀರುತ್ತೇನೆ. ನನ್ನ ಮೇಲೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸಂಪೂರ್ಣ ನಂಬಿಕೆ ಇಡಿ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಎಂಎಲ್ ಸಿ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ. ಯಶೋಧರ್ , ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಮೀನಾಕ್ಷಿ ನಂದೀಶ್ ಮುಖಂಡರಾದ ಎನ್.ಆರ್. ಲಕ್ಷ್ಮೀಕಾಂತ್, ನರಸಿಂಹಮೂರ್ತಿ, ಕೇಂದ್ರ ಸಚಿವರ ಆಪ್ತ ಸಹಾಯಕ ಉಮೇಶ್, ಗಾಯಕ ಮೋಹನ್ ಕುಮಾರ್, ಎಂ. ಜಯಣ್ಣ, ವಕೀಲ ಶಿವಶಂಕರ್, ಗಂಗಾಧರ್, ಮಲ್ಲಿಕಾರ್ಜುನ್, ಬೋರಪ್ಪ ಹಾಗೂ ತುಮಕೂರು, ಚಿತ್ರದುರ್ಗ ಸೇರಿದಂತೆ ವಿವಿಧ ಭಾಗಗಳ ಹಲವರು ಹಾಜರಿದ್ದರು. -----ಕೋಟ್‌---------

ಬಿಜೆಪಿ ಜೊತೆ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿದ್ದು, ಎರಡು ಪಕ್ಷಗಳು ಚುನಾವಣೆಯನ್ನು ಒಟ್ಟಿಗೆ ಎದುರಿಸಲಿವೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ನಮ್ಮ ಜೊತೆಯಲ್ಲಿರಿ. ನಿಮಗೆ ನ್ಯಾಯ ಸಿಗಲಿದೆ.- ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ

Share this article